»   » ಸಿನಿಮಾದಲ್ಲಿ ಗಯ್ಯಾಳಿ ಹೆಣ್ಣಾಗಿ ಕಾಣಿಸಿಕೊಳ್ಳುತ್ತಿದ್ದ ಉಮಾಶ್ರೀ, ರಾಜಕಾರಣದಲ್ಲಿ ಸಭ್ಯ ಮಹಿಳೆ! ಆದರೆ, ಜನ ಪ್ರತಿನಿಧಿಯಾಗಿ ಜನರ ಸಮಸ್ಯೆಗಳಿಗೆ ದನಿಯಾಗದಿದ್ದರೆ ಹೇಗೆ?

ಸಿನಿಮಾದಲ್ಲಿ ಗಯ್ಯಾಳಿ ಹೆಣ್ಣಾಗಿ ಕಾಣಿಸಿಕೊಳ್ಳುತ್ತಿದ್ದ ಉಮಾಶ್ರೀ, ರಾಜಕಾರಣದಲ್ಲಿ ಸಭ್ಯ ಮಹಿಳೆ! ಆದರೆ, ಜನ ಪ್ರತಿನಿಧಿಯಾಗಿ ಜನರ ಸಮಸ್ಯೆಗಳಿಗೆ ದನಿಯಾಗದಿದ್ದರೆ ಹೇಗೆ?

Posted By:
Subscribe to Filmibeat Kannada

ಉಮಾಶ್ರೀ ಎಂಥ ಮಾತುಗಾತಿ ಎನ್ನುವುದು ಅವರ ಸಿನಿಮಾ ನೋಡಿದವರಿಗೆಲ್ಲಾ ಗೊತ್ತಿರುವಂಥದ್ದೇ. ಸಿನಿಮಾ ಮಾತ್ರವಲ್ಲ ನಾಟಕಗಳಲ್ಲೂ ಮಾತಿನಮಲ್ಲಿಯೆಂದೇ ಉಮಾಶ್ರೀ ಹೆಸರಾದವರು. ದೇವನೂರು ಮಹಾದೇವ ಅವರ ಒಡಲಾಳ ನಾಟಕದಲ್ಲಿನ ಸಾಕವ್ವನ ಪಾತ್ರವೊಂದೇ ಸಾಕು ; ಉಮಾಶ್ರೀ ಅವರ ಮಾತಿನ ವರಸೆಗೆ- ಪ್ರಖರತೆಗೆ ಕನ್ನಡಿ ಹಿಡಿಯಲು! ಎಲೆಯಡಿಕೆ ಮೆಲ್ಲುತ್ತಾ, ತುಸು ಕುಂಟುತ್ತಾ ಊರಿನ ತಿಪ್ಪೆಗುಂಡಿಗಳಲ್ಲಿ ತನ್ನ ಕಳೆದುಹೋದ ಕೋಳಿಯ ಪುಕ್ಕಗಳನ್ನು ಹುಡುಕುವ ಹೆಣ್ಣಾಗಿ ; ಹತಾಶೆ, ರೋಷ, ಜೀವನ ಪ್ರೀತಿಗಳನ್ನು ಉಮಾಶ್ರೀ ಅನನ್ಯವಾಗಿ ಅಭಿವ್ಯಕ್ತಿಸಿದ್ದರು. ಅದೇ ಉಮಾಶ್ರೀ ಸಿನಿಮಾದಿಂದ ವಿಧಾನಸೌಧಕ್ಕೆ ಬಂದದ್ದೇ ತಡ ಗೌರಮ್ಮನಾಗಿಬಿಟ್ಟರು.

ಎನ್ಟಿಆರ್‌, ಎಂಜಿಆರ್‌ ಅಂಥ ಅಪವಾದಗಳನ್ನು ಹೊರತುಪಡಿಸಿದರೆ, ಜನಮುಖಿಯಾದಾಗಲೆಲ್ಲ ಬಹುತೇಕ ಸಿನಿಮಾ ನಟರ ಬಂಡವಾಳ ಬಯಲಿಗೆ ಬಿದ್ದಿದೆ. ಸಿನಿಮಾದಲ್ಲಿನ ಜೋರು, ಜಾಣತನ, ಪ್ರಭಾವಳಿಯೆಲ್ಲ ಜನರೆದುರು ಕರಗಿ ಅವರ ಪೆದ್ದುತನ ಬೆಳಕಿಗೆ ಬೀಳುತ್ತದೆ. ಉಮಾಶ್ರೀ ಅವರ ವಿಷಯದಲ್ಲಿ ಆದದ್ದೂ ಇದೇನೇ.

