ದರ್ಶನ್ 'ತಗಡು' ಟಿಪ್ಪಣಿ ; ಬೊಂಬೆ ಆಡ್ಸೋನು ಮೇಲೆ ಕುಂತವ್ನೆ ಎಂದ ಉಮಾಪತಿ ..!
'ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು' ಎಂಬ ದೊಡ್ಡವರ ಮಾತನ್ನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಇಬ್ಬರೂ ಮರೆತಂತೆ ಇದೆ. ಇಲ್ಲದೇ ಇದ್ದಿದ್ದರೆ 'ಕೆಸರೆರಚಾಟದ ಕಾರ್ಯಕ್ರಮ'ವನ್ನ ಹೆಚ್ಚು ಕಡಿಮೆ ಮೂರುವರೆ ವರ್ಷಗಳಿಂದ ಇಬ್ಬರು ಮುಂದುವರೆಸಿಕೊಂಡು ಬರುತ್ತಿರಲಿಲ್ಲ. ಸಾಮಾಜಿಕ ಜಾಲತಾಣದ ಈ ಕಾಲದಲ್ಲಿ ಕಂಡ ಕಂಡವರ 'ಬಾಯಿ'ಗೆ ಇಬ್ಬರೂ ಆಹಾರವಾಗ್ತಿರಲಿಲ್ಲ. 'ಕಾಟೇರ' ಗೆಲುವನ್ನ ಸಂಭ್ರಮಿಸಬೇಕಾದ ಸಮಯದಲ್ಲಿ 'ಸ್ವಾರ್ಥ ಉಳಿಸಿದ ಪಾಪಾತ್ಮ' ಯಾರು..? 'ನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ' ಯಾರು ಎಂಬ ಚರ್ಚೆಗೆ ನಾಂದಿಯನ್ನೂ ಇನ್ನೊಮ್ಮೆ ಹಾಡುತ್ತಿರಲಿಲ್ಲ.
ಹೌದು, ಕಾಟೇರ ಚಿತ್ರದ ಸಂಭ್ರಮಾಚರಣೆಯ ನೆಪದಲ್ಲಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಉಮಾಪತಿ ಶ್ರೀನಿವಾಸ್ ವಿರುದ್ಧ ಕೆಂಡ ಕಾರಿದ ಬೆನ್ನಲ್ಲಿಯೇ, ಉಮಾಪತಿ ಶ್ರೀನಿವಾಸ್ ಪ್ರತ್ಯುತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ. ಅವರು ದೇವರು, ದೇವರಾಗಿಯೇ ಇರಲಿ ಬಿಡಿ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ದರ್ಶನ್ ಕೆಂಡ..ಕೆಂಡ.. ಉಮಾಪತಿ ಖಂಡ ತುಂಡ..!
ದರ್ಶನ್ ಅವರ 'ತಗಡು' ಟಿಪ್ಪಣಿಗೆ ಪ್ರತಿಕ್ರಿಯೆ ನೀಡಿರುವ ಉಮಾಪತಿ ಶ್ರೀನಿವಾಸ್, ಅವರಿಗೆ ಉತ್ತರ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನಾವೆಲ್ಲ ತಗಡುಗಳು ತಗಡುಗಳಾಗೇ ಇರಬೇಕಲ್ವ? ಎಂದು ಮರುಪ್ರಶ್ನೆಯನ್ನ ಮಾಡಿದ್ದಾರೆ.
