'ಉಪೇಂದ್ರ' ರೀ-ರಿಲೀಸ್ ಖರ್ಚು, ಫಸ್ಟ್ ವೀಕ್ ಗಳಿಕೆ ಎಷ್ಟು? ನಿರ್ಮಾಪಕರಿಂದ ಮಾಹಿತಿ
ರಿಯಲ್ ಸ್ಟಾರ್ ನಿರ್ದೇಶಿಸಿ, ನಟಿಸಿದ 'ಉಪೇಂದ್ರ' ಸಿನಿಮಾ ಮತ್ತೆ ತೆರೆಮೇಲೆ ಸದ್ದು ಮಾಡ್ತಿದೆ. 25 ವರ್ಷಗಳ ಬಳಿಕ ಸಿನಿಮಾ ರೀ-ರಿಲೀಸ್ ಆಗಿ ಅಭಿಮಾನಿಗಳನ್ನು ರಂಜಿಸುತ್ತಿದೆ. ಉಪ್ಪಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ರೂಪದಲ್ಲಿ ತೆರೆಗೆ ಬಂದಿರುವ ಸಿನಿಮಾ ಇದೀಗ ಎರಡನೇ ವಾರಕ್ಕೆ ಕಾಲಿಡುತ್ತಿದೆ.
'ಉಪೇಂದ್ರ' ಚಿತ್ರದಲ್ಲಿ ಉಪ್ಪಿ ಜೊತೆ ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಶ್ರೀನಿವಾಸ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶಿಲ್ಪಾ ಶ್ರೀನಿವಾಸ್ ಚಿತ್ರವನ್ನು ನಿರ್ಮಾಣ ಮಾಡಿದ್ದರು. 2 ದಶಕಗಳ ಹಿಂದೆ ಮೂರೂವರೆ ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 8ರಿಂದ 10 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಸದ್ಯ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ರೀ-ರಿಲೀಸ್ ಮಾಡುವ ಪ್ರಯತ್ನ ಹೆಚ್ಚಾಗುತ್ತಿದೆ. ಹಳೇ ಕಲ್ಟ್ ಸಿನಿಮಾಗಳನ್ನು ಅಭಿಮಾನಿಗಳು ಹೊಸ ರೂಪದಲ್ಲಿ ತೆರೆಮೇಲೆ ನೋಡಲು ಇಷ್ಟಪಡುತ್ತಿದ್ದಾರೆ. ನಿರ್ಮಾಪಕರು, ವಿತರಕರು ಕೂಡ ಬಾಕ್ಸಾಫೀಸ್ ಮೇಲೆ ಕಣ್ಣಿಟ್ಟು ಇಂತಹ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಉಪ್ಪಿ ನಿರ್ದೇಶಿಸಿ ನಟಿಸಿದ್ದ 'ಎ' ಸಿನಿಮಾ ಕೂಡ ಇದೇ ರೀತಿ ರೀ-ರಿಲೀಸ್ ಆಗಿ ಅಭಿಮಾನಿಗಳ ಮನಗೆದ್ದಿತ್ತು.
ಮುಂದಿನ ತಿಂಗಳು 'ಉಪೇಂದ್ರ' ಸಿನಿಮಾ 25 ವರ್ಷ ಪೂರೈಸಲಿದೆ. ಅದಕ್ಕೂ ಮುನ್ನ ಚಿತ್ರವನ್ನು ಮತ್ತೆ ಪ್ರೇಕ್ಷಕರ ಮುಂದೆ ತಂದು ದೊಡ್ಡಮಟ್ಟದಲ್ಲಿ ಸಂಭ್ರಮಾಚರಣೆ ಮಾಡುವ ಪ್ರಯತ್ನ ನಿರ್ಮಾಪಕರದ್ದು. ಅದಕ್ಕೆ ರಿಯಲ್ ಸ್ಟಾರ್ ಸಾಥ್ ಕೂಡ ಸಿಕ್ಕಿದೆ. ಉಪ್ಪಿ ಕೂಡ ಇತ್ತೀಚೆಗೆ ಅಭಿಮಾನಿಗಳ ಜೊತೆ ಚಿತ್ರವನ್ನು ಮತ್ತೊಮ್ಮೆ ತೆರೆಮೇಲೆ ನೋಡಿದರು. ಅಭಿಮಾನಿಗಳ ಸಂಭ್ರಮಾಚರಣೆ ಕಂಡು ಖುಷಿ ಪಟ್ಟರು.