ಸಿನಿಮಾದಲ್ಲಿ ಜೋರು ಗಂಟಲಿನ ಈ ಹೆಣ್ಣು ಮಗಳು ರಾಜಕೀಯ ಆಖಾಡಕ್ಕೆ ಇಳಿದಾಗ ತಣ್ಣಗಾದಳು. ಮೊದಲಿಗೆ ಬಂಗಾರಪ್ಪನವರ ಹಿಂದೆ ಕಾಣಿಸಿಕೊಂಡು, ಚುನಾವಣೆ- ಸೋಲು ಅನುಭವವನ್ನು ಉಂಡೂ ರಾಜಕೀಯದಲ್ಲೇ ಉಳಿದ ಈ ಗಟ್ಟಿಗಿತ್ತಿಗೆ ವಿಧಾನಸೌಧದ ಬಾಗಿಲು ತೆರೆದದ್ದು ಎಸ್ಸೆಂ.ಕೃಷ್ಣ . ಜಯಂತಿ, ಜಯಮಾಲ ಅವರಂಥ ಸೀನಿಯರ್‌ ತಾರೆಯರನ್ನು , ಕಿತ್ತೂರು ಚನ್ನಮ್ಮ ಪ್ರಭೆಯಲ್ಲೇ ಹಣ್ಣಾದ ಸರೋಜಾದೇವಿಯಂಥ ಹೆಣ್ಣು ಮಗಳನ್ನು ಹಿಂದೂಡಿ ವಿಧಾನ ಪರಿಷತ್ತು ಪ್ರವೇಶಿಸಿದ ಹೆಚ್ಚುಗಾರಿಕೆ ಉಮಾಶ್ರೀ ಅವರದು. ಆದರೆ ಅಷ್ಟೇ ಸಾಕೆ?

ಜನತೆಯ ಹಣದಲ್ಲಿ , ಜನತೆಯ ಪ್ರತಿನಿಧಿಗಳಾಗಿ ವಿಧಾನ ಸೌಧದಲ್ಲಿ ಕೂರುವ ಈ ಮಂದಿ ಯಾವತ್ತಾದರೂ ಜನರ ಸಮಸ್ಯೆಗಳಿಗೆ ಗಂಟಲಾದದ್ದುಂಟಾ? ಹಾಗೆ ನೋಡಿದರೆ, ಉಮಾಶ್ರೀ ಸಮಾಜದ ಮಧ್ಯಮ, ಕೆಳ ಸ್ತರಗಳನ್ನು ಕಂಡು ಬೆಳೆದ ಹೆಣ್ಣು ಮಗಳು. ಆಕೆ ಸಿನಿಮಾ ಗಂಟಲಲ್ಲಿ ಅಲ್ಲದಿದ್ದರೂ, ಪರಿಷತ್ತಿನಲ್ಲಿ ಸಣ್ಣ ದನಿಯಾಗಿಯಾದರೂ ಉಳಿಯುತ್ತಾರೆನ್ನುವ ನಿರೀಕ್ಷೆಯಿತ್ತು . ಆದರೆ, ಅವರು ತಮ್ಮ ಗಂಟಲನ್ನು ಉಳಿಸಿಕೊಂಡಿದ್ದು ಸಿನಿಮಾಗೆ ಮಾತ್ರ. ಜನರ ಪಾಡು ಬಿಡಿ, ಸಿನಿಮಾ ಸಮಸ್ಯೆಗಳ ಕುರಿತಾದರೂ ಉಮಾಶ್ರೀ ಪ್ರಸ್ತಾಪಿಸಿದ ತುಣುಕು ಕೂಡ ಮಾಧ್ಯಮಗಳಲ್ಲಿ ವರದಿಯಾಗಲಿಲ್ಲ . ಅವರು ಪರಿಷತ್ತಿನ ಸದಸ್ಯೆ ಅನ್ನುವುದನ್ನೇ ಜನ ಮರೆಯುವಷ್ಟರ ಮಟ್ಟಿಗೆ ಉಮಾಶ್ರೀ ಮೌನವಾಗಿ ಉಳಿದರು.

ಸಿನಿಮಾದವರಿಂದ ಯಾವ ನಾಡು ಉದ್ಧಾರವಾಗಿದೆ ಹೇಳಿ ?

