ಜಾತಿ ನಿಂದನೆ ಪ್ರಕರಣ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಉಪೇಂದ್ರಗೆ ಬಿಗ್ ರಿಲೀಫ್
ಜಾತಿ ನಿಂದನೆ ಆರೋಪ ಪ್ರಕರಣದ ಸಂಬಂಧ ನಟ ಉಪೇಂದ್ರ ವಿರುದ್ಧ ಎರಡು FIR ದಾಖಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಉಪೇಂದ್ರಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸದ್ಯ ಯಾರ ಕೈಗೂ ಸಿಗದ ನಟ ಅಜ್ಞಾತ ಸ್ಥಳದಲ್ಲಿದ್ದಾರೆ. ಇನ್ನು ತಮ್ಮ ವಿರುದ್ಧ ದಾಖಲಾಗಿರುವ FIR ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಉಪೇಂದ್ರ ರಿಲೀಫ್ ಸಿಕ್ಕಿದೆ.
ಶನಿವಾರ(ಆಗಸ್ಟ್ 12) ಫೇಸ್‌ಬುಕ್ ಲೈವ್ ಬಂದು ಮಾತನಾಡುವ ವೇಳೆ ನಟ ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಹಾಗಾಗಿ ದಲಿತ ಸಂಘಟನೆಗಳು ಉಪೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಕೆಲವೆಡೆ ಪ್ರತಿಭಟನೆ ನಡೆಯುತ್ತಿದೆ. ಇನ್ನು ಚೆನ್ನಮ್ಮನ ಅಚ್ಚುಕಟ್ಟು ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಉಪೇಂದ್ರ ವಿರುದ್ಧ ಎರಡು ದೂರು ದಾಖಲಾಗಿದೆ.

ನಟ ಉಪೇಂದ್ರ ವಿರುದ್ದ ಐಪಿಸಿ ಸೆಕ್ಷನ್ 1980 ಅಂಡರ್ ಸೆಕ್ಷನ್ 505(1)(c) 153a, 295a ಅಡಿಯಲ್ಲಿ ದೂರು ದಾಖಲಾಗಿದೆ. ಇನ್ನು ಈಗಾಗಲೇ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನಟನ ಕತ್ರಿಗುಪ್ಪೆ ಹಾಗೂ ಸದಾಶಿವ ನಗರ ಮನೆಗಳಿಗೆ ನೋಟಿಸ್ ನೀಡಿದ್ದಾರೆ. ಸದ್ಯ ಉಪೇಂದ್ರ ಫೋನ್ ಸ್ವಿಚ್ ಆಫ್ ಆಗಿದ್ದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿ ಇಲ್ಲ. ಇದರ ಬೆನ್ನಲ್ಲೇ ಉಪೇಂದ್ರ ಎರಡು FIR ರದ್ದು ಮಾಡುವಂತೆ ಹೈಕೋರ್ಟ್ ಮರೆ ಹೋಗಿದ್ದರು. FIRಗೆ ಇದೀಗ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
"ನಾನು ಯಾವುದೇ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಒಳ್ಳೆಯದನ್ನು ಮಾಡುವಾಗಲೂ ಟೀಕಿಸುವವರು ಇದ್ದೇ ಇರುತ್ತಾರೆ. ಈ ಮಾತಿಗೆ ಪೂರಕವಾಗಿ ಆ ಗಾದೆ ಬಳಸಲಾಗಿದೆ. ಆಕ್ಷೇಪ ವ್ಯಕ್ತವಾದ ಕೂಡಲೇ ವಿಡಿಯೋ ಡಿಲೀಟ್ ಮಾಡಿ ಕ್ಷಮೆ ಕೋರಿದ್ದೇನೆ. ಹಳೆಯ ಗಾದೆ ಮಾತನ್ನು ಉಲ್ಲೇಖಿಸಿದ್ದು ಜಾತಿನಿಂದನೆಯಲ್ಲ. ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧ ಎಸಗಿಲ್ಲ" ಎಂದು ಉಪೇಂದ್ರ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ಒಂದು FIRಗೆ ಮಾತ್ರ ತಡೆಯಾಜ್ಞೆ ನೀಡಿರುವುದಾಗಿ ವರದಿಯಾಗುತ್ತಿದೆ. ನಟ ಉಪೇಂದ್ರ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದ್ದರು.
ವಕೀಲರ ವಾದ ಪುರಸ್ಕರಿಸಿದ ಕೋರ್ಟ್ ಉಪೇಂದ್ರಗೆ ಪ್ರಕರಣದಲ್ಲಿ ರಿಲೀಫ್ ನೀಡಿದೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿದ್ದ FIRಗೆ ಮಾತ್ರ ತಡೆ ಕೋರಿ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಆದೇಶ ನೀಡಿದ್ದಾರೆ. ಒಂದು ಕಡೆ ಉಪೇಂದ್ರ ತಮ್ಮ ವಿರುದ್ಧ ದಾಖಲಾಗಿರುವ ಎರಡು FIR ರದ್ದು ಕೋರಿ ಅರ್ಜಿ ಸಲ್ಲಿಸಿದ್ದರೆ ಮತ್ತೊಂದು ಕಡೆ ಬೇರೆ ಜಿಲ್ಲೆಗಳಲ್ಲಿ ಅವರ ವಿರುದ್ಧ ದೂರುಗಳು ದಾಖಲಾಗುತ್ತಿದೆ.


Click it and Unblock the Notifications











