twitter
    For Quick Alerts
    ALLOW NOTIFICATIONS  
    For Daily Alerts

    ಜ್ಯೂರಿಯ ಗೌರವಕ್ಕಿಂಥ ಪ್ರಶಸ್ತಿಯೇ ದೊಡ್ಡದಾಗಿ ಉಮಾಶ್ರೀ

    By *ಸುಂದರ್‌
    |

    ನವರಸ ನಾಯಕಿ ಉಮಾಶ್ರೀ ಅಂತೂ ವಿಚಿತ್ರ ಸಮಸ್ಯೆಯಾಂದರಿಂದ ಪಾರಾಗಿದ್ದಾರೆ. ಸಮಸ್ಯೆ ಸೃಷ್ಟಿಸಿದ್ದು ವಾರ್ತಾ ಮತ್ತು ಪ್ರಚಾರ ಇಲಾಖೆಯಾದರೂ, ಸಮಸ್ಯೆಯಿಂದ ಹೊರಬರುವುದು ಮಾತ್ರ ಅವರ ಕೈಯ್ಯಲ್ಲೇ ಇತ್ತು . ಆ ಮಟ್ಟಿಗೆ ಉಮಾಶ್ರೀ ಪ್ರೌಢತೆ ಮೆರೆದಿದ್ದಾರೆ. ಹೊಸ ಉಸಿರು ಸಿಕ್ಕ ಖುಷಿಯನ್ನು ಅವರು ಅನುಭವಿಸುತ್ತಿರಬೇಕು.

    ಉಮಾಶ್ರೀ ಮುಂದಿದ್ದುದು ಆಯ್ಕೆಯ ಸಮಸ್ಯೆ. ಇದು ಚಿತ್ರ ಅಥವಾ ಪಾತ್ರದ ಆಯ್ಕೆಯಲ್ಲ . ರಾಜ್ಯ ಚಲನ ಚಿತ್ರ ಆಯ್ಕೆ ಸಮಿತಿಗೆ ಸರಕಾರ ಅವರನ್ನು ಆಯ್ಕೆ ಮಾಡಿರುವುದೇ ಅಪವಾದವಾಗಿ ಅವರನ್ನು ಕಾಡ ತೊಡಗಿತು. ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಉಮಾಶ್ರೀ ಗೊಂದಲಗಳನ್ನು ಪರಿಹರಿಸಿಕೊಂಡಿದ್ದಾರೆ, ಗುಮ್ಮನನ್ನು ದೂರವಿಟ್ಟಿದ್ದಾರೆ.

    ಇದೆಲ್ಲ ತಮಾಷೆ ಶುರುವಾದದ್ದು ಸಿನಿಮಾ ನೋಡದ ಸರ್ಕಾರಿ ಅಧಿಕಾರಿಗಳಿಂದ. 2000 ಮತ್ತು 2001ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಸಿನಿಮಾಗಳನ್ನು ಆಯುವ ಆಯ್ಕೆ ಸಮಿತಿ ಸದಸ್ಯರ ಪಟ್ಟಿಗೆ ಉಮಾಶ್ರೀ ಅವರ ಹೆಸರನ್ನು ಸೇರಿಸುವ ಸಲಹೆ ಯಾರದ್ದೋ, ಒಟ್ಟಿನಲ್ಲಿ ಸರಕಾರ ನೇಮಿಸಿದ ಎಂಟು ಮಂದಿ ಸದಸ್ಯರ ಆಯ್ಕೆ ಸಮಿತಿಯಲ್ಲಿ ಉಮಾಶ್ರೀ ಅವರ ಹೆಸರೂ ಇತ್ತು . ವಿಪರ್ಯಾಸವೆಂದರೆ, ಈ ಬಾರಿ ಅವರು ನಟಿಸಿರುವ ಐದು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಗೊಂದಲ ಶುರುವಾದದ್ದೇ ಇಲ್ಲಿ.

    ಸ್ಪರ್ಧೆಗಿರುವ ಐದು ಚಿತ್ರಗಳಲ್ಲಿ ಒಂದು ಚಿತ್ರಕ್ಕಾದರೂ ಉಮಾಶ್ರೀಗೆ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಸಿಗುವ ಸಾಧ್ಯತೆಯಿತ್ತು . ಆದರೆ ಅವರೇ ಜ್ಯೂರಿಯಾಗಿರುವುದರಿಂದ ಅದು ಸಾಧ್ಯವಿಲ್ಲ . ಆ ಬಗ್ಗೆ ನಿಯಮಾವಳಿ ಸ್ಪಷ್ಟವಾಗಿದೆ. ಈಗಾಗಲೇ 'ಮಾಯಾಮೃಗ " ಅಂಥಾದ್ದೊಂದು ವಿವಾದಕ್ಕೆ ಸಿಲುಕಿದ್ದು ಹಸಿ ಹಸಿಯಾಗಿದೆ.