ಉಮಾಶ್ರೀ ಅಂಥವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ , ನಿಜ. ಇಷ್ಟಕ್ಕೂ ಸಿನಿಮಾದವರಿಂದ ಯಾವ ನಾಡು ಉದ್ಧಾರವಾಗಿದೆ ಹೇಳಿ. ಎಂಜಿಆರ್‌, ಎನ್ಟಿಆರ್‌ ಅಂಥವರು ಒಂದು ಹಂತದವರೆಗೆ ಸೃಷ್ಟಿಸಿದ್ದ ಭ್ರಮಾವಳಿ ಈಗ ಪೊಳ್ಳೆನ್ನುವುದು ಸ್ಪಷ್ಟವಾಗಿದೆ. ರಾಜ್ಯದ ಮಟ್ಟಿಗೆ ಹೇಳುವುದಾದರೆ ಅನಂತ್‌ನಾಗ್‌ರಂಥ ಬುದ್ಧಿಜೀವಿ ನಟ, ಸಚಿವರಾಗಿ ಎದುರಿಸಿದ ವೈಫಲ್ಯ ಕಣ್ಣೆದುರಿಗೇ ಇದೆ. ಮಾದೇಗೌಡರಂಥ ಸಜ್ಜನರನ್ನು ಸೋಲಿಸಿ ಅಂಬರೀಷ್‌ರನ್ನು ಸಂಸತ್ತಿಗೆ ಕಳಿಸಿದ್ದಕ್ಕೆ ಮಂಡ್ಯದ ಜನರಿಗೆ ದೊರೆತದ್ದಾದರೂ ಏನು? ತಮ್ಮ ಪರವಾಗಿ ದನಿಯೆತ್ತಲು ಇದ್ದ ಪ್ರಾಮಾಣಿಕ ದನಿಯನ್ನು ತಾವಾಗಿಯೇ ದೂರ ತಳ್ಳಿದ ಪಶ್ಚಾತ್ತಾಪವನ್ನು ಅವರು ಎದುರಿಸಲೇಬೇಕು ; ಇಂದಲ್ಲಾ ನಾಳೆ.

ಸಿನಿಮಾ ನಟರನ್ನು ಬಯ್ಯುವುದು ಇಲ್ಲಿನ ಉದ್ದೇಶವಲ್ಲ . ಆದರೆ ರಾಜಕಾರಣಕ್ಕೂ ಸಿನಿಮಾ ಸೆಟ್ಟಿಗೂ ವ್ಯತ್ಯಾಸ ಅರಿಯದ ಮಂದಿಯನ್ನು ಜನ ನಂಬಿದರೆ ಅಪಾಯ ಖಂಡಿತ. ಜನರ ಸಮಸ್ಯೆಗಳನ್ನು ಕುರಿತು ಚರ್ಚಿಸಲು, ಚಿಂತಿಸಲು, ಪರಿಹಾರ ತೋರಲು ಜನರಿಂದಲೇ ನೇರವಾಗಿ ಆಯ್ಕೆಯಾದ 224 ಮಂದಿ ಇರುವಾಗ ಉಮಾಶ್ರೀ ಅವರಂಥ ಪರೋಕ್ಷ ಪ್ರತಿನಿಧಿಗಳನ್ನು ಹೀಯಾಳಿಸುವುದೂ ಸಲ್ಲ. ಆದರೆ, ಅವಧಿ ಪೂರ್ತಿ ನವರಾತ್ರಿ ಬೊಂಬೆಗಳಂತೆ ಅಲಂಕಾರಕ್ಕುಳಿದುಬಿಟ್ಟರೆ ಏನು ಗತಿ? ಅವರು ಸದಸ್ಯರಾಗಿದ್ದು ಏನು ಪ್ರಯೋಜನ?

ಇಷ್ಟೆಲ್ಲಾ ಹೇಳಲಿಕ್ಕೆ ಕಾರಣವೆಂದರೆ,-
ಜನವರಿ 28 ರ ಸೋಮವಾರ ಉಮಾಶ್ರೀ ಸದನದಲ್ಲಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಅಂತರ್ಜಲದ ಮಟ್ಟ ಹಾಗೂ ಗುಣಮಟ್ಟ ಕುಸಿಯುತ್ತಿರುವ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ. ಉಮಾಶ್ರೀ ಅವರ ಈ ಕಾಳಜಿ ಮುಂದುವರಿಯಲಿ ; ಅವರ ಗಂಟಲು ದೊಡ್ಡದಾಗಲಿ.

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more