Upendra Controversy: ಜಾತಿ ನಿಂದನೆ ಆರೋಪ.. 2ನೇ FIR ರದ್ದು ಕೋರಿದ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ!
ಸ್ಯಾಂಡಲ್‌ವುಡ್‌ನ ರಿಯಲ್‌ಸ್ಟಾರ್ ಉಪೇಂದ್ರ ಇತ್ತೀಚೆಗೆ ಫೇಸ್‌ಬುಕ್ ಲೈವ್ ಬಂದಿದ್ದರು. ಈ ವೇಳೆ ಲೈವ್‌ನಲ್ಲಿ ಪರಿಶಿಷ್ಟ ಜಾತಿಯ ಒಂದು ಪಂಗಡವನ್ನು ಕೆಟ್ಟವರು ಎಂಬುದಾಗಿ ಬಿಂಬಿಸಿ ಗಾದೆ ಬಳಸಿದ್ದಾರೆಂಬ ಆರೋಪವನ್ನು ಎದುರಿಸುತ್ತಿದ್ದಾರೆ.
ಈ ಕಾರಣಕ್ಕೆ ಜಾತಿ ನಿಂದನೆ ಆರೋಪದಡಿ ದಾಖಲಾಗಿರುವ ನಟ ಉಪೇಂದ್ರ ವಿರುದ್ಧ ಎರಡು ಎಫ್ಐಆರ್‌ಗಳು ದಾಖಲಾಗಿದ್ದವು. ಮೊದಲನೇ ಎಫ್‌ಐಆರ್‌ಗೆ ಮಧ್ಯಂತರ ತಡೆ ಸಿಕ್ಕಿದ ಬಳಿಕ ಎರಡನೇ ಎಫ್‌ಐಆರ್ ಅನ್ನೂ ರದ್ದು ಕೋರಿ ನಟ, ನಿರ್ದೇಶಕ ಉಪೇಂದ್ರ ಅಲಿಯಾಸ್ ಬಿ.ಎಂ.ಉಪೇಂದ್ರಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

2ನೇ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಉಪೇಂದ್ರ ಅವರ ಅರ್ಜಿಯ ವಿಚಾರಣೆ ಇಂದು(ಆಗಸ್ಟ್ 17)ರಂದು ನಡೆಯಲಿದೆ. ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಲಿದೆ.
ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿತ್ತು. ಆ ಬಳಿಕ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎರಡನೇ ಎಫ್‌ಐಆರ್ ದಾಖಲು ಮಾಡಲಾಗಿತ್ತು. ಈಗಾಗಲೇ ಮೊದಲನೇ ಪ್ರಕರಣದಲ್ಲಿ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಎರಡನೇ ಪ್ರಕರಣದಲ್ಲೂ ನೀಡಬೇಕು ಎಂದು ರಿಯಲ್‌ಸ್ಟಾರ್ ಉಪೇಂದ್ರ ಕೋರಿದ್ದಾರೆ.
ನಟ ಉಪೇಂದ್ರ ವಾದವೇನು?
"ಅರ್ಜಿದಾರರಾದ ರಿಯಲ್‌ಸ್ಟಾರ್ ಉಪೇಂದ್ರ ಯಾವುದೇ ರೀತಿ ಸಮಾಜಕ್ಕೆ ನೋವುಂಟು ಮಾಡಬೇಕು ಎಂಬ ಕಾರಣದಿಂದ ಈ ಹೇಳಿಕೆ ನೀಡಿಲ್ಲ. ಆಕಸ್ಮಿಕವಾಗಿ ಈ ಗಾದೆಯನ್ನು ಹೇಳಿದ್ದಾರೆ. ಇಷ್ಟೇ ಅಲ್ಲದೆ, ಗಾದೆ ಬಳಕೆ ಮಾಡುವುದು ಪರಿಶಿಷ್ಟ ಜಾತಿ, ಪಂಗಡಗಳ ಕಾಯಿದೆಯಡಿ ಅಪರಾಧವಲ್ಲ. ಹೀಗಾಗಿ ಈ ಜಾತಿ ನಿಂದನೆ ಪ್ರಕರಣಕ್ಕೆ ತಡೆ ನೀಡಬೇಕು" ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಉಪೇಂದ್ರ ಕೇವಲ ಗಾದೆಯನ್ನಷ್ಟೇ ಬಳಕೆ ಮಾಡಿದ್ದಾರೆಯೇ? ಇಲ್ಲ ಉದ್ದೇಶ ಪೂರ್ವಕವಾಗಿಯೇ ಪದ ಉಪಯೋಗಿಸಿದ್ದಾರೆಯೇ? ಇದಕ್ಕೆ ಏಕೆ ಇಷ್ಟೊಂದು ಎಫ್ಐಆರ್ ಎಂದು ಪ್ರಶ್ನಿಸಿದ ನ್ಯಾಯಪೀಠ, ಮೊದಲ ಎಫ್‌ಐಆರ್‌ಗೆ ತಡೆ ನೀಡಿ ಆದೇಶಿಸಿತ್ತು. ಈಗ ಎರಡನೇ ಎಫ್‌ಐಆರ್ ವಿಚಾರದಲ್ಲೂ ಇದೇ ಆದೇಶ ಹೊರಬೀಳಬಹುದೇ? ಎಂಬ ಕುತೂಹಲವಿದೆ.

