'ಉಪೇಂದ್ರ' ಚಿತ್ರಕ್ಕೆ ಮೊದಲು ಇಟ್ಟ ಟೈಟಲ್ ಏನು? ಉಪ್ಪಿ ಸಂಭಾವನೆ, ಚಿತ್ರದ ಬಜೆಟ್, ಕಲೆಕ್ಷನ್ ಎಷ್ಟು?
ರಿಯಲ್ ಸ್ಟಾರ್ ನಿರ್ದೇಶಿಸಿ ನಟಿಸಿದ 'ಉಪೇಂದ್ರ' ಸಿನಿಮಾ 25 ವರ್ಷಗಳ ಹಿಂದೆ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 'ಎ' ಸಕ್ಸಸ್ ಬೆನ್ನಲ್ಲೇ ಮತ್ತೊಮ್ಮೆ ಉಪ್ಪಿ ತೆರೆಮೇಲೆ ಮ್ಯಾಜಿಕ್ ಮಾಡಿದ್ದರು. ರವೀನಾ ಟಂಡನ್, ಪ್ರೇಮಾ, ದಾಮಿನಿ ಈ ಚಿತ್ರದಲ್ಲಿ ನಾಯಕಿಯರಾಗಿ ಮಿಂಚಿದ್ದರು. ಅವತ್ತಿನ ಕಾಲಕ್ಕೆ ಸಿನಿಮಾ ದೊಡ್ಡ ಸಂಚಲನ ಸೃಷ್ಟಿಸಿತ್ತು.
ಅಕ್ಟೋಬರ್ 22, 1999ರಂದು 'ಉಪೇಂದ್ರ' ಸಿನಿಮಾ ತೆರೆಗೆ ಬಂದಿತ್ತು. ಕೃಷ್ಣ ಕುಮಾರ್ ಛಾಯಾಗ್ರಹಣ, ಗುರುಕಿರಣ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. 'ಎ' ರೀತಿಯಲ್ಲೇ ಬಹಳ ವಿಭಿನ್ನವಾದ ಕಥೆ, ಚಿತ್ರಕಥೆ ಚಿತ್ರದಲ್ಲಿತ್ತು. ತಮ್ಮದೇ ಶೈಲಿಯಲ್ಲಿ ಎಲ್ಲಾ ಪಾತ್ರ ಪೋಷಣೆ ಮಾಡಿದ್ದ ಅದನ್ನು ಅಂದುಕೊಂಡಂತೆ ತೆರೆಗೆ ತಂದಿದ್ದರು. ಶಿಲ್ಪ ಶ್ರೀನಿವಾಸ್ ಚಿತ್ರವನ್ನು ನಿರ್ಮಾಣ ಮಾಡಿ ಗೆದ್ದಿದ್ದರು.

ಈ ವರ್ಷ ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಕಲ್ಟ್ ಕ್ಲಾಸಿಕ್ 'ಉಪೇಂದ್ರ' ಸಿನಿಮಾ ತೆರೆಮೇಲೆ ಬರ್ತಿದೆ. ಹೊಸ ರೂಪದಲ್ಲಿ ಸೆಪ್ಟೆಂಬರ್ 18ಕ್ಕೆ ಸಿನಿಮಾ ರೀ-ರಿಲೀಸ್ ಆಗ್ತಿದೆ. ಸಹಜವಾಗಿಯೇ ಇದು ಉಪ್ಪಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ 25 ವರ್ಷಗಳ ಹಿಂದೆ ಸಿನಿಮಾ ನೋಡಿದವರು ನೋಡದವರು ದೊಡ್ಡಪರದೆಯಲ್ಲಿ ಸಿನಿಮಾ ನೋಡುವ ಅವಕಾಶ ಸಿಗುಲಿದೆ. ಡಿಜಿಟಲ್ 4K ವರ್ಷನ್‌ನಲ್ಲಿ ಡಿಟಿಎಸ್ ಸೌಂಡ್‌ನೊಂದಿಗೆ ಸಿನಿಮಾ ಮತ್ತೆ ತೆರೆಗೆ ಬರಲಿದೆ.
