ಈ ವಾರ 'ಉಪಾಧ್ಯಕ್ಷ'ನ ಎದುರು 'ಬ್ಯಾಚುಲರ್ ಪಾರ್ಟಿ'; ಬಾಲಿವುಡ್‌ನಲ್ಲಿ 'ಫೈಟರ್' ಪಟ್ಟು
ಪ್ರತಿ ವರ್ಷ ಗಣರಾಜ್ಯೋತ್ಸವಕ್ಕೆ ದೊಡ್ಡ ದೊಡ್ಡ ಸಿನಿಮಾಗಳು ಪ್ರೇಕ್ಷಕರು ಮುಂದೆ ಬರುತ್ತದೆ. ಅತ್ತ ಬಾಲಿವುಡ್ ಮಾತ್ರವಲ್ಲದೇ ಇತ್ತ ಸ್ಯಾಂಡಲ್‌ವುಡ್‌ನಲ್ಲೂ ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗುತ್ತಿವೆ. ಕಳೆದ ವರ್ಷ ಶಾರುಖ್ ಖಾನ್ 'ಪಠಾಣ್' ಎದುರು ದರ್ಶನ್ 'ಕ್ರಾಂತಿ' ನಡೆದಿತ್ತು.
ಈ ವರ್ಷ ಕನ್ನಡದ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗಿಲ್ಲ. ಥಿಯೇಟರ್‌ಗಳಲ್ಲಿ ಇನ್ನು 'ಕಾಟೇರ'ನ ಆರ್ಭಟವೇ ಮುಂದುವರೆದಿದೆ. ಇದೀಗ ಜನವರಿ ಕೊನೆ ವಾರಾಂತ್ಯದಲ್ಲಿ 'ಬ್ಯಾಚುಲರ್ ಪಾರ್ಟಿ' ಹಾಗೂ 'ಉಪಾಧ್ಯಕ್ಷ' ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಜೊತೆಗೆ 'ಕೋಳಿ ಎಸ್ರು', 'ಕೇಸ್ ಆಫ್ ಕೊಂಡಾಣ', 'ಹದಿನೇಳೆಂಟು', 'ಮೂರನೇ ಕೃಷ್ಣಪ್ಪ' ಸಿನಿಮಾಗಳು ಕೂಡ ಪ್ರೇಕ್ಷಕರ ಮುಂದೆ ಬರ್ತಿದೆ.

