"ತಾಕತ್ತಿದ್ರೆ ಈಗ 'ಸಿಂಧೂರ ಲಕ್ಷ್ಮಣ' ಸಿನ್ಮಾ ಮಾಡ್ರಯ್ಯ": ಉಮಾಪತಿ ಶ್ರೀನಿವಾಸ್ ಓಪನ್ ಚಾಲೆಂಜ್
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆರೋಪ ಸಾಬೀತಾದರೆ ಕಠಿಣ ಶಿಕ್ಷೆಯಾಗುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೆಲ್ಲದರ ನಡುವೆ ದರ್ಶನ್ ನಟಿಸುತ್ತಿರುವ ಸಿನಿಮಾಗಳ ಕಥೆ ಏನಾಗುತ್ತದೆ? ನಂಬಿ ಹಣ ಹೂಡಿದವರ ಕಥೆ ಏನು? ಎನ್ನುವ ಬಗ್ಗೆಯೂ ಚಿತ್ರರಂಗದಲ್ಲಿ ಟಾಕ್ ನಡೀತಿದೆ.
'ಡೆವಿಲ್' ಬಳಿಕ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ನಟಿಸಬೇಕಿದೆ. 'ಸಿಂಧೂರ ಲಕ್ಷ್ಮಣ' ಜೀವನಾಧರಿತ ಸಿನಿಮಾ ಕೂಡ ಲೈನಪ್ ಆಗಿದೆ. ಶೈಲಜಾ ನಾಗ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ 'ಸಿಂಧೂರ ಲಕ್ಷ್ಮಣ' ಚಿತ್ರಕ್ಕಾಗಿ 3 ಕೋಟಿ ರೂ. ಅಡ್ವಾನ್ಸ್ ಪಡೆದಿದ್ದಾರೆ ಎನ್ನಲಾಗ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಚಿತ್ರಕ್ಕೂ 4 ಕೋಟಿ ರೂ.ವರೆಗೆ ದರ್ಶನ್ ಸಂಭಾವನೆ ಪಡೆದಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

ಒಂದು ವೇಳೆ ದರ್ಶನ್ ಮೇಲಿನ ಆರೋಪ ಸಾಬೀತಾದರೆ ದೀರ್ಘವಧಿ ಜೈಲು ಸೇರಬೇಕಾದ ಅನಿವಾರ್ಯತೆ ಎದುರಾಗಲಿದೆ. ಹಾಗಿದ್ದರೆ ದರ್ಶನ್ ಒಪ್ಪಿದ ಸಿನಿಮಾಗಳ ಕಥೆಯೇನು, ಅಡ್ವಾನ್ಸ್ ಕೊಟ್ಟವರ ಪಾಡೇನು ಎನ್ನುವ ಮಾತುಕತೆ ಶುರುವಾಗಿದೆ. ಇದೆಲ್ಲದರ ನಡುವೆ ಸಾಧ್ಯವಾದರೆ ಈಗ 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡಿ ನೋಡೋಣ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸವಾಲು ಹಾಕಿದ್ದಾರೆ.
ಸ್ವಾತಂತ್ರ ಹೋರಾಟಗಾರ 'ಸಿಂಧೂರ ಲಕ್ಷ್ಮಣ' ಜೀವನಾಧರಿತ ಚಿತ್ರದಲ್ಲಿ ನಟಿಸಬೇಕು ಎನ್ನುವುದು ದರ್ಶನ್ ಮಹದಾಸೆ ಆಗಿತ್ತು. ಅದೇ ಕಾರಣಕ್ಕೆ 'ರಾಬರ್ಟ್' ಸಿನಿಮಾ ಬೆನ್ನಲ್ಲೇ ಕಥೆ ಚಿತ್ರಕತೆ ಬರೆಸಲು ಆರಂಭಿಸಿದರು. ಉಮಾಪತಿ ಶ್ರೀನಿವಾಸ್ ನಿರ್ಮಾಣದಲ್ಲಿ ತರುಣ್ ಸುಧೀರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದು ಎಂದು ನಿಗದಿ ಆಗಿತ್ತು. 'ರಾಬರ್ಟ್' ಚಿತ್ರತಂಡವೇ ಈ ಚಿತ್ರಕ್ಕೆ ಕೆಲಸ ಮಾಡಬೇಕಿತ್ತು.
ಉಮಾಪತಿ ಶ್ರೀನಿವಾಸ್ ಕಥೆ ಬರೆಯಲು, ಟೈಟಲ್ ರಿಜಿಸ್ಟರ್ ಮಾಡಲು ಹಣ ವ್ಯಯಿಸಿದ್ದರು. ಆದರೆ 25 ಕೋಟಿ ರೂ. ಲೋನ್ ವಿಚಾರದಲ್ಲಿ ದರ್ಶನ್- ಉಮಾಪತಿ ನಡುವೆ ಭಿನ್ನಾಭಿಪ್ರಾಯ ಶುರುವಾಗಿ ಇಬ್ಬರೂ ದೂರಾಗಿದ್ದರು. ಬಳಿಕ ಕೂಡ 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡಲು ಉಮಾಪತಿ ಶ್ರೀನಿವಾಸ್ ಉತ್ಸುಕರಾಗಿದ್ದರು. ಬೇರೆ ನಟರನ್ನು ಹೀರೊ ಮಾಡಿ ಸಿನಿಮಾ ಮಾಡುವ ಪ್ರಯತ್ನ ಸಹ ಮಾಡಿದ್ದರು. ಆದರೆ ಈ ವರ್ಷ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮೀಡಿಯಾ ಹೌಸ್ ಬ್ಯಾನರ್‌ನಲ್ಲಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಘೋಷಣೆ ಆಗಿತ್ತು.

