"ಕಾಟೇರ' ಕಥೆ ಬರೆಸಿದ್ದು ನಾನೇ, 200 ಕೋಟಿ ರೂ. ಕಲೆಕ್ಷನ್ ಬಗ್ಗೆ ನಿರ್ಮಾಪಕರೇ ಹೇಳ್ಬೇಕು": ಉಮಾಪತಿ
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ದರ್ಶನ್ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ದರ್ಶನ್ ನಟನೆ, ಮೇಕಿಂಗ್ ಎಲ್ಲದರ ಬಗ್ಗೆಯೂ ಸಿನಿರಸಿಕರು ಮಾತನಾಡುತ್ತಿದ್ದಾರೆ. ಮೆಚ್ಚಿ ಕೊಂಡಾಡುತ್ತಿದ್ಧಾರೆ.
ರಾಕ್‌ಲೈನ್ ವೆಂಕಟೇಶ್ ಸಿನಿಮಾ ನಿರ್ಮಿಸಿ ಗೆದ್ದಿದ್ದಾರೆ. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ ಸಿನಿಮಾ 200 ಕೋಟಿ ರೂ. ಗಳಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಶೀಘ್ರದಲ್ಲೇ ಪರಭಾಷೆಗಳಿಗೆ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ಶುರುವಾಗಿದೆ. ಇನ್ನು ವಿದೇಶಗಳಲ್ಲಿ ಕೂಡ 'ಕಾಟೇರ'ನ ಆರ್ಭಟಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.

'ಕಾಟೇರ' ಚಿತ್ರದಲ್ಲಿ ಕನ್ನಡ ಮಣ್ಣಿನ ಕಥೆಯನ್ನು ಹೇಳಿ ತರುಣ್ ಸುಧೀರ್ ಅಂಡ್ ಟೀಂ ಗೆದ್ದಿದೆ. ಜಡೇಶ್ ಹಂಪಿ ಹಾಗೂ ತರುಣ್ ಇಬ್ಬರು ಸೇರಿ ಕಥೆ, ಚಿತ್ರಕಥೆ ಬರೆದಿದ್ದರು. 'ಉಳುವವನೆ ಭೂಮಿಯ ಒಡೆಯ ಕಾಯ್ದೆ', ಹೊಲೆ ಮಾರಿ, 70ರ ದಶಕದಲ್ಲಿದ್ದ ಜಾತಿ ವ್ಯವಸ್ಥೆ, ರೈತರ ಸಮಸ್ಯೆಗಳು ಜೊತೆ ಮರ್ಯಾದೆ ಹತ್ಯೆಯಂತಹ ಸೂಕ್ಷ್ಮ ವಿಚಾರಗಳನ್ನಿಟ್ಟುಕೊಂಡು ಕಥೆ, ಚಿತ್ರಕಥೆ ಹೆಣೆಯಲಾಗಿದೆ. ಅದನ್ನೆಲ್ಲಾ ಅಷ್ಟೇ ಸೊಗಸಾಗಿ ತೆರೆಗೆ ತರುವಲ್ಲಿ ಚಿತ್ರತಂಡ ಸಕ್ಸಸ್ ಕಂಡಿದೆ.
ದರ್ಶನ್ ಸೇರಿದಂತೆ ಉಳಿದ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿ ಗೆದ್ದಿದ್ದಾರೆ. ಸಣ್ಣ ಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟರೆ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿದೆ. ದರ್ಶನ್ ಅಭಿಮಾನಿಗಳು ಮಾತ್ರವಲ್ಲ ಸಾಮಾನ್ಯ ಪ್ರೇಕ್ಷಕರು ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ. ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ಸಂದೇಶವನ್ನು ಸಿನಿಮಾ ದಾಟಿಸಿದೆ. ಇದೇ ಕಾರಣಕ್ಕೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಸೆಳೆಯುತ್ತಿದೆ.

