ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಅನಿರುದ್ಧ್ ಜತ್ಕರ್ ತಿರುಗೇಟು
ತಮಿಳುನಾಡು ಮಾಜಿ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮತ್ತೊಮ್ಮೆ ಸನಾತನ ಧರ್ಮದ ಬಗ್ಗೆ ಮಾತನಾಡಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ಟಿವಿಕೆ ವಿಜಯ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಡಿಎಂಕೆ ಪಕ್ಷ ಸೋಲುಂಡು ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವಂತಾಗಿದೆ. ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಉದಯನಿಧಿ ಅಲಂಕರಿಸಿದ್ದಾರೆ.
ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ತಮಿಳುನಾಡು ವಿಧಾನಸಭೆ ಅಧಿವೇಶನ ಶುರುವಾಗಿದೆ. ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ಉದಯನಿಧಿ ಸ್ಟಾಲಿನ್ ಮೊದಲ ಭಾಷಣ ಮಾಡಿದ್ದಾರೆ. ಸಿಎಂ ವಿಜಯ್‌ಗೆ ಕೌಂಟರ್ ಕೊಟ್ಟು ಮಾತನಾಡಿರುವ ಅವರು ಭಾಷಣದ ಕೊನೆಯಲ್ಲಿ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಾರೆ. 'ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು' ಹೇಳಿದ್ದಾರೆ. ಈ ವಿಚಾರ ಈಗ ವಿವಾದ ಹುಟ್ಟಾಕ್ಕಿದ್ದು ಉದಯನಿಧಿ ಸ್ಟಾಲಿನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

3 ವರ್ಷಗಳ ಹಿಂದೆ ತಮಿಳುನಾಡು ಸರ್ಕಾರದಲ್ಲಿ ಸಚಿವರಾಗಿದ್ದ ಸಮಯದಲ್ಲಿ ಕೂಡ ಸನಾತನ ಧರ್ಮದ ಬಗ್ಗೆ ನಾಲಿಗೆ ಹರಿಬಿಟ್ಟು ಉದಯನಿಧಿ ಎಡವಟ್ಟು ಮಾಡಿಕೊಂಡಿದ್ದರು. ಈಗ ಮತ್ತೆ ಅದೇ ತಪ್ಪು ಮಾಡಿದ್ದಾರೆ. ತಮಿಳು ನಟಿ ಕಸ್ತೂರಿ ಹಾಗೂ ಕನ್ನಡ ನಟ ಅನಿರುದ್ಧ್ ಜತ್ಕರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಿರುಗೇಟು ನೀಡಿದ್ದಾರೆ.
"ಉದಯನಿಧಿ ಸ್ಟಾಲಿನ್ ಸರ್, ಇಂದು ನೀವು ಮತ್ತೆ, 'ಜನರನ್ನು ವಿಭಜಿಸಿದ ಸನಾತನವನ್ನು ನಿರ್ಮೂಲನೆ ಮಾಡಬೇಕು' ಎಂದು ಹೇಳಿದ್ದೀರಿ. ಶತಮಾನಗಳಿಂದ ಅಸ್ತಿತ್ವದಲ್ಲಿರುವ ಸನಾತನ ಪರಂಪರೆ, ಕಾಲಾನುಸಾರ ಅನೇಕ ಸಾಮಾಜಿಕ ಸುಧಾರಣೆಗಳನ್ನು ಸ್ವೀಕರಿಸುತ್ತಾ ಬಂದಿದೆ. ದಯವಿಟ್ಟು ಜನರ ಮನಸ್ಸಿನಲ್ಲಿ ನಕಾರಾತ್ಮಕತೆ ಅಥವಾ ವಿಭಜನೆಯ ಭಾವನೆಗಳನ್ನು ಹುಟ್ಟುಹಾಕುವ ಹೇಳಿಕೆಗಳನ್ನು ತಪ್ಪಿಸಿ. ಪರಸ್ಪರ ಗೌರವ ಮತ್ತು ರಚನಾತ್ಮಕ ಸಂವಾದವೇ ಸಮಾಜವನ್ನು ಉತ್ತಮ ದಿಕ್ಕಿನಲ್ಲಿ ಮುನ್ನಡೆಸುತ್ತದೆ" ಎಂದು ನಟ ಅನಿರುದ್ಧ್ ಜತ್ಕರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ವಸುಧೈವ ಕುಟುಂಬಕಂ' - 'ಇಡೀ ಜಗತ್ತೇ ಒಂದು ಕುಟುಂಬ' ಎಂಬ ವಿಶ್ವಮಾನವೀಯ ಚಿಂತನೆಯೂ ಸನಾತನ ಧರ್ಮದ ಆಂತರಿಕ ಮೌಲ್ಯಗಳಲ್ಲಿ ಒಂದಾಗಿದೆ ಎಂದು ಅನಿರುದ್ಧ್ ತಿಳಿ ಹೇಳಿದ್ದಾರೆ. ಇಂತಹ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಧೈರ್ಯ ಬೇಕು ಎಂದು ಕೆಲವರು ಅನಿರುದ್ಧ್ ಪೋಸ್ಟ್ ನೋಡಿ ಬೆಂಬಲ ಸೂಚಿಸಿದ್ದಾರೆ. ಅವರೊಟ್ಟಿಗೆ ದನಿಗೂಡಿಸಿದ್ದಾರೆ.