ರಾಬರ್ಟ್' ಸಿನಿಮಾ ಅವರದ್ದೇ, ಕತೆ ಕೊಟ್ಟವರು ಅವರೇ. ದುಡ್ಡು ಕೂಡ ಹಾಕಿದವರು ಅವರೇ ಎಂದಿರುವ ಉಮಾಪತಿ, ನಾನು ನಿರ್ಮಾಪಕನಾಗಿರಲಿಲ್ಲ, ಆ ಚಿತ್ರಕ್ಕೆ ನಾನು ಡಮ್ಮಿ ನಿರ್ಮಾಪಕ ಆಗಿದ್ದೆ ಎಂದಿದ್ದಾರೆ. ಅವರೆಲ್ಲ ದೊಡ್ಡ ವ್ಯಕ್ತಿಗಳು, ಮಾತನಾಡಿದ್ದಾರೆ, ಮಾತನಾಡಲಿ ಬಿಡಿ,' ಎಂದಿದ್ದಾರೆ. ಇನ್ನೂ ಎಲ್ಲ ಕತೆಗಳನ್ನು ಸಿನಿಮಾ ಮಾಡೋಕಾಗಲ್ಲ. 'ಕಾಟೇರ' ಟೈಟಲ್ ಯಾರ ಬ್ಯಾನರ್ ಅಲ್ಲಿ ರಿಜಿಸ್ಟರ್ ಆಯ್ತು ಅನ್ನುವುದಕ್ಕೆ ಚೇಂಬರ್ನಲ್ಲಿ ಮಾಹಿತಿ ಸಿಗುತ್ತದೆ ಎಂದಿರುವ ಉಮಾಪತಿ ಶ್ರೀನಿವಾಸ್, ಅವರು ಹೆಸರು ರೆಫರ್ ಮಾಡಿದ್ದರು, ರಿಜಿಸ್ಟರ್ ಮಾಡಿಟ್ಟುಕೊಂಡಿದ್ದೆ ಎಂದಿದ್ದಾರೆ. 'ಮದಗಜ' ಸಿನಿಮಾ ಟೈಟಲ್ ರಾಮಮೂರ್ತಿ ಅವರ ಬಳಿ ಇತ್ತು, ನೀವು 'ಮದಗಜ' ಕೊಡಿ ನಾನು 'ಕಾಟೇರ' ಕೊಡ್ತೀನಿ ಅನ್ನೋ ಒಪ್ಪಂದದ ಮೇಲೆ ಟೈಟಲ್ ಕೊಟ್ಟೆ' ಎಂದು ಹೇಳಿದ್ದಾರೆ ಉಮಾಪತಿ ಶ್ರೀನಿವಾಸ್
ಇಷ್ಟೇ ಅಲ್ಲ ಸಿನಿಮಾ ಗೆದ್ದಿದೆ. ಆ ಖುಷಿಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ. ನನ್ನ ಅಕ್ಕಪಕ್ಕ ಇರೋರು ನಾನು ಹೇಳಿದ್ದು ಸರಿ ಅಂತರೆ, ಹಾಗೆಯೇ ಅವರ ಅಕ್ಕ-ಪಕ್ಕ ಇರೋರು ಅವರು ಹೇಳಿದ್ದು ಸರಿ ಅಂತಾರೆ. ಮೇಲಿರುವ ಭಗವಂತನ ಬಳಿ ಎಲ್ಲದಕ್ಕೂ ಲೆಕ್ಕ ಇದೆ. ನಾವೆಲ್ಲ ತಗಡುಗಳು ಅಷ್ಟೆ ಅನ್ನುವುದು ಉಮಾಪತಿ ಶ್ರೀನಿವಾಸ್ ಅವರ ಮನದ ಮಾತು

ಉಮಾಪತಿ ವಿರುದ್ಧ ಕಾಟೇರ ಟೀಕಾಸ್ತ್ರ
ಇದಕ್ಕೂ ಮುನ್ನ ಕಾಟೇರ ಸಿನಿಮಾದ 50 ದಿನ ಪೂರೈಸಿದ ಖುಷಿಯಲ್ಲಿ ಪ್ರಸನ್ನ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ತಮ್ಮ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಮೇಲೆ ಕೆಂಡ ಕಾರಿದ್ದರು. ಅಯ್ಯೋ 'ತಗಡೆ' ಅಂದು 'ರಾಬರ್ಟ್' ಕತೆ ಕೊಟ್ಟಿದ್ದೆ ನಾವು. ಆದರೂ ಬುದ್ಧಿ ಕಲಿತಿಲ್ಲ ಅಂದರೆ ಏನು ಹೇಳೋಣ ಎಂದಿದ್ದರು. ಕಾಟೇರ ಅಂತಹ ಒಳ್ಳೆಯ ಕಥೆಯನ್ನ ಸಿನಿಮಾ ಮಾಡಬೇಕಿತ್ತು..? ಯಾಕೆ ಈ ಸಿನಿಮಾ ಬಿಟ್ಟೆ ಎಂದು ದರ್ಶನ್ ಪ್ರಶ್ನಿಸಿದ್ದರು. ಇಷ್ಟೇ ಅಲ್ಲ ಕಾಟೇರ' ಟೈಟಲ್ ಇಡಲು ಸೂಚಿಸಿದ್ದು ನೀನಲ್ಲ ಅದನ್ನೂ ಕೂಡ ನಾನೇ ಹೇಳಿದ್ದು ಎಂದಿದ್ದ ದರ್ಶನ್ ಸಾಕ್ಷಾತ್ ತರುಣ್ ಅವರ ಬಳಿಯೇ ಸ್ಪಷ್ಟನೆಯನ್ನೂ ಕೊಡಿಸಿದ್ದರು.
