110 ಜನ ಪ್ರಜಾಕೀಯ ಅಭ್ಯರ್ಥಿಗಳನ್ನು ಪರಿಚಯಿಸಿದ ಉಪ್ಪಿ: ಅರಕಲಗೋಡಿನಲ್ಲಿ ಧ್ರುವ ಸರ್ಜಾ ಮತಬೇಟೆ
ರಾಜ್ಯದಲ್ಲಿ ಚುನಾವಣೆ ಅಖಾಡ ಕಾವೇರುತ್ತಿದೆ. ರಾಜ್ಯಾದ್ಯಂತ ಚುನಾವಣೆ ಪ್ರಚಾರ ಜೋರಾಗುತ್ತಿದೆ. ಸಿನಿಮಾ ತಾರೆಯರು ವಿವಿಧ ಅಭ್ಯರ್ಥಿಗಳ ಪರ ಮತಬೇಟೆ ಆರಂಭಿಸಿದ್ದಾರೆ. ನಟ ಉಪೇಂದ್ರ ಸುದ್ದಿಗೋಷ್ಠಿ ನಡೆಸಿ ತಮ್ಮ ಪ್ರಜಾಕೀಯ ಪಕ್ಷದಿಂದ 110 ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಗ್ಗೆ ಮಾಹಿತಿ ನೀಡಿದರು. ಮತ್ತೊಂದು ಕಡೆ ನಟ ಧ್ರುವ ಸರ್ಜಾ ಅರಕಲಗೂಡಿನಲ್ಲಿ ಎಂ.ಟಿ. ಕೃಷ್ಣೇಗೌಡ ಪರವಾಗಿ ಧ್ರುವ ಸರ್ಜಾ ಮತಯಾಚಿಸಿದರು.
ಕೆಲ ವರ್ಷಗಳ ಹಿಂದೆ ನಟ ಉಪೇಂದ್ರ ಪ್ರಜಾಕೀಯ ಎನ್ನುವ ಕಾನ್ಸೆಪ್ಟ್‌ನಲ್ಲಿ ಉತ್ತಮ ಪ್ರಜಾಕೀಯ ಪಕ್ಷ ಆರಂಭಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಉಪ್ಪಿ ಪ್ರಜಾಕೀಯ ಹಾಗೂ ತಮ್ಮ ಪಕ್ಷದ ಧ್ಯೇಯೋದ್ದೇಶಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಎಷ್ಟೇ ತಡವಾದರೂ ಪರವಾಗಿಲ್ಲ ತಾವು ಅಂದುಕೊಂಡ ವ್ಯವಸ್ಥೆ ಜಾರಿಗೆ ಬರಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ ಎನ್ನುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ರಾಜಕೀಯ ವ್ಯವಸ್ಥೆಗೆ ಹೋಗುವುದಿಲ್ಲ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆಯೇ ಇದೀಗ ವಿಧಾನಸಭೆ ಚುನಾವಣೆ ಎದುರಾಗುತ್ತಿದೆ.

ಉಪೇಂದ್ರ ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬದಲಿಗೆ ತಮ್ಮ ಪಕ್ಷದಿಂದ 110 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಇದನ್ನು ಆಪ್ ಸಹಾಯದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ವೇದಿಕೆ ಏರಿ ಕೂರದೇ ಮಾಧ್ಯಮ ಪ್ರತಿನಿಧಿಗಳನ್ನು ವೇದಿಕೆಯಲ್ಲಿ ಕೂರಿಸಿದ್ದರು. 110 ಜನ ಅಭ್ಯರ್ಥಿಗಳನ್ನು ವೇದಿಕೆ ಮುಂಭಾಗದಲ್ಲಿ ಕೂರಿಸಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸಿದರು. "ಪಕ್ಷವು ನಿಮ್ಮದೇ ಅಧಿಕಾರವೂ ನಿಮ್ಮದೇ" ಅನ್ನುವ ಘೋಷಣೆ ಅಡಿಯಲ್ಲಿ ಉಪೇಂದ್ರ ಈ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕವೇ ಜನರನ್ನು ತಲುಪುವುದಾಗಿ ಹೇಳಿದ್ದಾರೆ.
ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ಸೂತ್ರದ ಅಡಿಯಲ್ಲಿ ಜನರ ಸೇವೆ ಮಾಡುವುದಾಗಿ ಉಪೇಂದ್ರ ಹೇಳಿದ್ಧಾರೆ. ಇಂದು ಕಾರ್ಮಿಕರ ದಿನ(ಮೇ 01). ನಾವೆಲ್ಲಾ ಕಾರ್ಮಿಕರು. ಹಾಗಾಗಿ ಈ ದಿನ ನಿಮ್ಮ ಮುಂದೆ ಬಂದಿದ್ದೇವೆ ಎಂದರು. ನಮ್ಮ ಪ್ರಜಾಕೀಯ ಆಪ್ ಡೌನ್‌ಲೋಡ್ ಮಾಡಿಕೊಂಡರೆ ಎಲ್ಲಾ ಮಾಹಿತಿಯು ಸಿಗುತ್ತದೆ. ಇನ್ನು ಚುನಾವಣೆಯಲ್ಲಿ ಆಯ್ಕೆ ಆದವರನ್ನು 6 ತಿಂಗಳಿಗೊಮ್ಮೆ ಸರಿಯಾಗಿ ಕೆಲಸ ಮಾಡದವರನ್ನು ರಿಜೆಕ್ಟ್ ಮಾಡುವ ಅವಕಾಶ ಕೂಡ ನಮ್ಮ ಆಪ್‌ನಲ್ಲಿ ಎಂದಿದ್ದಾರೆ.

