ಕೊಂಬಿರುವ ಕುದುರೆ ಏರಿ ಬಂದ ಉಪೇಂದ್ರ; ಟೈಟಲ್ ಬಗ್ಗೆ ಹೇಳಿದ್ದೇನು?
ನಟ ಉಪೇಂದ್ರ ಮತ್ತೆ ನಿರ್ದೇಶನಕ ಟೋಪಿ ಧರಿಸಿದ್ದಾರೆ. ಕೆಲ ವರ್ಷ ನಿರ್ದೇಶನದಿಂದ ದೂರ ಉಳಿದಿದ್ದ ನಟ ಉಪೇಂದ್ರ ಈಗ ಮತ್ತೆ ನಿರ್ದೇಶಕನಾಗಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಉಪ್ಪಿ ಸಿನಿಮಾ ಮಾಡುವುದಾಗಿ ಈಗಾಲೇ ಘೋಷಿಸಿದರು. ಸಿನಿಮಾದ ಟೈಟಲ್ ಕೂಡ ರಿಲೀಸ್ ಆಗಿದೆ.
ಉಪೇಂದ್ರ ನಿರ್ದೇಶಿಸಲಿರುವ ಹೊಸ ಸಿನಿಮಾದ ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಅದು ಕೇವಲ ಚಿನ್ಹೆ ಆಗಿದ್ದ ಕಾರಣ ಉಚ್ಛಾರಣೆ ಕಷ್ಟಕರವಾಗಿದೆ. ಪಂಗನಾಮ ಚಿನ್ಹೆಯನ್ನು ಚಿತ್ರದ ಟೈಟಲ್ ಎಂದ ಉಪ್ಪಿ ಕುತೂಹಲ ಮೂಡಿಸಿದ್ದರು. ಈಗ ಆ ಎಲ್ಲಾ ಕುತೂಹಲಗಳಿಗೂ ನಟ ಉಪೇಂದ್ರ ಉತ್ತರ ಕೊಟ್ಟಿದ್ದಾರೆ. ಜೊತೆಗೆ ಹೊಸ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ.
ಈ ಟೈಟಲನ್ನು U ಮತ್ತು I ಎಂದು ಅರ್ಥೈಸಿಕೊಳ್ಳಲಾಗಿತ್ತು. ಆದರೆ ಅದಕ್ಕೆ ಈಗ ತೆರೆ ಬಿದ್ದಿದ್ದು, ಉಪ್ಪಿ ತಮ್ಮ ಹೊಸ ಚಿತ್ರ ಟೈಟಲ್‌ಗೆ ಹೊಸ ಅರ್ಥ ಕೊಟ್ಟಿದ್ದಾರೆ. ಉಪೇಂದ್ರ ಅವರ ನಿರ್ದೇಶನ ಅಂದರೆ ಹಾಗೆ. ಪ್ರತೀ ಹಂತದಲ್ಲೂ ವಿಭಿನ್ನತೆ ಮತ್ತು ಕುತೂಹಲಕಾರಿ ಅಂಶಗಳ ಜೊತೆಗೆ ತಲೆಕೆಡಿಸಿಕೊಳ್ಳುವ ಅಂಶಗಳು ಇರುತ್ತವೆ.