ಮಾತಿನ ಯುದ್ಧಕ್ಕೆ ಮೂರುವರೆ ವರ್ಷದ ಇತಿಹಾಸ
ನಿಮಗೆ ನೆನಪಿರಲಿ.. ಸರಿ ಸುಮಾರು ಮೂರು , ಮೂರುವರೆ ವರ್ಷಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂತ ಸೂಪರ್ ಸ್ಟಾರ್ ನಟ. ಹಣವಂತ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಹಾಗೂ ದರ್ಶನ್ ಸುತ್ತ ಮುತ್ತಲಿನ ಸ್ನೇಹಿತರು.. ಹೀಗೆ ಎಲ್ಲರ ನಡುವೆ ಸೃಷ್ಟಿಯಾದ ಗೊಂದಲದಿಂದ ಗಾಂಧಿನಗರಕ್ಕೆ ಗಾಂಧಿನಗರವೇ ಬೆಚ್ಚಿ ಬಿದ್ದಿತ್ತು. ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ ಎಂಬಂತೆ ಇಬ್ಬರ ಮನಸ್ತಾಪ ಸ್ಫೋಟಗೊಂಡಿತ್ತು. ನಿಜಾ.. ಆ ನಂತರ ವಾದ-ವಿವಾದದ ನಂತರ ದರ್ಶನ್ ಹಾಗೂ ಉಮಾಪತಿ ಜೊತೆಯಾಗಿ ಕಾಣಿಸಿಕೊಂಡು ಪ್ರಕರಣಕ್ಕೆ ಇತಿಶ್ರೀ ಹಾಡುವ ಪ್ರಯತ್ನ ಪಟ್ಟರು ಆದರೆ ಇಬ್ಬರಲ್ಲಿಯೂ ಅಸಹನೆ.. ಅಸಮಾಧಾನದ ಬೇಗೆ ಬೇಯುತ್ತಿತ್ತು.
ವಾಕ್ಸಮರ ಮತ್ತೆ ಆರಂಭವಾಗಿದ್ದು ಎಲ್ಲಿಂದ..?
ಕಾಲ ಚಕ್ರ ಉರುಳಿದಂತೆ ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ನಡುವಿನ ಫೇಕ್ ಲೋನ್ ಪ್ರಕರಣವನ್ನ ಎಲ್ಲರೂ ಮರೆತರು. ದರ್ಶನ್ ಹಾಗೂ ಉಮಾಪತಿ ಕೂಡ ತಮ್ಮ ತಮ್ಮ ಕೆಲಸದ ಕಡೆ ಮುಖ ಮಾಡಿದರು. ಆದರೆ ಮತ್ತೆ ಮುಖಾಮುಖಿಯಾಗಿರಲಿಲ್ಲ. ಹಗೆತನ ಸಾಧಿಸಲಿಲ್ಲ. ಬದಲಿಗೆ ದರ್ಶನ್ ಅವರ ಜೊತೆ ಕಳೆದ ಅವಿಸ್ಮರಣೀಯ ಕ್ಷಣಗಳನ್ನ ನಾನು ಯಾವತ್ತೂ ಮರೆಯಲ್ಲ ಎಂಬ ಅರ್ಥದಲ್ಲಿಯೇ ಉಮಾಪತಿ ಮಾತನಾಡುತ್ತಾ ಬಂದಿದ್ದರು.

ಇನ್ನೂ ಸ್ನೇಹಿತ ಚಿಕ್ಕಣ್ಣ ಮೇಲಿನ ಪ್ರೀತಿಗೆ ದರ್ಶನ್ ಕೂಡ ಚಿಕ್ಕ ಹಾಗೂ ಚೊಕ್ಕದಾದ ಡೈಲಾಗ್ ಹೊಡೆದು ಒಂದ್ಕಾಲದ ಆಪ್ತ ಉಮಾಪತಿ ಶ್ರೀನಿವಾಸ್ ನಿರ್ಮಾಣದ ಉಪಾಧ್ಯಕ್ಷ ಚಿತ್ರದ ಪ್ರಚಾರವನ್ನೂ ಮಾಡಿದರು. ಚಿತ್ರಮಂದಿರಕ್ಕೆ ತೆರಳಿ ಚಿತ್ರವನ್ನ ವೀಕ್ಷಿಸಿ ಬಾಯ್ತುಂಬ ಹೊಗಳಿದ್ದರು. ಒಂದರ್ಥದಲ್ಲಿ ಇಬ್ಬರು ಪಾಡಿಗೆ ತಾವು ಆರಾಮಾಗಿ ಇದ್ದರು.
