'KGF' ಮುನ್ನ ಕನ್ನಡ ಚಿತ್ರರಂಗ ಅಷ್ಟಕ್ಕಷ್ಟೆ ಎಂದಿದ್ದಕ್ಕೆ ಉಪ್ಪಿ ತಿರುಗೇಟು
'ಕಾಂತಾರ' ಹಾಗೂ 'KGF' ಭಾರತೀಯ ಚಿತ್ರರಂಗ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾಗಳು. ಆದರೆ ಅದಕ್ಕೂ ಮುನ್ನ ಕನ್ನಡದಲ್ಲಿ ಸಾಕಷ್ಟು ಅದ್ಭುತ ಚಿತ್ರಗಳು ಬಂದಿವೆ. ಹಲವು ಪ್ರಯೋಗಗಳು ಕನ್ನಡ ಚಿತ್ರರಂಗದಲ್ಲಾಗಿದೆ. ಆದರೆ ಪರಭಾಷಿಕರು ಮಾತ್ರ 'KGF' ಚಿತ್ರದಿಂದಲೇ ಕನ್ನಡ ಚಿತ್ರರಂಗ ಸದ್ದು ಮಾಡಿತು ಎನ್ನುವ ಭ್ರಮೆಯಲ್ಲಿದ್ದಾರೆ.
ನಟ, ನಿರ್ದೇಶಕ ಉಪೇಂದ್ರ ಮುಂದೆ ತೆಲುಗು ಪತ್ರಕರ್ತರೊಬ್ಬರು ಇದೇ ರೀತಿಯ ಪ್ರಶ್ನೆ ಇಟ್ಟಿದ್ದಾರೆ. ಆದರೆ ಅದಕ್ಕೆ ಉಪ್ಪಿ ಉತ್ತರ ಮಾತ್ರ ಕನ್ನಡ ಸಿನಿರಸಿಕರ ಗಮನ ಸೆಳೆದಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗುತ್ತಿದೆ. 'ಯುಐ' ಸಿನಿಮಾ ಪ್ರಚಾರಕ್ಕಾಗಿ ಉಪೇಂದ್ರ ಹೈದರಾಬ್‌ಗೆ ತೆರಳಿದ್ದಾರೆ. ಅಲ್ಲಿ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ದಶಕಗಳ ಹಿಂದೆಯೇ ತೆಲುಗು ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಕನ್ನಡದ 'ಓಂ' ಚಿತ್ರವನ್ನು ತೆಲುಗಿಗೆ ರೀಮೆಕ್ ಮಾಡಿದ್ದರು. ಬಳಿಕ ಅವರ ಕಲ್ಟ್ ಚಿತ್ರಗಳಾದ 'ಎ' ಹಾಗೂ 'ಉಪೇಂದ್ರ' ತೆಲುಗು ಪ್ರೇಕ್ಷಕರನ್ನು ರಂಜಿಸಿತ್ತು. ಉಪ್ಪಿ ಸಿನಿಮಾಗಳಿಂದಲೇ ಕೆಲ ತೆಲುಗು ನಿರ್ದೇಶಕರು ಅಲ್ಲಿ ಪ್ರೇರಣೆಗೊಂಡು ಸಿನಿಮಾಗಳನ್ನು ಮಾಡಿರುವ ಉದಾಹರಣೆಯಿದೆ.
ಉಪೇಂದ್ರ ನಿರ್ದೇಶಿಸಿ ನಟಿಸಿದ 'ಸೂಪರ್' ಹಾಗೂ 'ಉಪ್ಪಿ-2' ಚಿತ್ರಗಳು ತೆಲುಗಿನಲ್ಲಿ ಕೂಡ ಬಿಡುಗಡೆ ಆಗಿತ್ತು. ಇನ್ನು ಮೆಗಾಸ್ಟಾರ್ ಚಿರಂಜೀವಿಗೆ ಚಿತ್ರ ಮಾಡಲು ಉಪೇಂದ್ರ ಪ್ರಯತ್ನಿಸಿದ್ದರು. ಕನ್ನಡದಲ್ಲಿ ರಾಘವೇಂದ್ರ ರಾಜ್‌ಕುಮಾರ್ ನಟಿಸಿದ 'ಸ್ವಸ್ತಿಕ್' ಚಿತ್ರದ ಕಥೆಯನ್ನು ಚಿರುಗೆ ಹೇಳಿದ್ದರು. ಆದರೆ ಅವರು ಒಪ್ಪಿರಲಿಲ್ಲ. ಹಾಗಾಗಿ ಮೆಗಾಸ್ಟಾರ್‌ಗೆ ಆಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿರಲಿಲ್ಲ.