'ಉಪೇಂದ್ರ' ಸಿನಿಮಾ ಕಲೆಕ್ಷನ್ ಇವತ್ತಿನ ಲೆಕ್ಕಕ್ಕೆ 50ರಿಂದ 100 ಕೋಟಿ ರೂ. ಎನ್ನಬಹುದು. ಅಷ್ಟರಮಟ್ಟಿಗೆ ಸಿನಿಮಾ ಅವತ್ತು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕರ್ನಾಟದಲ್ಲಿ 200 ದಿನ ಪ್ರದರ್ಶನ ಕಂಡಿದ್ದ ಸಿನಿಮಾ ತೆಲುಗಿಗೆ ಡಬ್ ಆಗಿ ಆಂಧ್ರದಲ್ಲಿ ಶತದಿನೋತ್ಸವ ಆಚರಿಸಿತ್ತು. ತೆಲುಗಿನಲ್ಲಿ ಕೂಡ 'ಉಪೇಂದ್ರ' ರೀ-ರಿಲೀಸ್ ಪ್ರಯತ್ನ ನಡೆಯುತ್ತಿದೆ.
ಇನ್ನು ಒಂದು ಸಿನಿಮಾ ಆರಂಭವಾದಾಗ ಸಾಕಷ್ಟು ಟೈಟಲ್‌ಗಳು ಚರ್ಚೆ ಬರುತ್ತವೆ. ಕೊನೆಗೆ ಯಾವುದೋ ಒಂದು ಫೈನಲ್ ಆಗುತ್ತದೆ. ಇನ್ನು ಬಜೆಟ್ ಕೂಡ ಅಂದಾಜು ಮಾಡಿದ್ದಕ್ಕಿಂತ ಹೆಚ್ಚಾಗುವ ಸಾಧ್ಯೆತೆ ಇರುತ್ತದೆ. ಉಪ್ಪಿ ನಿರ್ದೇಶನದ ಜೊತೆಗೆ ನಟಿಸಿದ್ದರು. ಹಾಗಾಗಿ ಅವರು ಈ ಚಿತ್ರಕ್ಕಾಗಿ ಎಷ್ಟು ಸಂಭಾವನೆ ತೆಗೆದುಕೊಂಡಿರುತ್ತಾರೆ ಎನ್ನುವ ಪ್ರಶ್ನೆಗಳು ಕೂಡ ಅಭಿಮಾನಿಗಳನ್ನು ಕಾಡುತ್ತಿದೆ.

ನಿರ್ಮಾಪಕರಾದ ಶಿಲ್ಪ ಶ್ರೀನಿವಾಸ್ ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲಿ 'ಉಪೇಂದ್ರ' ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಮೊದಲು 'ಐ' ಎನ್ನುವ ಟೈಟಲ್ ಅಂದುಕೊಂಡಿದ್ದರಂತೆ. ಅದನ್ನು ಫಿಲ್ಮ್ ಚೇಂಬರ್‌ನಲ್ಲಿ ರಿಜಿಸ್ಟರ್ ಸಹ ಮಾಡಿಸಲಾಗಿತ್ತು. ಕೊನೆ 'ಐ' ಯಾರು? ನಾನು ಅಲ್ವಾ? ಈ ಚಿತ್ರದಲ್ಲಿ ನಾನು ಅಂದ್ರೆ ಹೀರೊ 'ಉಪೇಂದ್ರ'. ಹಾಗಾಗಿ ಅದೇ ಟೈಟಲ್ ಇಡೋಣ ಎಂದು ನಿರ್ಮಾಪಕರು ಕೇಳಿದ್ದರಂತೆ. ಮೊದಲಿಗೆ ಬೇಡ ಎಂದಿದ್ದ ಉಪ್ಪಿ ಕೊನೆಗೆ ಒಪ್ಪಿದ್ದರು.