ಉಪೇಂದ್ರ ಅರ್ಜಿಯಲ್ಲಿ ಏನಿದೆ?
ನಟ ಉಪೇಂದ್ರ ಹೆಸರಾಂತ ನಟರು. ಇವರು ಸಮಾಜದ ಮೌಲ್ಯಗಳನ್ನು ಗೌರವಿಸುತ್ತಿದ್ದಾರೆ. ಸಮಾಜದಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ತಮ್ಮ ಫೇಸ್‌ಬುಕ್ ಪೇಜ್ ಮೂಲಕ ತಮ್ಮ ಬೆಂಬಲಿಗರಿಗಾಗಿ ಲೈವ್ ಮಾಡಿದ್ದರು. ಈ ಸಂದರ್ಭದಲ್ಲಿ ಸಮಾಜದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರಲಿದೆ ಎಂದು ತಿಳಿಸುವ ಯತ್ನದಲ್ಲಿ ಪರಿಶಿಷ್ಟ ಜಾತಿಯ ಒಂದು ಸಮುದಾಯವನ್ನು ನಿಂದಿಸಬಹುದಾದ ಗಾದೆಯೊಂದನ್ನು ಬಳಸಿದ್ದಾರೆ.
ಅಲ್ಲದೆ, ಅರ್ಜಿದಾರರು (ಉಪೇಂದ್ರ) ಜಾತಿ, ಧರ್ಮ, ಸಮುದಾಯಗಳ ಆಧಾರದಲ್ಲಿ ಎಂದಿಗೂ ತಾರತಮ್ಯದಿಂದ ನೋಡಿಲ್ಲ. ತಮ್ಮ ಸಾರ್ವಜನಿಕ ಜೀವನದಲ್ಲಿ ಎಂದಿಗೂ ಪರಿಶಿಷ್ಟರಿಗೆ ನೋವಾಗುವಂತೆ ನಡೆದುಕೊಂಡಿಲ್ಲ. ಅರ್ಜಿದಾರರಿಗೆ ಎಲ್ಲ ಸಮುದಾಯಗಳಲ್ಲಿಯೂ ಅಪಾರ ಸ್ನೇಹಿತರು, ಹಿತೈಶಿಗಳು ಮತ್ತು ಅಭಿಮಾನಿಗಳು ಇದ್ದಾರೆ.
ಈ ಹೇಳಿಕೆಯಲ್ಲಿ ಯಾವುದೇ ಜಾತಿ ಹಾಗೂ ಪಂಗಡಗಳನ್ನು ಅಮಾನಿಸುವ ಉದ್ದೇಶದಿಂದ ಹೇಳಿಲ್ಲ. ಒಂದು ಸಾಮಾನ್ಯ ಪದವನ್ನಾಗಿ ಬಳಕೆ ಮಾಡಲಾಗಿದೆ. ಅಲ್ಲದೆ, ಈ ಗಾದೆಯನ್ನು ಬಳಕೆ ಮಾಡಿದ್ದರಿಂದ ಕೆಲವರಿಗೆ ನೋವಾಗಿದೆ ಎಂದು ಗೊತ್ತಾದ ತಕ್ಷಣ ವಿಡಿಯೋವನ್ನು ಡಿಲಿಟ್ ಮಾಡಲಾಗಿದೆ. ಜೊತೆಗೆ ತಕ್ಷಣಕ್ಕೆ ಕ್ಷಮೆಯಾಚಿಸಿದ್ದಾರೆಂದು ಅರ್ಜಿಯಲ್ಲಿ ತಿಳಿಸಲಾಗಿದೆ.


Click it and Unblock the Notifications