'ಎ' ಹಾಗೂ 'ಉಪೇಂದ್ರ' ಬಳಿಕ ನಿಮ್ಮ ರೀತಿ ವಿಭಿನ್ನವಾಗಿ ಯೋಚಿಸಿ ಕನ್ನಡದಲ್ಲಿ ಸಿನಿಮಾ ಮಾಡಿದವರು ಕಮ್ಮಿ. 'KGF' ಬರುವವರೆಗೂ ಅಂತಹ ವಿಭಿನ್ನ ಪ್ರಯತ್ನ ನಡೆಯಲಿಲ್ಲ ಎಂದು ಕೇಳಿದ ಪ್ರಶ್ನೆಗೆ ಉಪೇಂದ್ರ ಉತ್ತರಿಸಿದ್ದಾರೆ. "ಆ ರೀತಿ ಅಲ್ಲ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಲವರು ಕ್ರಾಂತಿ ಸೃಷ್ಟಿಸುವಂತಹ ಸಿನಿಮಾ ಮಾಡಿ ಗೆದ್ದಿದ್ದಾರೆ. ನಿಮಗೆ ಗೊತ್ತಿಲ್ಲ, ನಿಮಗೆ ಗೊತ್ತಿರುವುದು ಮಾತನಾಡುತ್ತಿದ್ದೀರಾ ಅಷ್ಟೆ" ಎಂದು ಉಪ್ಪಿ ಹೇಳಿದ್ದಾರೆ.
"ಕನ್ನಡದಲ್ಲಿ ಸಾಕಷ್ಟು ಜನ ನಿರ್ದೇಶಕರು ನೀವು ಊಹಿಸದಂತಹ ಸಿನಿಮಾಗಳನ್ನು ಮಾಡಿದ್ದಾರೆ. ಭಿನ್ನ, ವಿಭಿನ್ನ ಚಿತ್ರಗಳನ್ನು ತೆರೆಗೆ ತಂದಿದ್ದಾರೆ. ನಿಮಗೆ ಗೊತ್ತಿಲ್ಲ ಅಷ್ಟೆ. ನೀವು ಒಮ್ಮೆ ನೋಡಿ ಬೇಕಿದ್ದರೆ ಅಂತಹ ಸಿನಿಮಾಗಳು ಕನ್ನಡದಲ್ಲಿ ಸಾಕಷ್ಟು ಇವೆ. ತೆಲುಗಿನಲ್ಲಿ ಕೂಡ ಅಂತಹ ಚಿತ್ರಗಳನ್ನು ಅವತ್ತು ಮಾಡಿದ್ದಾರೆ, ಇವತ್ತು ಮಾಡ್ತಿದ್ದಾರೆ. ಕನ್ನಡದಲ್ಲಿ ಕೂಡ ಮಾಡಿದ್ದಾರೆ" ಎಂದು ರಿಯಲ್ ಸ್ಟಾರ್ ತಿಳಿ ಹೇಳಿದ್ದಾರೆ.
"ನಿಮಗೆ 'KGF' ಹಾಗೂ 'ಕಾಂತಾರ' ಕಾಣಿಸಬಹುದು. ಯಾಕಂದರೆ ದೊಡ್ಡ ಹಿಟ್. ಆದರೆ ಮೊನ್ನೆ ಮೊನ್ನೆ 'ಭೀಮ' ಎಂಬ ಚಿತ್ರವನ್ನು ವಿಜಯ್ ನಿರ್ದೇಶಿಸಿ ನಟಿಸಿದ್ದರು. ಹೀರೋ ಡೈರೆಕ್ಷನ್ ಎಷ್ಟು ಚೆನ್ನಾಗಿ ಮಾಡಿದ್ದರು ಗೊತ್ತಾ? ಅದಕ್ಕೂ ಮುನ್ನ 'ಸಲಗ' ಚಿತ್ರ ಕಟ್ಟಿಕೊಟ್ಟಿದ್ದರು. ನಾನೇ ನೋಡಿ ದಂಗಾಗಿದ್ದೆ. ಗಣೇಶ್ ನಟಿಸಿದ 'ಕೃಷ್ಣಂಪ್ರಣಯ ಸಖಿ' ಕೂಡ ಹಿಟ್ ಆಗಿತ್ತು. ಯೋಗರಾಜ್ ಭಟ, ಸೂರಿ ಕೂಡ ವಿಭಿನ್ನ ಸಿನಿಮಾಗಳನ್ನು ಮಾಡಿದ್ದಾರೆ" ಎಂದು ಉಪ್ಪಿ ವಿವರಿಸಿದ್ದಾರೆ.
ಬಹಳ ದಿನಗಳ ಬಳಿಕ ಉಪೇಂದ್ರ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. 'ಯುಐ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದು ಇದೇ ವಾರ ತೆರೆಗೆ ಬರ್ತಿದೆ. ತೆಲುಗಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ ಈಗಾಗಲೇ ಚಿತ್ರದ ಟೀಸರ್‌ಗಳು ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ.


Click it and Unblock the Notifications