ಆದರೆ ಮತ್ತೆ ಅದ್ಯಾರ ಮಸಣಿ ಕಣ್ಣು ಬಿತ್ತೋ ಗೊತ್ತಿಲ್ಲ. ಉಪಾಧ್ಯಕ್ಷ ಚಿತ್ರದ ಬಿಡುಗಡೆಯ ಆಚೀಚೆ ಉಮಾಪತಿ ಶ್ರೀನಿವಾಸ್ ಕಾಟೇರ ಸಿನಿಮಾ ಬಗ್ಗೆ ಮಾತನಾಡತೊಡಗಿದರು. ಕಾಟೇರ' ಸಿನಿಮಾದ ಕತೆ ತಮ್ಮ ನಿರ್ಮಾಣ ಸಂಸ್ಥೆಗಾಗಿ ತಾವೇ ಖುದ್ದು ಮಾಡಿಸಿದ್ದಾಗಿ ಹೇಳಿದರು. ಕಾಟೇರ' ಸಿನಿಮಾದ ಕತೆಯೊಟ್ಟಿಗೆ ನನಗೆ ಬಂಧವಿದೆ. ಆ ಕತೆ ನಮ್ಮ ಬ್ಯಾನರ್ಗಾಗಿ ನಾನು ಮಾಡಿಸಿದ್ದೆ. ಕಾರಣಾಂತರಗಳಿಂದ ಆಗಲಿಲ್ಲ, ಇರಲಿ ತೊಂದರೆ ಇಲ್ಲ, ಸರಸ್ವತಿ ಯಾರೊಬ್ಬರ ಆಸ್ತಿಯಲ್ಲ, ಯಾರಿಗೆ ಏನು ಧಕ್ಕಬೇಕು ಎನ್ನುವುದು ಪೂರ್ವ ನಿರ್ಧರಿತ, ಅದೇ ಅವರಿಗೆ ಧಕ್ಕುತ್ತದೆ ಎಂದರು. ನನ್ನ ಅಭಿರುಚಿ ಯಶಸ್ವಿ ಆಯಿತೆಂಬ ಖುಷಿ ಇದೆ. ನನ್ನ ಜಡ್ಜ್ಮೆಂಟ್ ರಾಂಗ್ ಆಗಿಲ್ಲ ಎಂಬ ಖುಷಿ ಇದೆ' ಎಂದು ಹೇಳಿದ್ದರು ಉಮಾಪತಿ ಶ್ರೀನಿವಾಸ್ .

ಅವತ್ತು ಅಂದರೆ ಜನವರಿಯಲ್ಲಿ ಉಮಾಪತಿ ಶ್ರೀನಿವಾಸ್ ಮಾತನಾಡಿದ್ದ ಮಾತುಗಳಿಗೆ, ಫೆಬ್ರವರಿಯಲ್ಲಿ ದರ್ಶನ್ ಉತ್ತರವನ್ನ ಕೊಟ್ಟಿದ್ದಾರೆ. ಒಟ್ನಲ್ಲಿ 'ತೇರಾದ ಮೇಲೆ ಜಾತ್ರೆ ಸೇರಿತು' ಎನ್ನುವಂತೆ ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ನಡುವಿನ ವಿವಾದ ಮುಕ್ತಾಯವಾಯಿತು ಎಂದುಕೊಳ್ಳುವಷ್ಟರಲ್ಲಿ ನಾನಾ-ನೀನಾ ನೋಡೇ ಬಿಡೋಣ ಎಂದು ಇಬ್ಬರು ಮತ್ತೆ ಮೈಕೊಡವಿ ಎದ್ದು ನಿಂತಿದ್ದಾರೆ. ಈ ಕಥೆಯ ಕ್ಲೈಮ್ಯಾಕ್ಸ್ ಏನಾಗಲಿದೆ ಅನ್ನುವುದು ಸದ್ಯದ ಕುತೂಹಲ


Click it and Unblock the Notifications