ಉಪೇಂದ್ರ ಎನ್ನುವ ಹೆಸರು ನನ್ನ ಹೆಂಡತಿ, ಮಕ್ಕಳು ಹಾಗೂ ತಮ್ಮ ತಂದೆ ತಾಯಿಗೆ ಸೇರಬೇಕಾದ್ದದ್ದು. ಅದನ್ನು ಹೇಗೆ ಸಿನಿಮಾ ಇಡೋದು ಎಂದು ಉಪ್ಪಿ ಹೇಳಿದ್ದರಂತೆ. ಬಳಿಕ ನಿರ್ಮಾಪಕರು ಒಪ್ಪಿಸಿ ಆ ಟೈಟಲ್ ರಿಜಿಸ್ಟರ್ ಮಾಡಿಸಿ ಸಿನಿಮಾ ನಿರ್ಮಿಸಿದ್ದರು. ಇನ್ನು ಉಪ್ಪಿಗೆ ಸಂಭಾವನೆ ಎಂದು ಯಾವುದೇ ಮೊತ್ತ ಕೊಡಲಿಲ್ಲ ಎಂದು ಶಿಲ್ಪ ಶ್ರೀನಿವಾಸ್ ಹೇಳಿದ್ದಾರೆ.
ಚಿತ್ರೀಕರಣಕ್ಕೆ ಏನೆಲ್ಲಾ ಬೇಕು ಎನ್ನುವುದನ್ನು ಉಪೇಂದ್ರ ಹೇಳಿದ್ದರು. ಎ. ಆರ್ ರೆಹಮಾನ್ ಮ್ಯೂಸಿಕ್ ಕೇಳಿದ್ದರು. ನಾನು ಹೋಗಿ ಅವರನ್ನು ಕೇಳಿದಾಗ ಫ್ರೀ ಇರಲಿಲ್ಲ. ನಮ್ಮ ಸಿನಿಮಾ ತಡವಾಗುತ್ತದೆ ಎಂದು ಬಳಿಕ ಮಾತಾಡಿ ಗುರುಕಿರಣ್ ಅವರನ್ನು ಆಯ್ಕೆ ಮಾಡಿಕೊಂಡೆವು. ರಿಯಲ್ ಸ್ಟಾರ್‌ಗೆ ಹೋಟೆಲ್ ರೂಮ್ ಮಾಡಿ ಕೊಟ್ಟಿದ್ದೆ. ಅಲ್ಲೇ ಡಿಸ್ಕಷನ್ ನಡೆಯುತಿತ್ತು. ಅಲ್ಲಿ 15 ಜನ ಉಪ್ಪಿ ಸಹಾಯಕರು ಇರುತ್ತಿದ್ದರು. ಆಗಾಗ್ಗೆ ಖರ್ಚಿಗೆ ಹಣ ಕೊಡುತ್ತಿದ್ದೆ. ಹೀಗೆ ಎಲ್ಲರಿಗೂ ಸೇರಿ 16-17 ಲಕ್ಷ ರೂ. ಕೊಟ್ಟಿರಬಹುದು ಎಂದು ಶಿಲ್ಪ ಶ್ರೀನಿವಾಸ್ ಹೇಳಿಕೊಂಡಿದ್ದಾರೆ.
'ಉಪೇಂದ್ರ' ಸಿನಿಮಾ ಬಜೆಟ್ ಎಷ್ಟು ಎನ್ನುವ ಪ್ರಶ್ನೆಗೆ ಮೂರುವರೆ ಕೋಟಿ ರೂ. ಆಗಿರಬಹುದು. ಅದಕ್ಕೆ ಎರಡರಷ್ಟು ವಾಪಸ್ ಬಂದಿತ್ತು. ತೆಲುಗಿಗೂ ಡಬ್ಬಿಂಗ್ ರೈಟ್ಸ್ ಕೊಟ್ಟಿದ್ವಿ. ಅದರಿಂದಲೂ ಹಣ ಬಂದಿತ್ತು. ಉಪೇಂದ್ರ ಕಲೆಕ್ಷನ್ ಆ ಕಾಲಕ್ಕೆ 'ಕೆಜಿಎಫ್', 'ಕಾಂತಾರ' ಎಂದು ಶಿಲ್ಪಾ ಶ್ರೀನಿವಾಸ್ ವಿವರಿಸಿದ್ದಾರೆ. ಇನ್ನು 'ಉಪೇಂದ್ರ' ಸಿನಿಮಾ 25 ವರ್ಷ ಪೂರೈಸಿದ ಸಂಭ್ರಮವನ್ನು ದೊಡ್ಡಮಟ್ಟದಲ್ಲಿ ಆಚರಿಸಲು ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ.


Click it and Unblock the Notifications











