ದುಡ್ಡು ಬೇಕೆಂದು ಮಗನಿಗೆ ಪ್ರಿಯಾಂಕ ಮೆಸೇಜ್, ಸೈಬರ್ ವಂಚಕನ ಮಾತು ನಂಬಿ ಉಪೇಂದ್ರ ಮಗ ಕಳೆದುಕೊಂಡ ಹಣ ಎಷ್ಟು ?
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು. ಇದಕ್ಕೆ ಕೈಗನ್ನಡಿ ಎಂಬಂತೆ ಅನೇಕರು ಸಾಮಾಜಿಕ ಪ್ರಜ್ಞೆ.. ಮನುಜ ಸೂಕ್ಷ್ಮತೆ..ಮತ್ತು ಸಂವೇದನೆ ಮರೆತು ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನ ಮಾಡ್ತಾರೆ.
ಆದರೆ ಇಂತಹ ಚಿತ್ರರಂಗದರು ಕೂಡ ಕೆಲ ಒಮ್ಮೆ ಯಾಮಾರುತ್ತಾರೆ. ಅದೆಲ್ಲೋ ಕುಳಿತು ಅದ್ಯಾರೋ ಬೀಸಿದ ವಂಚನೆಯ ಜಾಲಕ್ಕೆ ಸಿಲುಕಿ ವಿಲ ವಿಲ ಒದ್ದಾಡುತ್ತಾರೆ. ತಮ್ಮಿಂದ ತಪ್ಪಾಗಿದೆ ಎನ್ನುವ ವಿಚಾರ ಗೊತ್ತಾದ ನಂತರ ಹಣೆ ಹಣೆ ಚಚ್ಚಿಕೊಳ್ಳುತ್ತಾರೆ. ಇದಕ್ಕೆ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕ ಅವರ ಸೈಬರ್ ಪ್ರಕರಣ ಸದ್ಯದ ಉದಾಹರಣೆ.

ಹೌದು, ಎಲ್ಲರಿಗೆ ಈಗಾಗಲೇ ಗೊತ್ತಾಗಿರುವಂತೆ, ಮಾಧ್ಯಮಗಳಲ್ಲಿ ವರದಿಯಾದಂತೆ ಸೈಬರ್ ವಂಚಕ ಇಂದು (ಸೆಪ್ಟೆಂಬರ್ 15) ಭಾರತೀಯ ಚಿತ್ರರಂಗದ ಬುದ್ದಿವಂತ ನಿರ್ದೇಶಕ ಉಪೇಂದ್ರ ಅವರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾನೆ. ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಅವರನ್ನು ಯಾಮಾರಿಸಿ ಫೋನ್ ಹ್ಯಾಕ್ ಮಾಡಿದ್ದಾನೆ. ಸಾಲದಕ್ಕೆ ಪ್ರಿಯಾಂಕ ಅವರ ಫೋನ್‌ನಲ್ಲಿರುವ ನಂಬರ್‌ಗಳಿಗೆ ಕೂಡ ತುರ್ತಾಗಿ ಹಣ ಬೇಕು ಕೂಡಲೇ ಕಳುಹಿಸಿ ಎಂದು ವಾಟ್ಸಾಪ್ ಮೂಲಕ ಮೆಸೇಜ್ ಕೂಡ ಕಳುಹಿಸಿದ್ದಾನೆ.
ಪ್ರಿಯಾಂಕ ಉಪೇಂದ್ರ ಅವರಿಂದ ತಮಗೆ ಬಂದ ಈ ಮೆಸೇಜ್‌ನ್ನು ಕಂಡು ಹಲವರು ನಿಜಾ ಎಂದೇ ಅಂದುಕೊಂಡಿದ್ದಾರೆ. ಏನೋ ಎಮರ್ಜೆನ್ಸಿ ಇರಬಹುದು ಎಂದು ಕೆಲವರು ಫೋನನ್ನೂ ಮಾಡದೇ, ಮರು ಯೋಚಿಸದೇ ದುಡ್ಡನ್ನು ಕೂಡ ಕಳುಹಿಸಿದ್ದಾರೆ.