    ಉಮಾಶ್ರೀ ಅವರದ್ದು ಧರ್ಮ ಸಂಕಟ. ಸದಸ್ಯತ್ವವನ್ನು ನಿರಾಕರಿಸುವುದು ಅಂದರೆ ಸರ್ಕಾರಕ್ಕೆ ಅಗೌರವ ತೋರಿಸಿದಂತೆ. ತಾನು ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ ಆಗಿರುವುದು ಕೂಡ ತನ್ನ ಆಯ್ಕೆಯಲ್ಲಿ ಮುಖ್ಯಪಾತ್ರ ವಹಿಸಿದೆ ಅನ್ನೋದು ಉಮಾಶ್ರೀಗೆ ಗೊತ್ತು. ಆದರೆ ಈಕೆ ನಟಿಸಿದ ಐದು ಚಿತ್ರಗಳು ಪ್ರಶಸ್ತಿ ಕಣದಲ್ಲಿ ನಿಂತಿರುವುದು ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಗೊತ್ತಿಲ್ಲ. ಇಲ್ಲಿ ಸ್ವಲ್ಪ ತಪ್ಪಾಗಿದೆ ಎಂದು ವಾರ್ತಾ ಸಚಿವ ಬೀಕೇಸಿಯವರೇ ಇತ್ತೀಚೆಗೆ ಒಪ್ಪಿಕೊಂಡರು ಅನ್ನೋದು ಸುದ್ದಿ. ಬೀಕೇಸಿ ಈಗಾಗಲೇ ಹಲವು ತಪ್ಪುಗಳನ್ನು ಮಾಡಿದ್ದಾರೆ ಅನ್ನೋದು ಬೇರೆ ಸಂಗತಿ.

    ಉಮಾಶ್ರೀ ಆಯ್ಕೆ ಸಮಿತಿಯಿಂದ ಹೊರ ಬಂದಿರುವುದಕ್ಕೆ ಸಕಾರಣಗಳಿವೆ ಎನ್ನುತ್ತದೆ ಚಿತ್ರೋದ್ಯಮ. ಅವರಿಗಿನ್ನೂ ವಯಸ್ಸಿದೆ, ಮುಂದಿನ ವರ್ಷವೂ ಸದಸ್ಯರಾಗಬಹುದು. ಅದು ದೊಡ್ಡ ಮಾತಲ್ಲ. ಪ್ರಶಸ್ತಿ ಸಿಗುವ ಅವಕಾಶವನ್ನು ಕೈಯಾರೆ ಹಾಳುಮಾಡಿಕೊಳ್ಳುವುದು ದೊಡ್ಡ ಸಂಗತಿ. ಅನ್ನುವ ಅಭಿಪ್ರಾಯಗಳೂ ಕೇಳಿಬರುತ್ತಿವೆ. ಈ ಮಧ್ಯೆ ಆಯ್ಕೆ ಸಮಿತಿ ಕಾರ್ಯವೈಖರಿ ಬಗ್ಗೆ ಸದಾ ತೆರೆದ ಕಣ್ಣಿನಿಂದ ನೋಡುತ್ತಿರುವವರು ಬೇರೆಯೇ ಮಾತು ಹೇಳುತ್ತಿದ್ದಾರೆ.

    ಉಮಾಶ್ರೀ ಸದಸ್ಯೆಯಾಗಿದ್ದುಕೊಂಡೇ ಪ್ರಶಸ್ತಿ ಪಡೆಯಬಹುದು. ಯಾಕೆಂದರೆ ಈ ಹಿಂದೆ ನಿರ್ದೇಶಕ ಸಿದ್ಧಲಿಂಗಯ್ಯ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವಾಗಲೇ ಅವರಿಗೆ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಬಂದಿತ್ತು . ವಾರ್ತಾ ಇಲಾಖೆ ನಿರ್ದೇಶಕರು ಇನ್ನೂ ಒಂದು ಸರಳ ಉಪಾಯವನ್ನು ಉಮಾಶ್ರೀ ಅವರಿಗೆ - 'ನೀವು ನಟಿಸಿದ ಚಿತ್ರ ಪ್ರದರ್ಶನವಾಗುವ ಹೊತ್ತಲ್ಲಿ ನೀವು ಪ್ರೊಜೆಕ್ಷನ್‌ ಹಾಲ್‌ನಿಂದ ಹೊರಗೆ ಬಂದುಬಿಡಿ" ಎಂದು ಹೇಳಿಕೊಟ್ಟಿದ್ದರಂತೆ. ಆದರೆ ಉಮಾಶ್ರೀ ಆಯ್ಕೆ ಸಮಿತಿಯಿಂದಲೇ ಹೊರಗೆ ಬಂದಿದ್ದಾರೆ. ಈ ಮಟ್ಟಿಗೆ ಅವರು ಸರ್ಕಾರದ ತಪ್ಪನ್ನು ಎತ್ತಿ ತೋರಿಸಿದ್ದಾರೆ. ಅಂದಹಾಗೆ, ಉಮಾಶ್ರೀಗೆ ಪ್ರಶಸ್ತಿ ಸಿಗುತ್ತದೆಯೇ?

    English summary
    Kannada film actress umashree and award selection committee
    Thursday, June 27, 2013, 16:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X