ಟೈಟಲ್ ಬಗ್ಗೆ ಉಪ್ಪಿ ಹೇಳಿದಿಷ್ಟು !
ನಟ ಉಪೇಂದ್ರ ಅವರು ಈ ಹೊಸ ಟೈಟಲ್ ಮತ್ತು ಪೋಸ್ಟರ್ ಬಗ್ಗೆ ಮಾತನಾಡಿದ್ದಾರೆ. ಟೈಟಲ್‌ನಲ್ಲಿ ಕೇವಲ ಚಿನ್ಹೆ ಇದೆ. ಇದನ್ನು ಉಚ್ಚಾರಣೆ ಮಾಡುದು ಹೇಗೆ, ಈ ಮೂಲಕ ಏನು ಹೇಳಲು ಹೊರಟಿದ್ದೀರಿ ಎನ್ನುವ ಪ್ರಶ್ನೆಗೆ ಉಪ್ಪಿ ಉತ್ತರ ನೀಡಿಲ್ಲ. ಯಾಕೆಂದರೆ ಅವರು ಜನರ ಉತ್ತರಗಳಿಗೆ ಕಾಯುತ್ತಿದ್ದಾರಂತೆ. ಫಿಲ್ಮಿ ಬೀಟ್ ಜೊತೆಗೆ ಮಾತನಾಡಿದ ಅವರು "ಈ ಟೈಟಲ್ ಏನೆಂದು ನೀವೆ ಊಹಿಸಿ, ನಿಮಗೆ ಏನು ಅನಿಸುತ್ತದೆ ಎನ್ನುವ ಕುತೂಹಲ ನನಗೆ ಇದೆ. ಟೈಟಲ್ ಬಗ್ಗೆ ಜನರು ಏನೆನಲ್ಲಾ ಹೇಳುತ್ತಾರೆ ಅಂತ ಕಾಯುತ್ತಿದ್ದೇನೆ" ಎಂದಿದ್ದಾರೆ.

ಪೋಸ್ಟರ್‌ನಲ್ಲಿ ಇರೋದೇನು?
ನಟ ಉಪೇಂದ್ರ ಅವರು ಡಿಫ್ರೆಂಟ್ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಹಾಗೆ ಈ ಹೊಸ ಪೋಸ್ಟರ್ ಗಮನಿಸಿದರೆ ಅಲ್ಲೂ ಕೂಡ ಸಾಕಷ್ಟು ವಿಭಿನ್ನ ವೈಶಿಷ್ಟ್ಯಗಳು ತಲೆಗೆ ಹುಳ ಬಿಡುತ್ತವೆ. ಮೊದಲನೆಯದಾಗಿ ಉಪ್ಪಿ ಕುದುರೆ ಏರಿ ಬಂದಿದ್ದಾರೆ. ಕುದುರೆಗೆ ಕೊಂಬು ಇರುವುದಿಲ್ಲ. ಆದರೆ ಈ ಪೋಸ್ಟರ್‌ನಲ್ಲಿ ಕುದುರೆಗೆ ಕೊಂಬು ಇದೆ. ಕೊಂಬಿನ ಕುದುರೆ ಮೇಲೆ ವಾರಿಯರ್ ರೀತಿಯಲ್ಲಿ ಉಪೇಂದ್ರ ಕುಳಿತಿದ್ದಾರೆ. ಒಂದು ಕಡೆ ಬಾಹ್ಯಾಕಾಶ, ಉಪಗ್ರಹ ಕಾಣುತ್ತದೆ. ಹಾಗೆ ಒಂದು ಊರು, ರೈಲು ಗಾಡಿ ಮತ್ತು ಗುಡ್ಡ ಬೆಟ್ಟದ ಪ್ರದೇಶ ಕಾಣಿಸುತ್ತದೆ. ಇನ್ನು ಪೋಸ್ಟರ್ ಮೇಲೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಇಂಗ್ಲಿಷ್‌ನಲ್ಲಿ ಸಾಲು ಬರೆಯಲಾಗಿದೆ. ಅದು 'ಇವನು ಯಾವ ಬರ್ತಾನೆ ಗೊತ್ತಿಲ್ಲ, ಆದರೆ ಖಂಡಿತಾವಾಗಿ ಬರುತ್ತಾನೆ' ಎನ್ನುವ ಅರ್ಥ ಕೊಡುತ್ತದೆ.