ಕಳೆದ ಶುಕ್ರವಾರ(ಸೆಪ್ಟೆಂಬರ್ 20) 'ಉಪೇಂದ್ರ' ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ವೀರೇಶ್ ಹಾಗೂ ನರ್ತಕಿಯಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಆಯೋಜಿಸಲಾಗಿತ್ತು. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸಿದ್ದರು. ಭರ್ಜರಿ ಸೆಲೆಬ್ರೇಷನ್ ಕೂಡ ನಡೀತು. ಮೊದಲ 6 ದಿನಕ್ಕೆ 200ಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ಇದೀಗ 2ನೇ ವಾರ ನರ್ತಕಿಯಿಂದ ತ್ರಿವೇಣಿ ಚಿತ್ರಮಂದಿರಕ್ಕೆ 'ಉಪೇಂದ್ರ' ಚಿತ್ರ ಬದಲಾಗುತ್ತಿದೆ.
ಅಭಿಮಾನಿಗಳ ಒತ್ತಾಯದ ಮೇರೆಗೆ 'ಉಪೇಂದ್ರ' ಚಿತ್ರವನ್ನು 2ನೇ ವಾರವೂ ಭರ್ಜರಿಯಾಗಿ ಪ್ರದರ್ಶಿಸಲು ನಿರ್ಮಾಪಕರು ಮುಂದಾಗಿದ್ದಾರೆ. ಸಿನಿಮಾ ರೀ- ರಿಲೀಸ್‌ಗೆ ಸಿಗುತ್ತಿರುವ ರೆಸ್ಪಾನ್ಸ್ ಬಗ್ಗೆ ನಿರ್ಮಾಪಕರಾದ ಶಿಲ್ಪಾ ಶ್ರೀನಿವಾಸ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಸಿನಿಮಾ ಮರುಬಿಡುಗಡೆಗೆ ಆಗಿರುವ ವೆಚ್ಚ ಹಾಗೂ ಮೊದಲ ವಾರದ ಕಲೆಕ್ಷನ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
"ಉಪೇಂದ್ರ ಸಿನಿಮಾ ರೀ-ರಿಲೀಸ್‌ಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಖುಷಿಯಾಗುತ್ತಿದೆ. ಅಂದಾಜು 15 ಲಕ್ಷ ರೂ. ವೆಚ್ಚದಲ್ಲಿ ಚಿತ್ರವನ್ನು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತು. ನೂರಾರು ಶೋಗಳಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. 2ನೇ ವಾರಕ್ಕೂ ಕಾಲಿಡುತ್ತಿರುವುದು ಖುಷಿ ತಂದಿದೆ" ಎಂದು ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಹೇಳಿದ್ದಾರೆ.
"ಮೊದಲ 5 ದಿನಕ್ಕೆ ಚಿತ್ರದ ಗಳಿಕೆ ಅಂದಾಜು 70 ಲಕ್ಷ ರೂ. ದಾಟಿದೆ. ಮೊದಲ ವಾರ ಮುಕ್ತಾಯದ ವೇಳೆಗೆ 1 ಕೋಟಿ ರೂ. ಗಡಿ ದಾಟುವ ನಿರೀಕ್ಷೆಯಿದೆ. ಶೀಘ್ರದಲ್ಲೇ 'ಉಪೇಂದ್ರ' ಚಿತ್ರದ 25 ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಲು ಪ್ರಯತ್ನಗಳು ನಡೆಯುತ್ತಿದೆ" ಎಂದು ನಿರ್ಮಾಪಕರು ತಿಳಿಸಿದ್ದಾರೆ. ಒಟ್ಟಾರೆ ಮತ್ತೊಮ್ಮೆ ತೆರೆಮೇಲೆ 'ಉಪೇಂದ್ರ'ನನ್ನು(ನಾನು) ನೋಡಿ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ.


Click it and Unblock the Notifications











