'ರಾಬರ್ಟ್' ರೀ- ರಿಲೀಸ್ ಮಾಡ್ದೆ 2 ಸಾವಿರ ಕಲೆಕ್ಷನ್ ಆಗ್ಲಿಲ್ಲ"; ಉಮಾಪತಿ ಶ್ರೀನಿವಾಸ್ ವ್ಯಂಗ್ಯ
ನಟ ದರ್ಶನ್ ವಿರುದ್ಧ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಾಗ್ದಾಳಿ ಮುಂದುವರೆಸಿದ್ದಾರೆ. ರೇಣಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇಂತಹ ಸಮಯದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೇಳಿಕೆಗಳು ವೈರಲ್ ಆಗುತ್ತಿದೆ. 'ರಾಬರ್ಟ್' ಸಿನಿಮಾ ರೀ-ರಿಲೀಸ್ ಬಗ್ಗೆಯೂ ಮಾತನಾಡಿದ್ದಾರೆ.
ತರುಣ್ ಸುಧೀರ್ ನಿರ್ದೇಶನದಲ್ಲಿ ದರ್ಶನ್ ನಟಿಸಿದ ಬ್ಲಾಕ್‌ಬಸ್ಟರ್ ಸಿನಿಮಾ 'ರಾಬರ್ಟ್'. ಉಮಾಪತಿ ಶ್ರೀನಿವಾಸ್ ನಿರ್ಮಾಣದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ 2021ರಲ್ಲಿ ತೆರೆಗೆ ಬಂದಿತ್ತು. ಕೊರೊನಾ ಹಾವಳಿ ಬಳಿಕ ಬಂದು ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಚಿತ್ರದಲ್ಲಿ ರಾಬರ್ಟ್ ಹಾಗೂ ರಾಘವ ಆಗಿ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದರು.

ಐಪಿಎಲ್, ಎಲೆಕ್ಷನ್ ಹಿನ್ನೆಲೆಯಲ್ಲಿ ಇತ್ತೀಚೆಗೆ ಒಂದಷ್ಟು ಹಿಟ್ ಸಿನಿಮಾಗಳನ್ನು ಮರುಬಿಡುಗಡೆ ಮಾಡಲಾಗಿತ್ತು. ಅದಕ್ಕೂ ಮುನ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ಜಾಕಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಬಳಿಕ 'ಎ', 'ಅಂಜನಿಪುತ್ರ', 'ಪವರ್', 'ಕೃಷ್ಣ ನೀ ಬೇಗನೆ ಬಾರೋ' ಸೇರಿ ಹಲವು ಸಿನಿಮಾಗಳು ರೀ ರಿಲೀಸ್ ಆಗಿತ್ತು.
ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಜಾಕಿ' ಸಿನಿಮಾ ತೆರೆಗೆ ತಂದಿತ್ತು. ಅಭಿಮಾನಿಗಳಿಂದ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಹಬ್ಬದ ರೀತಿ ಫ್ಯಾನ್ಸ್ ಸಿನಿಮಾ ಬರಮಾಡಿಕೊಂಡಿದ್ದರು. ಈ ಸಕ್ಸಸ್ ನೋಡಿ ಕೆಆರ್‌ಜಿ ಸಂಸ್ಥೆ ಮುಂದೆ ಪುನೀತ್ ಹುಟ್ಟುಹಬ್ಬಕ್ಕೆ 'ಅಪ್ಪು' ಸಿನಿಮಾ ರೀ-ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ. ಇನ್ನು ಹೊಸ ರೂಪದಲ್ಲಿ ಬಂದ 'ಎ' ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಎಲೆಕ್ಷನ್, ಐಪಿಎಲ್ ಕಾರಣಕ್ಕೆ ದೊಡ್ಡ ಸಿನಿಮಾಗಳು ಬಿಡುಗಡೆಯಾಗದೇ ಚಿತ್ರಮಂದಿರದ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದರು. ಹಾಗಾಗಿ 'ರಾಬರ್ಟ್' ಸಿನಿಮಾ ರೀ- ರಿಲೀಸ್ ಮಾಡುವಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬಳಿಕ ಕೆಲವರು ಮನವಿ ಮಾಡಿದ್ದರಂತೆ. ಆದರೆ ಸಿನಿಮಾ 2 ಸಾವಿರ ಕೂಡ ಕಲೆಕ್ಷನ್ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಉಮಾಪತಿ ಶ್ರೀನಿವಾಸ್ ಮಾತನಾಡಿದ್ದಾರೆ. "ರಾಬರ್ಟ್ ಸಿನಿಮಾ ರೀ- ರಿಲೀಸ್ ಮಾಡಿ ಎಂದು ತಲೆ ತಿಂದರು. ಯಾಕೆ ಅಂದ್ರೆ, ಥಿಯೇಟರ್‌ನವರಿಗೆ ಅನುಕೂಲ ಅಂದ್ರು. ಸರಿ ಮಾಡೋಣ ಅಂತ ಮಾಡ್ದೆ. ನೀವು ನಂಬ್ತಿರೋ ಇಲ್ವೋ 1000, 2000 ರೂ. ಕಲೆಕ್ಷನ್ ಆಗ್ಲಿಲ್ಲ"
"ದರ್ಶನ್ ವರ್ಚಸ್ಸು ಕಮ್ಮಿ ಆಗ್ತಿದೆ. ಶನಿವಾರ ಕೃತ್ಯ ಮಾಡ್ತಾನೆ. ಶುಕ್ರವಾರ ನಾನು 'ರಾಬರ್ಟ್' ಸಿನಿಮಾ ರೀ- ರಿಲೀಸ್ ಮಾಡ್ದೆ. ಕೆಲವರು ಹೇಳಿದ್ರು. ಮುಂಚೆ ಅಷ್ಟು ಫ್ಯಾನ್ಸ್ ಇಲ್ಲ. ಕಮ್ಮಿ ಆಗಿದ್ದಾರೆ. ಯಾಕೆ ಅಂತ ಗೊತ್ತಿಲ್ಲ. ಶನಿವಾರ ಈ ಬಗ್ಗೆ ಮಾತಾಡ್ತೀವಿ, ಭಾನುವಾರ, ಸೋಮವಾರ, ಮಂಗಳವಾರ ಬೆಳಗ್ಗೆ ಕೂಡ ಈ ಬಗ್ಗೆ ಚರ್ಚೆ ನಡೀತು. ಬಳಿಕ ನೋಡಿದರೆ ಪರಿಸ್ಥಿತಿ ಹಿಂಗಾಗಿದೆ" ಎಂದು ಉಮಾಪತಿ ಹೇಳಿದ್ದಾರೆ.
'ರಾಬರ್ಟ್' ಚಿತ್ರದಲ್ಲಿ ವಿನೋದ್ ಪ್ರಭಾಕರ್, ಆಶಾ ಭಟ್, ಜಗಪತಿ ಬಾಬು, ದೇವರಾಜ್ ಸೇರಿದಂತೆ ದೊಡ್ಡ ತಾರಾಗಣವಿತ್ತು. ಅರ್ಜುನ್ ಜನ್ಯಾ ಸಂಗೀತದ ಹಾಡುಗಳು ವಿ. ಹರಿಕೃಷ್ಣ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ದರ್ಶನ್ ಅಭಿನಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು.


Click it and Unblock the Notifications











