'ಉತ್ತಮ ಪ್ರಜಾಕೀಯ ಪಕ್ಷ' ನೋಂದಣಿ ಮಾಡಿಸಿದ ಉಪೇಂದ್ರ
ಇಷ್ಟು ದಿನದಿಂದ ಎಲ್ಲರೂ ಕಾಯುತ್ತಿದ್ದ ದಿನ ಅಂತು ನಾಳೆ ಬರುತ್ತದೆ. ಈ ವೀಕೆಂಡ್ ಮೋಜು ಮಸ್ತಿಗೆ ಸೀಮಿತವಾಗಿಡದೆ ಜನ ಮತ ಹಾಕಬೇಕಿದೆ. ಒಂದು ಕಡೆ ಕರ್ನಾಟಕ ಚುನಾವಣೆಗೆ ಒಂದೇ ದಿನ ಬಾಕಿ ಇದ್ದರೆ ಇತ್ತ ನಟ ಉಪೇಂದ್ರ ತಮ್ಮ ಹೊಸ ರಾಜಕೀಯ ಪಕ್ಷವನ್ನು ನೊಂದಣಿ ಮಾಡಿದ್ದಾರೆ.
ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ''ಎಲ್ಲರಿಗೂ ಸಿಹಿ ಸುದ್ದಿ ! ನಮ್ಮ " ಉತ್ತಮ ಪ್ರಜಾಕೀಯ ಪಕ್ಷ " ಭಾರತದ ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿದೆ. ನಾವೆಲ್ಲರೂ ಸೇರಿ ಈಗಿಂದಲೇ ಈ ರಾಜಕೀಯ ವ್ಯವಸ್ಥೆಯನ್ನು ಕಿತ್ತೊಗೆದು 'ಪ್ರಜಾಕೀಯ' ಸ್ಥಾಪಿಸಲು ಮುಂದಾಗೋಣ. ನಿಮ್ಮ ಉಪ್ಪಿ.'' ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.

ಸಿನಿಮಾದಿಂದ ರಾಜಕೀಯ ಪ್ರವೇಶ ಮಾಡಿದ ಉಪೇಂದ್ರ ಕೆ.ಪಿ.ಜೆ.ಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ) ಪಕ್ಷಕ್ಕೆ ಸೇರಿದ್ದರು. ಆದರೆ ಆ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಮಹೇಶ್ ಗೌಡ ಮತ್ತು ಉಪೇಂದ್ರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಆ ಪಕ್ಷದಿಂದ ಅವರು ಹೊರಬಂದರು. ಇವುಗಳ ನಂತರ ಈಗ ತಾವೇ ಹೊಸ ಪಕ್ಷಕ್ಕೆ ಉಪ್ಪಿ ನಂದಿ ಹಾಡಿದ್ದಾರೆ.
ಒಂದು ಕಡೆ ಹೊಸ ಪಕ್ಷ ಶುರು ಮಾಡಿರುವ ಉಪೇಂದ್ರ ಇನ್ನೊಂದು ಕಡೆ ಮತ್ತೆ ತಮ್ಮ ಸಿನಿಮಾಗಳನ್ನು ಶುರು ಮಾಡಿದ್ದಾರೆ. 'ಐ ಲವ್ ಯೂ' ಎಂಬ ಹೊಸ ಸಿನಿಮಾದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ನಿನ್ನೆ ರಿಲೀಸ್ ಆಗಿದೆ. ಈ ಚಿತ್ರವನ್ನು ಆರ್.ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