'ರಾಬರ್ಟ್' ಬಳಿಕ ದರ್ಶನ್ ಹಾಗೂ ತರುಣ್ ಸುಧೀರ್ ಸೇರಿ ಮಾಡಿದ ಮತ್ತೊಂದು ಸಿನಿಮಾ 'ಕಾಟೇರ'. ಅಂದಹಾಗೆ 'ರಾಬರ್ಟ್' ಸಿನಿಮಾ ಸಹ ಸೂಪರ್ ಹಿಟ್ ಆಗಿತ್ತು. ಆ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದರು. 'ಕಾಟೇರ' ಚಿತ್ರದ ಕಥೆಯನ್ನು ಸಹ ನಾನೇ ಬರೆಸಿದ್ದು ಎಂದು ಉಮಾಪತಿ ಹೇಳಿದ್ದಾರೆ. 'ಫಸ್ಟ್ ಡೇ ಫಸ್ಟ್ ಶೋ ಕನ್ನಡ' ಯೂಟ್ಯೂಬ್ ಚಾನಲ್ ಸಂದರ್ಶನವೊಂದರಲ್ಲಿ 'ಕಾಟೇರ' ಸಕ್ಸಸ್ ಬಗ್ಗೆ ಮಾತನಾಡಿದ್ದಾರೆ.
"ಕಾಟೇರ ಸಿನ್ಮಾ ಕಥೆ ಬರೆಸಿದವನು ನಾನು. ತೆರೆಮೇಲೆ ಚೆನ್ನಾಗಿ ಬಂದಿದೆ. ನನಗೆ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ಮಕ್ಕಳಿಗೆ ಪರೀಕ್ಷೆ ಇತ್ತು. ಹಾಗಾಗಿ ಹೋಗಲು ಸಾಧ್ಯವಾಗಲಿಲ್ಲ. 'ಕಾಟೇರ' ಟೈಟಲ್ ಇಟ್ಟವನು ನಾನೇ, ಕಥೆ ಬರೆಸಿದವನು ನಾನೇ. ಯಾರಿಗೆ ಏನು ಧಕ್ಕಬೇಕು ಅಂತ ಇರುತ್ತೋ ಅದು ಧಕ್ಕುತ್ತೆ. ನನ್ನ ಖುಷಿ ಏನು ಅಂದ್ರೆ ನನ್ನ ಜಡ್ಜ್‌ಮೆಂಟ್ ಎಲ್ಲೂ ತಪ್ಪಾಗಿಲ್ಲ. ನಿರ್ಮಾಪಕನಾಗಿ ಒಳ್ಳೆ ಕಥೆ ಆಯ್ಕೆ ಮಾಡಿದ ಖುಷಿಯಿದೆ. 'ರಾಬರ್ಟ್' ರಿಲೀಸ್‌ಗೂ ಮುನ್ನ 'ಕಾಟೇರ' ಕಥೆ ಬರೆಸಿದ್ದೆ ಖುಷಿಯಿದೆ. ರಾಕ್‌ಲೈನ್ ಸರ್ ಅಂದ್ರೆ ಬಹಳ ಪ್ರೀತಿಯಿದೆ. ಅವರ ಬ್ಯಾನರ್ ಸಿನ್ಮಾ ನನ್ನ ಬ್ಯಾನರ್ ಸಿನ್ಮಾ" ಎಂದಿದ್ದಾರೆ.
'ಕಾಟೇರ' 200 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿದೆ ಎನ್ನುವುದರ ಬಗ್ಗೆ ಕೇಳಿದ ಪ್ರಶ್ನೆಗೂ ಉಮಾಪತಿ ಉತ್ತರಿಸಿದ್ದಾರೆ. "ಕಲೆಕ್ಷನ್ ಬಗ್ಗೆ ಮಾತನಾಡುವಾಗ ನಿರ್ಮಾಪಕರ ದೃಷ್ಟಿಕೋನದಲ್ಲಿ ನೋಡ್ತೀನಿ, ಯಾಕಂದ್ರೆ ಈಗಲೂ ನನ್ನ ಇನ್‌ಕಮ್ ಟ್ಯಾಕ್ಸ್ ಕೇಸ್ ನಡೀತಿದೆ. ಯಾರು ಯಾರೋ 200, 300 ಕೋಟಿ ರೂ. ಅಂತೆಲ್ಲಾ ಹಾಕ್ತಾರಲ್ಲ, ನನ್ನ ಅಕೌಂಟ್ ಸಹ ಫ್ರೀಜ್ ಆಗಿದೆ. ಈಗ ಇನ್‌ಕಮ್ ಟ್ಯಾಕ್ಸ್ ಕೋರ್ಟ್‌ನಲ್ಲಿ ಕೇಸ್ ನಡೀತಿದೆ. ಹಾಗಾಗಿ ಕಲೆಕ್ಷ್ ಬಗ್ಗೆ ರಾಕ್‌ಲೈನ್ ಸರ್ ಹೇಳಬೇಕು. 200 ಅಲ್ಲ 500 ಕೋಟಿ ರೂ. ಕಲೆಕ್ಷನ್ ಆಗಲಿ ಎಂದು ನಾನು ಬಯಸುತ್ತೇನೆ. ಯಾಕಂದ್ರೆ ಆ ತಾಖತ್ತು ಚಿತ್ರಕ್ಕಿದೆ. ಕೋಟಿಗಳ ಬಗ್ಗೆ ನಾನು ಮಾತನಾಡಲ್ಲ" ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ತಿಳಿಸಿದ್ದಾರೆ.


Click it and Unblock the Notifications











