»   » ಚಿತ್ರೀಕರಣ ಸುದ್ದಿ ಪ್ರಸಾರಕ್ಕೆ ಚಾನಲ್‌ಗಳಿಗೆ ಶುಲ್ಕ

ಚಿತ್ರೀಕರಣ ಸುದ್ದಿ ಪ್ರಸಾರಕ್ಕೆ ಚಾನಲ್‌ಗಳಿಗೆ ಶುಲ್ಕ

Posted By: Super
Subscribe to Filmibeat Kannada

ರಾಮೋಜಿರಾವ್‌ ಕೃಪಾ ಪೋಷಿತ ಮಂಡಳಿಯ 'ಈ ಟಿವಿ" ತನ್ನ ನೆಲೆ ಭದ್ರ ಪಡಿಸಿಕೊಳ್ಳುತ್ತಿದ್ದಂತೆಯೇ, 'ಉದಯ"ದ ವ್ಯಾಪ್ತಿ ಇನ್ನಷ್ಟು ಹೆಚ್ಚಾಗುತ್ತಿದ್ದಂತೆಯೇ- ಚಾನಲ್‌ಗಳಿಗೆ ನಿಯಂತ್ರಣ ಹಾಕುವ ಕುರಿತು 'ಕನ್ನಡ ಚಿತ್ರ ನಿರ್ಮಾಪಕರ ಸಂಘ" ಆಲೋಚಿಸುತ್ತಿದೆ. ಬಸಂತ ಕುಮಾರ್‌ ನಿರ್ಮಾಪಕರ ಸಂಘದ ಅಧ್ಯಕ್ಷರಾದ ನಂತರ ಸಂಘದ ಇನ್ನೊಂದು ಬಿರುಸು ಹೆಜ್ಜೆಯಿದು.

ಚಾನಲ್‌ಗಳಲ್ಲಿ ಪ್ರಸಾರವಾಗುವ ಸಿನಿಮಾ ಆಧಾರಿತ ಕಾರ್ಯಕ್ರಮಗಳಿಗೆ ಶುಲ್ಕವನ್ನು ವಿಧಿಸುವ ಯೋಚನೆ ನಿರ್ಮಾಪಕರ ಸಂಘದ ತಲೆ ಹೊಕ್ಕಿದೆ. ಇನ್ನು ಮುಂದೆ ಸ್ಟುಡಿಯೋ ಚಿತ್ರೀಕರಣಗಳ ಸುದ್ದಿ ಪ್ರಸಾರ ಮಾಡಲು ಚಿತ್ರವೊಂದಕ್ಕೆ ಎರಡು ಲಕ್ಷ ರುಪಾಯಿಗಳನ್ನು ನೀಡುವಂತೆ ಚಾನಲ್‌ಗಳನ್ನು ನಿರ್ಮಾಪಕರ ಸಂಘ ಕೇಳಿದೆ. ಚಾನಲ್‌ಗಳ ಪ್ರತಿಕ್ರಿಯೆ ಇನ್ನೂ ವ್ಯಕ್ತವಾಗಿಲ್ಲ . ಪ್ರತಿಕ್ರಿಯಿಸಲು 10 ದಿನಗಳ ಸಮಯವನ್ನು ನಿರ್ಮಾಪಕರ ಸಂಘ ನೀಡಿದೆ.

ಸಾಧಾರಣ ಎನ್ನುವ ಸಿನಿಮಾಗಳು ಚಾನಲ್‌ಗಳ ಪ್ರಚಾರದ ಮೂಲಕ ಗಳಿಕೆಯನ್ನು ವೃದ್ಧಿಸಿಕೊಂಡಿರುವ ಉದಾಹರಣೆಗಳನ್ನು ನಿರ್ಮಾಪಕರ ಸಂಘ ಗಮನಿಸಿದೆ. ನಾಗತಿಹಳ್ಳಿಯವರ 'ನನ್ನ ಪ್ರೀತಿಯ ಹುಡುಗಿ", ರಾಮೋಜಿರಾವ್‌ರ 'ಚಿತ್ರ" ಮುಂತಾದ ಸಿನಿಮಾಗಳ ಯಶಸ್ಸಿನಲ್ಲಿ ಚಾನಲ್‌ಗಳ ಪಾತ್ರ ದೊಡ್ಡದು. ಅದೇ ರೀತಿ ಆರಂಭದಲ್ಲೇ ಮುಗ್ಗರಿಸಿದ 'ಶ್ರೀ ಮಂಜುನಾಥ"ನ ಚೇತರಿಕೆಗೆ ಚಾನಲ್‌ಗಳು ನೆರವಾದವು ಅನ್ನುವವರೂ ಇದ್ದಾರೆ. ಆದ್ದರಿಂದ ಚಿತ್ರದ ಟ್ರೇಲರ್‌ಗಳನ್ನು ಉಚಿತವಾಗಿ ಪ್ರದರ್ಶಿಸುವಂತೆ ನಿರ್ಮಾಪಕರ ಸಂಘ ಚಾನಲ್‌ಗಳನ್ನು ಕೇಳಿದೆ.

ಈ ಟಿವಿಗೆ ಛೀಮಾರಿ
'ಸುಪಾರಿ" ಕನ್ನಡ ಚಿತ್ರವನ್ನು ಈ ಟಿವಿ ಕಟುವಾಗಿ ವಿಮರ್ಶಿಸಿರುವುದನ್ನು ನಿರ್ಮಾಪಕರ ಸಂಘ ಆಕ್ಷೇಪಿಸಿದೆ. ಈಗಾಗಲೇ ಬೆದರುಗೊಂಬೆಯ ಮೇಲೆ ನಿಂತಿರುವ ನಿರ್ಮಾಪಕರು ಇಂತಹ ವಿಮರ್ಶೆಯಿಂದ ಮತ್ತಷ್ಟು ಕುಸಿಯುತ್ತಾರೆಂಬುದು ನಿರ್ಮಾಪಕರ ಸಂಘದ ಆತಂಕ. ಅಂದಮೇಲೆ, ಮಾಧ್ಯಮಗಳ ವಿಮರ್ಶನ ಶಕ್ತಿಯನ್ನೂ ನಿರ್ಮಾಪಕರ ಸಂಘ ಪ್ರತಿಬಂಧಿಸುತ್ತಿದೆ ಎಂದಾಯಿತು !

English summary
Can TV Channels review kannada movies honestly ? No, says Producers association

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada