ಇಂಡಿಯಾದಲ್ಲೇ ಮಾಡಿರದ ಸಿನಿಮಾ ಮಾಡುತ್ತೇನೆ; ಗೊಂದಲ ಸೃಷ್ಟಿಸಿದ ಸುದೀಪ್ ಜೊತೆಗೆ ಪ್ರೇಮ್ ಸಿನಿಮಾ ಟ್ವೀಟ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ನಿರ್ದೇಶಕ ಜೋಗಿ ಪ್ರೇಮ್ ಸಿನಿಮಾ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಕೇಳಿಬರುತ್ತಿದೆ. ದಿ ವಿಲನ್ ಬಳಿಕ ಮತ್ತೆ ಕಿಚ್ಚನ ಜೊತೆ ಸಿನಿಮಾ ಮಾಡುವುದಾಗಿ ಸ್ವತಃ ಪ್ರೇಮ್ ಸಹ ಹೇಳಿಕೊಂಡಿದ್ದರು.
Recommended Video
ಆದರೆ ಇಲ್ಲಿವರೆಗೂ ಇವರ ಕಾಂಬಿನೇಷನ್ ನ ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ಇರಲಿಲ್ಲ. ಪ್ರೇಮ್ ಸದ್ಯ ಏಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಏಕ್ ಲವ್ ಯಾ ರಿಲೀಸ್ ಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಪ್ರೇಮ್, ಸುದೀಪ್ ಅವರಿಗೆ ಸಿನಿಮಾ ಮಾಡುವ ಬಗ್ಗೆ ಸದ್ಯದಲ್ಲೇ ಮಾಹಿತಿ ಬಹಿರಂಗ ಪಡಿಸಲಿದ್ದಾರೆ ಎನ್ನುವ ವಿಚಾರ ವೈರಲ್ ಆಗಿದೆ.

ಪ್ರೇಮ್ ಹೆಸರಿನ ಖಾತೆಯಿಂದ ಬಂದ ಟ್ವೀಟ್
ಪ್ರೇಮ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ಬಂದ ಈ ಸುದ್ದಿ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿದೆ. ಇಂದು ಬೆಳಗ್ಗೆ ಪ್ರೇಮ್ ಹೆಸರಿನ ಟ್ವಿಟ್ಟರ್ ಖಾತೆಯಿಂದ, 'ನನ್ನ ಮತ್ತು ಸುದೀಪ್ ಅವರ ಕಾಂಬಿನೇಷನ್ ಅಲ್ಲಿ ಬರುತ್ತಿರುವ #NewAvatarSoon ಚಿತ್ರದ ಬಗ್ಗೆ ಒಂದು ಮುಖ್ಯವಾದ ಸುದ್ದಿ ಕೆಲವೇ ದಿನಗಳಲ್ಲಿ ತಿಳಿಸುತ್ತೇನೆ. ಇಂಡಿಯಾದಲ್ಲೆ ಮಾಡದ ಸಿನಿಮಾವನ್ನು ನಾನು ಮಾಡಲು ಹೊರಟಿದ್ದೇನೆ, ದಯವಿಟ್ಟು ನಿಮ್ಮ ಪ್ರೀತಿ ನಮ್ಮ ಮೇಲೆ ಸದಾ ಇರಲಿ' ಎಂದು ಟ್ವೀಟ್ ಮಾಡಿದ್ದಾರೆ.

ಅಭಿಮಾನಿಗಳ ಪ್ರತಿಕ್ರಿಯೆ
ಇದನ್ನು ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ. ಕೆಲವರು ಸಂತಸ ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಪ್ರೇಮ್ ಕಾಲೆಳೆಯಲು ಪ್ರಾರಂಭಿಸಿದರು. ಇದರ ಬೆನ್ನಲ್ಲೇ ನಿಜಕ್ಕೂ ಪ್ರೇಮ್ ಹೀಗೆ ಟ್ವೀಟ್ ಮಾಡಿದ್ದಾರಾ? ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ.

ನಕಲಿ ಖಾತೆಯಿಂದ ಬಂದ ಟ್ವೀಟ್
ಬಳಿಕ ಇದರ ಅಸಲಿ ಕಥೆ ಬಹಿರಂಗವಾಗಿದೆ. ಇದು ಪ್ರೇಮ್ ಅಸಲಿ ಟ್ವಿಟ್ಟರ್ ಖಾತೆಯಿಂದ ಬಂದ ಟ್ವೀಟ್ ಅಲ್ಲ ಎನ್ನುವ ಸತ್ಯ ಹೊರಬಿದ್ದಿದೆ. ಪ್ರೇಮ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಯಾರೋ ಕಿಡಿಗೇಡಿಗಳು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಭಿಮಾನಿಗಳ ನಿರಾಸೆ
ಇದು ಪ್ರೇಮ್ ಟ್ವೀಟ್ ಅಲ್ಲ ಎಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಬಗ್ಗೆ ಪ್ರೇಮ್ ಆಗಲಿ ಅಥವಾ ಸುದೀಪ್ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಈ ಟ್ವೀಟ್ ನೋಡಿ ಪ್ರೇಮ್ ಪ್ರತಿಕ್ರಿಯೆ ಏನಿರಲಿದೆ ಎನ್ನುವುದು ಸದ್ಯದ ಕುತೂಹಲ.


Click it and Unblock the Notifications