ಇನ್ನು ಪ್ರಜಾಕೀಯ ಪಕ್ಷದ ಪ್ರಣಾಳಿಕೆಯಂತಹ ಮತ್ತೊಂದು ಪ್ರಣಾಳಿಕೆ ಪ್ರಪಂಚದಲ್ಲೇ ಇಲ್ಲ ಎಂದಿದ್ದಾರೆ. ಜನರಿಗೆ ಕುಕ್ಕರ್ ಕೊಡ್ತೀವಿ, ಅದು ಕೊಡ್ತೀವಿ ಎಂದು ಭರವಸೆ ಕೊಡುವುದಿಲ್ಲ. ನಮಗೆ ನಮ್ಮ ಅಭ್ಯರ್ಥಿಗಳೇ ಸ್ಟಾರ್‌ಗಳು. ಮತ ಹಾಕುವ ಜನರು ಸ್ಟಾರ್‌ಗಳೇ ಎಂದಿದ್ದಾರೆ. ಇನ್ನು ನಮ್ಮ 110 ಜನ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎನ್ನುವ ಭರವಸೆಯ ಮಾತುಗಳನ್ನಾಡಿದ್ದಾರೆ. " ನಾನು ಯಾರಿಗೂ ಟಿಕೆಟ್ ಕೊಟ್ಟಿಲ್ಲ. ಯಾರೇ ಆದರೂ ಅವರು ಜನರ ಬಳಿ ಹೋಗಬೇಕು. ನಮ್ಮ ವಿಚಾರಗಳನ್ನು ತೋರಿಸಬೇಕು, ಅದನ್ನು ಒಪ್ಪಿ ಸಹಿ ಮಾಡಬೇಕು ಅದನ್ನು ನಮ್ಮ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು. ಅದರಲ್ಲಿ ಉತ್ತಮರಿಗೆ ಟಿಕೆಟ್ ಸಿಗುತ್ತದೆ.
"ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೆಲ್ಲಾ ಬಾಂಡ್ ಪೇಪರ್‌ನಲ್ಲಿ ಸಹಿ ಮಾಡಿ ಕೊಡುತ್ತಿದ್ದಾರೆ. ಒಂದು ವೇಳೆ ನಾನು ಹೇಳಿದಂತೆ ನಡೆದುಕೊಳ್ಳದಿದ್ದರೆ ಕೂಡಲೇ ರಾಜಿನಾಮೆ ನೀಡಿ ಹೋಗುತ್ತೇನೆ ಎಂದಿದ್ದಾರೆ. ಒಂದು ವೇಳೆ ಒಪ್ಪದಿದ್ದರೆ ನಾವೇ ಹೋರಾಟ ಮಾಡಿ ಕೆಳಗಿಳಿಸುತ್ತೇವೆ" ಎಂದು ಉಪೇಂದ್ರ ಮಾಹಿತಿ ನೀಡಿದ್ದಾರೆ.
ಇನ್ನು ಅರಕಲಗೋಡು ವಿಧಾನ ಸಭಾ ಕ್ಷೇತ್ರದಲ್ಲಿ ನಟ ಧ್ರುವ ಸರ್ಜಾ ಮತಯಾಚನೆ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಪರ ಅವರು ಇಂದು ಪ್ರಚಾರ ನಡೆಸಿದರು. "ಮೊದಲ ಬಾರಿಗೆ ನಾನು ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಆಪ್ತರ ಪರ ಮತ್ತಷ್ಟು ಕಡೆಗಳಲ್ಲಿ ಪ್ರಚಾರ ಮಾಡಲಿದ್ದೇನೆ. ಕೃಷ್ಣಗೌಡ ಅವರು ನಮಗೆ ಫ್ಯಾಮಿಲಿ ಫ್ರೆಂಡ್. ಅವರು 1500ಕ್ಕೂ ಅಧಿಕ ಗೋವುಗಳನ್ನು ಸಾಕಿದ್ದಾರೆ. ಅದೊಂದು ಕಾರಣ ಸಾಕು ಅನ್ನಿಸುತ್ತದೆ ಅವರ ಪರ ನಾನು ಪ್ರಚಾರ ಮಾಡಲು" ಎಂದು ಧ್ರುವ ಸರ್ಜಾ ಹೇಳಿದ್ದಾರೆ.


Click it and Unblock the Notifications