ಅವರಿವರು ಯಾಕೆ.. ಉಪೇಂದ್ರ ಮತ್ತು ಪ್ರಿಯಾಂಕ ಅವರ ಮುದ್ದಿನ ಮಗ ಆಯುಷ್ ಕೂಡ ಸೈಬರ್ ವಂಚಕ ಕಳುಹಿಸಿದ ಮೆಸೇಜ್‌ನ ಸಲೀಸಾಗಿ ನಂಬಿದ್ದಾರೆ. ತಮ್ಮ ತಾಯಿ ಪ್ರಿಯಾಂಕ ಅವರಿಗೆ ಕರೆ ಮಾಡಿ ಏನಾಯ್ತೆಂದು ವಿಚಾರಿಸದೇ ಹಣವನ್ನು ಕೂಡ ಕಳುಹಿಸಿದ್ದಾರೆ. ಅದು ಒಂದು ಸಾವಿರ ಅಲ್ಲ.. ಎರಡು ಸಾವಿರ ಅಲ್ಲ ಬರೋಬ್ಬರಿ ಐವತ್ತೈದು ಸಾವಿರ.
ಖುದ್ದು ಈ ವಿಚಾರವನ್ನು ಇಂದು (ಸೆಪ್ಟೆಂಬರ್ 15) ಉಪೇಂದ್ರ ಮಾಧ್ಯಮದವರ ಎದುರು ಹೇಳಿದ್ದಾರೆ. ನಮಗೆ ಗೊತ್ತಿರುವ ಕೆಲವರು ದುಡ್ಡು ಕಳಿಸಿದ್ದಾರೆ. ಕೂಡಲೇ ನಾವು ಇಲ್ಲಿ ಬಂದು ದೂರು ನೀಡಿದ್ದೇನೆ. ಇಂತಹ ಮೆಸೇಜ್ ಬಂದರೆ ದಯವಿಟ್ಟು ಯಾರೂ ಕೂಡ ದುಡ್ಡು ಕಳಿಸಬೇಡಿ ಎಂದು ಮಾಧ್ಯಮದವರ ಕ್ಯಾಮರಾ ಮುಖೇನ ಕೂಡ ಮನವಿಯನ್ನು ಮಾಡಿಕೊಂಡಿರುವ ಉಪೇಂದ್ರ ನನ್ನ ಮಗ ಕೂಡ ನಿಜಾ ಇರಬಹುದು ಎಂದುಕೊಂಡು ₹55000 ಹಣ ಕಳುಹಿಸಿ ಮೋಸ ಹೋಗಿದ್ದಾನೆ ಎಂದು ಹೇಳಿದ್ದಾರೆ.

ಕೇವಲ ನನ್ನ ಮಗ ಮಾತ್ರ ಅಲ್ಲ ಇನ್ನು ಕೆಲ ಸ್ನೇಹಿತರು ಕೂಡ ಬಂದಿರುವ ಮೆಸೇಜ್‌ನ ಪ್ರಿಯಾಂಕನೇ ಕಳುಹಿಸಿರಬೇಕು ಎಂದುಕೊಂಡು ಹಣ ಕಳುಹಿಸಿದ್ದಾರೆ ಎಂದಿರುವ ಉಪೇಂದ್ರ ಯಾರೆಲ್ಲಾ ಕಳಿಸಿದ್ದಾರೆ ಎನ್ನುವುದು ಗೊತ್ತಿಲ್ಲ. ಎಲ್ಲವನ್ನೂ ಸದ್ಯ ಚೆಕ್ ಮಾಡಬೇಕು ಎಂದು ಹೇಳಿದ್ದಾರೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಕೂಡ ಹೇಳಿದ್ದಾರೆ.
ಸದ್ಯ ಉಪೇಂದ್ರ ದಂಪತಿ ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿ, ದೂರು ದಾಖಲಿಸಿದ್ದಾರೆ. ತಮ್ಮ ತಮ್ಮ ಸೋಶಿಯಲ್ ಮೀಡಿಯಾಗಳ ಮೂಲಕ ಕೂಡ ತಮ್ಮ ಫೋನ್ ಹ್ಯಾಕ್ ಆಗಿದೆ ಯಾರು ದುಡ್ಡು ಕಳುಹಿಸಬೇಡಿ ಎಂದು ಮನವಿ ಮಾಡಿದ್ದಾರೆ.ಇನ್ನು ಉಪೇಂದ್ರ ಮತ್ತು ಪ್ರಿಯಾಂಕ ಅವರ ದೂರು ದಾಖಲಿಸಿಕೊಂಡಿರುವ ಪೊಲೀಸರು ಹಣ ಎಗರಿಸಿದ ಚಾಲಾಕಿ ಹ್ಯಾಕರ್‌ನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪೊಲೀಸರ ಕೈಗೆ ಈ ಖತರ್ನಾಕ್ ಖದೀಮ ಸಿಗುತ್ತಾನಾ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











