ಉಪೇಂದ್ರ ಹೊಸ 'ಸಿನಾಮ' ಪೋಸ್ಟರ್ ಬಿಡುಗಡೆ: ಮತ್ತೆ ಹುಳ ಬಿಟ್ಟ ಉಪ್ಪಿ
ಉಪೇಂದ್ರ ಹೊಸ ಸಿನಿಮಾ ನಿರ್ದೆಶನ ಮಾಡುತ್ತಿದ್ದಾರೆ. ಸಿನಿಮಾದ ಬಹು ಭಿನ್ನ ಪೋಸ್ಟರ್ ಇಂದು ಬಿಡುಗಡೆ ಆಗಿದ್ದು, ಇದು ಸಿನಿಮಾ ಅಲ್ಲ 'ಸಿನಾಮ' ಎಂದು ಪೋಸ್ಟರ್‌ನಲ್ಲಿ ಅವರೇ ಹೇಳಿಕೊಂಡಿದ್ದಾರೆ.
ಬುದ್ಧಿಗೆ ಕೆಲಸ ಕೊಡುವ ಸಿನಿಮಾಗಳನ್ನು ಮಾಡುವುದರಲ್ಲಿ ಉಪೇಂದ್ರ ಎತ್ತಿದ ಕೈ, ಅವರ ಸಿನಿಮಾಗಳ ವಿಶೇಷತೆಯೇ 'ವಿಚಿತ್ರತೆ'. ಇಂಥಹಾ ಉಪೇಂದ್ರ ಈಗ ತಮ್ಮದೇ 'ಬ್ರ್ಯಾಂಡ್'ನ ಮತ್ತೊಂದು ಸಿನಿಮಾ ಹೊತ್ತು ತರುತ್ತಿದ್ದಾರೆ.
ಸಿನಿಮಾದ ಪೋಸ್ಟರ್ ಒಂದು ಇಂದು ಬಿಡುಗಡೆ ಆಗಿದ್ದು, ಪೋಸ್ಟರ್ ನೋಡಿದ ಪ್ರೇಕ್ಷಕರು ತಲೆ ಕೆರೆದುಕೊಳ್ಳುತ್ತಿದ್ದಾರೆ. ಪೋಸ್ಟರ್‌ನಲ್ಲಿ ಕಪ್ಪು ಕುದುರೆಯ ಮುಖವಿದೆ. ಅದರ ಮೂಗಿಗೆ ಹಾಕಲಾಗಿರುವ ಕಡಗ ಮಾದರಿಯ ನತ್ತು ಅದರ ಮೂಗಿನ ಮೇಲ್ಭಾಗದಿಂದ ಒಸರುತ್ತಿರುವ ರಕ್ತ ನಾಮವನ್ನು ನೆನಪಿಸುತ್ತಿದೆ.
Recommended Video


ಕುದುರೆಯ ಮುಖದ ಮೇಲೆ ಕೆಲವು ಚಿತ್ರಗಳಿವೆ ಆ ಚಿತ್ರಗಳು ಏನೇನನ್ನೋ ಸೂಚಿಸುತ್ತಿವೆ. ಕುದುರೆಯ ಮುಖದ ಮೇಲೆ ಉಪೇಂದ್ರ ಗಾಬರಿಯಿಂದ ನೋಡುತ್ತಿರುವ ಚಿತ್ರವೊಂದಿದೆ. ಉಗಿಬಂಡಿ (ಹಳೆ ಕಾಲದ ರೈಲು)ಯ ಚಿತ್ರವಿದೆ. 'ಕ್ರಿಯೇಷನ್ ಆಫ್ ಆಡಮ್' ನೆನಪಿಸುವ ಚಿತ್ರವೊಂದು ಕುದುರೆಯ ಮುಖದ ಮೇಲಿದೆ. ಪುರಾತನ ಮರದ ಬಿಳಲುಗಳು, ಒಂದು ಅನೂಹ್ಯ ಬೆಳಕು ಇನ್ನೂ ಕೆಲವು ಚಿತ್ರಗಳು ಕುದುರೆಯ ಮುಖದ ಮೇಲಿದೆ.
ಪೋಸ್ಟರ್ ನೋಡಿದರೆ ಏನೊಂದು ಅರ್ಥವಾಗುವುದಿಲ್ಲವಾದರೂ, ಒಂದು ಭಿನ್ನವಾದ ಕತೆಯೊಂದನ್ನಂತೂ ಉಪೇಂದ್ರ ಹೇಳಲು ತಯಾರಾಗಿದ್ದಾರೆ ಎಂಬ ಖಾತ್ರಿ ಸಿಗುತ್ತದೆ. ಈ ಪೋಸ್ಟರ್ ಜೊತೆಗೆ 'ಬುದ್ಧಿಯ ಬಿರುಗಾಳಿ' ಎಂಬ ಟ್ಯಾಗ್ ಲೈನ್ ಸಹ ನೀಡಿದ್ದಾರೆ ಉಪೇಂದ್ರ. ಜೊತೆಗೆ ಸಿನಿಮಾದ ಪೋಸ್ಟರ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು 'ಬಡಿದೆಬ್ಬಿಸುವಿರಾ' ಎಂದು ಬರೆದುಕೊಂಡಿದ್ದಾರೆ.
ಉಪೇಂದ್ರದ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಾಳೆ (ಜೂನ್ 03) ರಂದು ಗುಟ್ಟಳ್ಳಿಯ ಬಂಡೆ ಮಹಾಕಾಳಿ ದೇವಾಲಯದಲ್ಲಿ ನಡೆಯಲಿದ್ದು, ನಟ ಸುದೀಪ್, ಡಾಲಿ ಧನಂಜಯ್, ಶಿವರಾಜ್ ಕುಮಾರ್, ದುನಿಯಾ ವಿಜಯ್ ಅವರುಗಳು ಆಗಮಿಸಲಿದ್ದಾರೆ.


Click it and Unblock the Notifications











