ಉಪ್ಪಿ-ಶಶಾಂಕ್ ಸಿನಿಮಾ ಶುರು: ಇಬ್ಬರು ನಾಯಕಿಯರು
ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ಶಶಾಂಕ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರಲಿದೆ ಎಂದು ಬಹಳ ದಿನಗಳಿಂದ ಹೇಳಲಾಗ್ತಿತ್ತು. ಆ ಚಿತ್ರವೀಗ ಅಧಿಕೃತವಾಗಿ ಆರಂಭವಾಗಿದೆ.
ಸ್ವಾತಂತ್ರ್ಯ ದಿನದ ಪ್ರಯುಕ್ತ ಉಪೇಂದ್ರ ನಟನೆ ಮತ್ತು ಶಶಾಂಕ್ ನಿರ್ದೇಶನ ಹಾಗೂ ನಿರ್ಮಾಣದ ಹೊಸ ಸಿನಿಮಾಗೆ ಮುಹೂರ್ತ ನಡೆದಿದೆ. ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಇಬ್ಬರು ನಾಯಕಿಯರಿದ್ದು, ನಿಶ್ವಿಕಾ ನಾಯ್ಡು ಮತ್ತು 'ಬೀರ್ ಬಲ್' ಖ್ಯಾತಿಯ ರುಕ್ಮಿಣಿ ಜೋಡಿಯಾಗಿದ್ದಾರೆ.
ಐ ಲವ್ ಯೂ ಸಿನಿಮಾದ ಬಳಿಕ ಹೊಸ ಚಿತ್ರಕ್ಕೆ ಉಪ್ಪಿ ಚಾಲನೆ ನೀಡಿದ್ದಾರೆ. ಕಥೆ ಬಗ್ಗೆ ಹೆಚ್ಚು ಬಿಟ್ಟು ಕೊಡದ ನಿರ್ದೇಶಕರು, ಸದ್ಯದ ರಾಜಕೀಯ ಬೆಳವಣಿಗೆಯನ್ನ ಕೇಂದ್ರವಾಗಿರಿಸಿಕೊಂಡು ಚಿತ್ರಕಥೆ ಮಾಡಿದ್ದಾರಂತೆ.

ರಾಜಕೀಯ ಕುರಿತು ಎಂದಾಕ್ಷಣ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಯಾಕಂದ್ರೆ, ರಾಜಕೀಯವನ್ನ ಟೀಕಿಸುವಲ್ಲಿ ಉಪೇಂದ್ರ ನಿಸ್ಸೀಮರು. ಅದೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಉಪ್ಪಿ, ಪ್ರಜಾಕೀಯದ ಬೋಧನೆ ಮಾಡುತ್ತಿದ್ದಾರೆ. ಹಾಗಾಗಿ, ಈ ಸಿನಿಮಾ ಸ್ವಲ್ಪ ರಿಯಲಿಸ್ಟಿಕ್ ಆಗಿ ಬರಬಹುದು ಎಂಬ ನಿರೀಕ್ಷೆ ಇದೆ.
ಸದ್ಯ ಸ್ಕ್ರಿಪ್ಟ್ ಗೆ ಪೂಜೆ ಮಾಡಿ ಸಿನಿಮಾ ಶುರು ಮಾಡಿರುವ ಶಶಾಂಕ್, ಉಪೇಂದ್ರ ಅವರ ಹುಟ್ಟುಹಬ್ಬದ ದಿನ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದಾರಂತೆ. ಸೆಪ್ಟೆಂಬರ್ 18ರಂದು ಉಪೇಂದ್ರ ಅವರ ಹುಟ್ಟುಹಬ್ಬವಿದೆ.


Click it and Unblock the Notifications