ಬಾಲಿವುಡ್‌ನಲ್ಲಿ ಹೃತಿಕ್ ರೋಷನ್ 'ಫೈಟರ್' ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಸಿದ್ದಾರ್ಥ್ ಆನಂದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ವರ್ಷ ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬರುವುದು ಅನುಮಾನ. ಇದ್ದಿದ್ದರಲ್ಲೇ ದೊಡ್ಡ ಸಿನಿಮಾ ಅಂದ್ರೆ ಫೈಟರ್ ಎನ್ನಬಹುದು.
1. ಉಪಾಧ್ಯಕ್ಷ
ಚಿಕ್ಕಣ್ಣ ಹೀರೊ ಆಗಿ ನಟಿಸುತ್ತಿರುವ 'ಉಪಾಧ್ಯಕ್ಷ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಉಮಾಪತಿ ಶ್ರೀನಿವಾಸ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 10 ವರ್ಷಗಳ ಹಿಂದೆ ಬಂದಿದ್ದ 'ಅಧ್ಯಕ್ಷ' ಚಿತ್ರದಲ್ಲಿ ಶರಣ್ ಜೊತೆ ಚಿಕ್ಕಣ್ಣ 'ಉಪಾಧ್ಯಕ್ಷ' ಆಗಿ ಮಿಂಚಿದ್ದರು. ಈ ಬಾರಿ ಇಡೀ ಸಿನಿಮಾ ಚಿಕ್ಕಣ್ಣ ಆವರಿಸಿಕೊಂಡಿದ್ದಾರೆ. ನಾಯಕಿಯಾಗಿ ಮಲೈಕಾ ಸಾಥ್ ಕೊಟ್ಟಿದ್ದಾರೆ. ಶರಣ್ 'ಅಧ್ಯಕ್ಷ'ರಾಗಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಸ್ಯಾಂಡಲ್‌ವುಡ್ ಸ್ಟಾರ್‌ಗಳೆಲ್ಲಾ ಚಿಕ್ಕಣ್ಣನ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ರಶ್ಮಿಕಾ ಮಂದಣ್ಣ, ಕಿಚ್ಚ ಸುದೀಪ್, ಧ್ರುವ ಸರ್ಜಾ ಸೇರಿದಂತೆ ಹಲವರು ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.
2. ಬ್ಯಾಚುಲರ್ ಪಾರ್ಟಿ
ರಕ್ಷಿತ್ ಶೆಟ್ಟಿ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಒಂದು ದಿನ ಮೊದಲೇ ಪ್ರೀಮಿಯರ್ ಶೋ ಆರಂಭಿಸುತ್ತಿದೆ. ಗುರುವಾರ ಸಂಜೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಲಿದೆ. ಚಿತ್ರದಲ್ಲಿ ಲೂಸ್ ಮಾದ ಯೋಗಿ, ದಿಗಂತ್ ಹಾಗೂ ಅಚ್ಯುತ್ ಕುಮಾರ್ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದಾರೆ. ಅಭಿಜಿತ್ ಮಹೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ರಾಮು ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆಸಿದೆ. ಮೇಕಿಂಗ್ ಕೂಡ ಚೆನ್ನಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.

3. ಫೈಟರ್
ಈ ವಾರ ಬಿಡುಗಡೆ ಆಗುತ್ತಿರುವ ಸಿನಿಮಾಗಳಲ್ಲಿ ಮತ್ತೊಂದು ಪ್ರಮುಖವಾದ ಸಿನಿಮಾ 'ಫೈಟರ್'. ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ದೇಶಭಕ್ತಿ ಸಾರುವ ಅಂಶಗಳು ಸಿನಿಮಾದಲ್ಲಿದೆ. ವೈಮಾನಿಕ ಸಾಹಸದ ಮೊದಲ ಭಾರತದ ಸಿನಿಮಾ ಎನ್ನುವ ಹೆಗ್ಗಳಿಕೆ 'ಫೈಟರ್' ಚಿತ್ರದ್ದು. ಅನಿಲ್ ಕಪೂರ್, ಕರಣ್ ಸಿಂಗ್, ಅಕ್ಷಯ್ ಒಬೆರಾಯ್, ತಲಾಟ್ ಅಜಿಜ್, ಸಂಜೀವ್ ಜೈಸ್ವಾಲ್ ಚಿತ್ರದ ತಾರಾಗಣದಲ್ಲಿದ್ದಾರೆ.
4. ಕೇಸ್ ಆಫ್ ಕೊಂಡಾಣ
ವಿಜಯ್ ರಾಘವೇಂದ್ರ ಹಾಗೂ ಜಾಕಿ ಭಾವನಾ ನಟನೆಯ ಕ್ರೈಂ ಥ್ರಿಲ್ಲರ್ 'ಕೇಸ್ ಆಫ್ ಕೊಂಡಾಣ' ಸಿನಿಮಾ ಕೂಡ ಶುಕ್ರವಾರ ತೆರೆಗೆ ಬರ್ತಿದೆ. ದೇವಿ ಪ್ರಸಾದ್ ಶೆಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ತಂಡ ಈ ಹಿಂದೆ 'ಸೀತಾರಾಮ್ ಬಿನೋಯ್' ಎನ್ನುವ ಸಿನಿಮಾ ಮಾಡಿತ್ತು.


Click it and Unblock the Notifications