ತರುಣ್ ಸುಧೀರ್ ನಿರ್ದೇಶನದಲ್ಲೇ ಬೇರೆ ಟೈಟಲರ್‌ನಲ್ಲಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಬರುತ್ತದೆ ಎನ್ನಲಾಯಿತು. 'ಯಜಮಾನ', 'ಕ್ರಾಂತಿ' ಬಳಿಕ ಮೂರನೇ ಬಾರಿಗೆ ದರ್ಶನ್ ಚಿತ್ರಕ್ಕೆ ಶೈಲಜಾ ನಾಗ್ ಬಂಡವಾಳ ಹೂಡುವುದು ಪಕ್ಕಾ ಆಯಿತು. ಇತ್ತೀಚೆಗೆ ಟಿವಿ9 ವಾಹಿನಿಗೆ ಪ್ರತಿಕ್ರಿಯಿಸಿರುವ ಉಮಾಪತಿ ಶ್ರೀನಿವಾಸ್ ಈಗ ತಾಕತ್ತಿದ್ರೆ ಸಿನಿಮಾ ಮಾಡಿ ನೋಡೋಣ ಎಂದಿದ್ದಾರೆ.
"ಕೆಲ ನಿರ್ಮಾಪಕರ ಯೋಗ್ಯತೆ ಏನು ಎನ್ನುವುದು ಗೊತ್ತಾಯಿತು. ಅವರಿಗೆ ಎಂತಹ ಸಮಯದಲ್ಲಿ ನಾನು ಜೊತೆ ನಿಂತಿದ್ದೆ ಎನ್ನುವುದು ನನಗೆ ಗೊತ್ತು. ಏನು ಕೇಳದೇ ಆ ನಿರ್ದೇಶಕ, ನಿರ್ಮಾಪಕ 'ಸಿಂಧೂರ ಲಕ್ಷ್ಮಣ' ಕಥೆಗೆ 'ವೀರ ಚರಿತ್ರ' ಅಂತ ಟೈಟಲ್ ಇಟ್ಟು ಸಿನಿಮಾ ಮಾಡೋಕೆ ಹೊರಟರು. ನಾಚಿಕೆ ಆಗಬೇಕು ಅವರಿಗೆ ಅನಿಸಿತು. ನಾನು ದುಡ್ಟು ಕೊಟ್ಟು ಇಟ್ಟ ಟೈಟಲ್ ಅದು. ಇವರು ನನ್ನಿಂದ ಎಲ್ಲಾ ಸಹಾಯ ಪಡೆದು ಹೀಗೆ ಮಾಡಿದ್ರು. ತಾಕತ್ತು ಇದೆ ಅಲ್ವಾ? ಈಗ ಮಾಡಿ ಸಿನಿಮಾ ನೋಡೋಣ. ಆಗುತ್ತಾ ಮಾಡೋಕೆ?" ಎಂದು ಪ್ರಶ್ನಿಸಿದ್ದಾರೆ.
"ನನ್ನ ಬಂದು ಕೇಳಿ. ದುಡ್ಡಿಗಾಗಿ ನಾನು ಯಾವತ್ತು ಕೇಳಲ್ಲ. ನನ್ನತ್ರ ಐದಾರು ಟೈಟಲ್ ಇದೆ ಕೊಡ್ತೀನಿ. ನನ್ನತ್ರ ಬಹಳ ಚೆನ್ನಾಗಿದ್ರು. ಆದರೆ ಹೀಗೆ ಮಾಡಿದ್ರು. 'ಕಾಟೇರ' ಚಿತ್ರವನ್ನು ಸಹ ಅದೇ ರೀತಿ ಮಾಡಿದ್ರು. ಏನ್ ಮಾಡೋಕೆ ಸಾಧ್ಯವಿದೆ. ಅವಕಾಶ ಕಿತ್ತುಕೊಳ್ಳಬಹುದು. ನನ್ನ ಹಣೆಬರಹ ಕಿತ್ತುಕೊಳ್ಳೋಕೆ ಆಗಲ್ಲ" ಎಂದು ಉಮಾಪತಿ ಹೇಳಿದ್ದಾರೆ.


Click it and Unblock the Notifications