ನಟಿ ಕಸ್ತೂರಿ ಪ್ರತಿಕ್ರಿಯಿಸಿ "ಉದಯನಿಧಿ ಮತ್ತೆ ತಮ್ಮ ಅಗ್ಗದ ತಂತ್ರಗಳನ್ನು ಆರಂಭಿಸಿದ್ದಾರೆ. ವಿಧಾನಸಭೆಯಲ್ಲಿ ಸನಾತನ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಕರೆ ಕೊಟ್ಟಿದ್ದಾರೆ. ಇದರಲ್ಲಿ ಆಶ್ಚರ್ಯವೇನಿಲ್ಲ. ನಿಜವಾದ ಪ್ರಶ್ನೆ ಏನಂದ್ರೆ ಯಾರೂ ಸಹ ಈ ಬಗ್ಗೆ ಯಾಕೆ ಪ್ರತಿಕ್ರಿಯಿಸಲಿಲ್ಲ? ಟಿವಿಕೆ ಮತ್ತು ಎಡಿಎಂಕೆ ಶಾಸಕರು ಬಲವಾಗಿ ಆಕ್ಷೇಪಿಸಬೇಕಿತ್ತು. ವಿಜಯ್ ಮತ್ತು ಅವರ ತಂಡವು ಹಿಂದೂ ವಿರೋಧಿಗಳಲ್ಲ, ಜಾತ್ಯತೀತರು ಎಂದು ಸಾಬೀತುಪಡಿಸಬೇಕು" ಎಂದು ಟ್ವೀಟ್ ಮಾಡಿದ್ದಾರೆ.
2023ರಲ್ಲಿ ಕೂಡ ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. "ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಹಾಗೂ ಕರೋನಾದಂತೆ. ಅದನ್ನು ಬರೀ ವಿರೋಧಿಸುದಲ್ಲ, ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು" ಎಂದಿದ್ದರು. ಆಗ ವಿರೋಧ ವ್ಯಕ್ತವಾಗಿ ಕೆಲವೆಡೆ ಪ್ರತಿಭಟನೆ ನಡೆದು ದೂರು ಸಹ ದಾಖಲಾಗಿತ್ತು. ಸುಪ್ರೀಂ ಕೋರ್ಟ್ ಕೂಡ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಖಂಡಿಸಿತ್ತು.
ಉದಯನಿಧಿ ಸ್ಟಾಲಿನ್ ಸದನದಲ್ಲಿ ಹೀಗೆ ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡುತ್ತಿದ್ದಂತೆ ಅವರ ತಾಯಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೊಗಳು ವೈರಲ್ ಆಗ್ತಿದೆ. ಮಾರ್ಚ್ 8ರಂದು ತಮಿಳುನಾಡು ಮಾಜಿ ಸಿಎಂ ಎಂಕೆ ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಪ್ರತಿಕ್ರಿಯಿಸಿ ಮೊದಲು ನಿಮ್ಮ ಮನೆಯಲ್ಲಿ ಇದಕ್ಕೆ ಒಪ್ಪಿಸಪ್ಪ ಎಂದು ಉದಯನಿಧಿಗೆ ತಿರುಗೇಟು ನೀಡಿದ್ದಾರೆ.


Click it and Unblock the Notifications