Kaatera: ಯುಗಾದಿ ಹಬ್ಬಕ್ಕೆ 'ಕಾಟೇರ' ನಾಯಕಿ ಫಸ್ಟ್ ಲುಕ್: ಚಿತ್ರದಲ್ಲಿ ರಾಧನಾ ಪಾತ್ರ ಅದೇನಾ?
ಯುಗಾದಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಹಬ್ಬದ ಸಂಭ್ರಮದಲ್ಲಿ ಸಿನಿರಸಿಕರಿಗೆ ವಿವಿಧ ಚಿತ್ರತಂಡಗಳಿಂದ ಸ್ಪೆಷಲ್ ಗಿಫ್ಟ್‌ಗಳು ಕಾಯ್ತಿದೆ. 'ಕಾಟೇರ' ಚಿತ್ರತಂಡ ನಾಯಕಿಯ ದರ್ಶನ ಮಾಡಿಸುವುದಾಗಿ ಘೋಷಿಸಿದೆ. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಾಧನಾ ರಾಮ್ ನಟಿಸುತ್ತಿದ್ದಾರೆ. ತರುಣ್ ಸುಧೀರ್ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ.
ವರಲಕ್ಷ್ಮಿ ಹಬ್ಬದ ಸಂಭ್ರದದಲ್ಲಿ 'ಕಾಟೇರ' ಸಿನಿಮಾ ಸೆಟ್ಟೇರಿತ್ತು. 'D56' ಹೆಸರಿನಲ್ಲಿ ಶುರುವಾಗಿದ್ದ ಚಿತ್ರಕ್ಕೆ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕಾಟೇರ' ಎನ್ನುವ ಜಬರ್ದಸ್ತ್ ಟೈಟಲ್ ಫಿಕ್ಸ್ ಮಾಡಲಾಗಿತ್ತು. ಈಗಾಗಲೇ ರಾಕ್‌ಲೈನ್ ಸ್ಟುಡಿಯೋ, ಹೈದರಾಬಾದ್ ಹಾಗೂ ಕನಕಪುರದಲ್ಲಿ ಚಿತ್ರದ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಶೀಘ್ರದಲ್ಲೇ ಹೊಸ ಶೆಡ್ಯೂಲ್ ಪ್ಲ್ಯಾನ್ ಮಾಡುತ್ತಿದ್ದಾರೆ. ಇದೆಲ್ಲರ ನಡುವೆ ಚಿತ್ರದಲ್ಲಿ ನಾಯಕಿಯ ಲುಕ್ ರಿವೀಲ್ ಮಾಡುವುದಾಗಿ ನಿರ್ದೇಶಕ ತರುಣ್ ಸುಧೀರ್ ಘೋಷಿಸಿದ್ದಾರೆ. ಯುಗಾದಿ ಹಬ್ಬಕ್ಕೆ 'ಕಾಟೇರ'ನ ನಾಯಕಿ ಅವತಾರ ಅನಾವರಣವಾಗಲಿದೆ.

'ಕಾಟೇರ' ಚಿತ್ರದಲ್ಲಿ ನಿರ್ಮಾಪಕ ರಾಮು ಹಾಗೂ ನಟಿ ಮಾಲಾಶ್ರೀ ದಂಪತಿಯ ಮಗಳು ರಾಧನಾ ರಾಮ್ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇಯಿದೆ. ಇದು ಸೀದಾ ಸಾದಾ ಮರ ಸುತ್ತುವ ಪಾತ್ರವಲ್ಲ. ಬಹಳ ಮುಖ್ಯವಾದ ಪಾತ್ರದಲ್ಲಿ ರಾಧನಾ ನಟಿಸುತ್ತಿದ್ದಾರೆ. ಸದ್ಯ ನಾಯಕಿಯ ಕೈಗಳನ್ನು ಮಾತ್ರ ತೋರಿಸುತ್ತಾ ಯುಗಾದಿ ಹಬ್ಬಕ್ಕೆ ಫಸ್ಟ್‌ಲುಕ್‌ನ ರಿವೀಲ್ ಮಾಡುವುದಾಗಿ ಹೇಳಿದ್ದಾರೆ. ಅಂದಹಾಗೆ ಸಣ್ಣ ರಿವೀಲ್ ಆಗಿರೋ ಪೋಸ್ಟರ್‌ನಲ್ಲಿ ಖಾಕಿ ಸೀರೆಯಲ್ಲಿ ನಾಯಕಿ ಇರೋದು ನೋಡಿ ಲೇಡಿ ಪೊಲೀಸ್ ಕಾನ್ಸ್‌ಸ್ಟೇಬಲ್ ಪಾತ್ರದಲ್ಲಿ ರಾಧನಾ ನಟಿಸಿದ್ದಾರಾ? ಎನ್ನುವ ಅನುಮಾನವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳ ಕುತೂಹಲಕ್ಕೆ ಮಾರ್ಚ್ 22ರಂದು ಬೆಳಗ್ಗೆ 10 ಗಂಟೆಗೆ ಉತ್ತರ ಸಿಗಲಿದೆ.