ಪೋಸ್ಟರ್‌ನಲ್ಲಿದೆ ಹಲವು ಹಿಂಟ್‌ಗಳು!
ಇನ್ನು ಈ ಚಿತ್ರದ ಮೊದಲ ಪೋಸ್ಟರ್ ಮಾತ್ರ ರಿಲೀಸ್ ಆಗಿದೆ. ಈ ಹಿಂದೆ ಪಂಗನಾಮ ಮತ್ತು U, I ರೀತಿಯಲ್ಲಿ ಕಾಣಿಸಿಕೊಂಡಿದ್ದ ಟೈಟಲ್ ಬದಲಾಗಿದೆ. ಕುದುರೆ ಲಾಳ ಚಿತ್ರದ ಟೈಟಲ್ ಆಗಿದೆ. ಕುದುರೆ ಲಾಳದ ನಡುಗೆ ಅಗ್ನಿ ಜ್ವಾಲೆ ಇದೆ. ಕುದುರೆಯ ಕಾಲುಗಳಿಗೆ ಲಾಳ ಹಾಕುತ್ತಾರೆ. ಅಲ್ಲದೆ ಈ ಕುದುರೆ ಲಾಳದ ಬಗ್ಗೆ ಸಾಕಷ್ಟು ನಂಬಿಕೆಗಳು ಇವೆ. ಮನೆಯಲ್ಲಿ ಕುದುರೆ ಲಾಳ ಇಟ್ಟರೆ ಅದೃಷ್ಟ ಅಂತಲೂ ಹೇಳಲಾಗುತ್ತದೆ. ಇದೊಂದು ಮೂಡನಂಬಿಕೆ ಅಂತಲೂ ಹೇಳುತ್ತಾರೆ. ಇಲ್ಲಿ ಚಿತ್ರದ ಟೈಟಲ್‌ನಲ್ಲಿ ಲಾಳ ಇದೆ. ಹಾಗಾಗಿ ಇಲ್ಲಿ ಉಪ್ಪಿ ಏನು ಹೇಳುತ್ತಿದ್ದಾರೆ, ಲಾಳ ಇಟ್ಟು ಅದೃಷ್ಟ, ದುರಾದೃಷ್ಟದ ಕಥೆ ಹೇಳುತ್ತಾರಾ ಎನ್ನುವ ಶಂಕೆ ಹುಟ್ಟಿಕೊಂಡಿದೆ. ಆದರೆ ಕುದುರೆಗಳ ಪಾದ ಸವಿಯ ಬಾದರು ಎನ್ನುವ ಕಾರಣಕ್ಕೆ ಲಾಳಗಳನ್ನು ಹಾಕುತ್ತಾರೆ. ಹಾಗಾಗಿ ಇದೊಂದು ಹೋರಾಟಗಾರನ ಕಥೆ ಇರಬಹುದಾ ಎನ್ನುವ ಊಹೆಗಳು ಮೂಡಿವೆ.

ಮೇ ತಿಂಗಳಿಂದ ಚಿತ್ರದ ಶೂಟಿಂಗ್ ಶುರು!
ಗ್ಯಾಪ್ ಬಳಿಕ ಬರುತ್ತಿರುವುದರಿಂದ ಉಪೇಂದ್ರ ಅವರು ಚಿತ್ರದಲ್ಲಿ ಹೊಸದೇನನ್ನೋ ಹೇಳಲಿದ್ದಾರೆ ಎನ್ನುವ ನಿರೀಕ್ಷೆ ಇದೆ. ಸದ್ಯ ಚಿತ್ರದಲ್ಲಿ ಉಪ್ಪಿ ನಟನೆ ಮಾತ್ರ ಖಚಿತ ಆಗಿದೆ. ಮುಂದಿನ ದಿನಗಳಲ್ಲಿ ಚಿತ್ರದಲ್ಲಿನ ಪಾತ್ರ ವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಇದೇ ವರ್ಷ ಮೇ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಈ ಬಗ್ಗೆ ಚಿತ್ರದ ನಿರ್ಮಾಕ ಕೆ.ಪಿ. ಶ್ರೀಕಾಂತ್ ಫಿಲ್ಮೀ ಬೀಟ್‌ಗೆ ಸ್ಪಷ್ಟ ಪಡಿಸಿದ್ದಾರೆ. ಈ ಚಿತ್ರಕ್ಕೆ ಜಿ.ಮನೋಹರನ್ ಮತ್ತು ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಚಿತ್ರ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ನಿರ್ಮಾಣ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.


Click it and Unblock the Notifications