ಹಂಪಿಯಲ್ಲಿ 70ರ ದಶಕದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ತರುಣ್ ಸುಧೀರ್ ಹಾಗೂ ಜಡೇಶ್ ಹಂಪಿ 'ಕಾಟೇರ' ಚಿತ್ರಕ್ಕೆ ಕಥೆ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹಣ, ಹರಿಕೃಷ್ಣ ಸಂಗೀತ ಈ ಚಿತ್ರಕ್ಕಿದೆ. ದರ್ಶನ್- ರಾಧನಾ ಬಿಟ್ಟರೆ ತೆಲುಗು ನಟ ಜಗಪತಿ ಬಾಬು ಚಿತ್ರದಲ್ಲಿ ನಟಿಸೋದು ಕನ್ಫರ್ಮ್ ಆಗಿದೆ. ಇನ್ನುಳಿದಂತೆ ಚಿತ್ರದ ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಬಹಳ ಅದ್ಧೂರಿಯಾಗಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. 70ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಕಸರತ್ತು ನಡೆಸುತ್ತಿದೆ.
'ರಾಜಾ ವೀರಮದಕರಿ ನಾಯಕ' ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದ ರಾಕ್‌ಲೈನ್ ವೆಂಕಟೇಶ್ ಅದನ್ನು ಪಕ್ಕಕ್ಕಿಟ್ಟು ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇತ್ತೀಚೆಗಷ್ಟೇ 'ಕ್ರಾಂತಿ' ಸಿನಿಮಾ 50 ದಿನ ಪೂರೈಸಿದೆ. ಸಿನಿಮಾ ಓಟಿಟಿಗೆ ಬಂದಮೇಲೂ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. 'ಕ್ರಾಂತಿ' ನಂತರ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಜಬರ್ದಸ್ತ್ ಟೈಟಲ್‌ನಿಂದಲೇ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಇನ್ನು ಚಿತ್ರದಲ್ಲಿ ದರ್ಶನ್ ಲುಂಗಿ ಉಟ್ಟು ಮಚ್ಚು ಹಿಡಿದು ಖಡಕ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾದ ಮೋಷನ್ ಪೋಸ್ಟರ್ ಸೂಪರ್ ಹಿಟ್ ಆಗಿದೆ.
ತರುಣ್ ಸುಧೀರ್ ನಿರ್ದೇಶನದ 'ಚೌಕ' ಚಿತ್ರದಲ್ಲಿ ದರ್ಶನ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ನಂತರ ಈ ಜೋಡಿ 'ರಾಬರ್ಟ್' ಸಿನಿಮಾ ಮಾಡಿ ಗೆದ್ದಿತ್ತು. ಅದೇ ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ಕಾಟೇರ' ಸಿನಿಮಾ ಕೂಡ ಈಗ ನಿರೀಕ್ಷೆ ಹುಟ್ಟಾಕ್ಕಿದೆ. ಸೌಂಡಿಂಗ್ ಟೈಟಲ್‌ನಿಂದಲೇ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ಈ ವರ್ಷಾಂತ್ಯಕ್ಕೆ ಥಿಯೇಟರ್‌ಗೆ ಬರುವ ಸುಳಿವು ಸಿಗುತ್ತಿದೆ. ಮುಂದೆ ತರುಣ್ ಜೊತೆ ದರ್ಶನ್ ಮತ್ತೊಂದು ಸಿನಿಮಾ ಮಾಡಲಿದ್ದಾರೆ.


Click it and Unblock the Notifications











