Upendra: ಜಾತಿನಿಂದನೆ ಪ್ರಕರಣದಲ್ಲಿ ಉಪೇಂದ್ರಗೆ ನೋಟಿಸ್: ಬೆಂಗಳೂರು ವಿವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಆಕ್ಷೇಪಾರ್ಹ ಪದ ಬಳಕೆ ಆರೋಪ ಹಿನ್ನೆಲೆಯಲ್ಲಿ ನಟ ಉಪೇಂದ್ರ ವಿರುದ್ಧ 2 ಎಫ್‌ಐಆರ್ ದಾಖಲಾಗಿದೆ. ಆಗಸ್ಟ್ 12ರಂದು ಸೋಶಿಯಲ್ ಮೀಡಿಯಾ ಲೈವ್ ವೇಳೆ ರಿಯಲ್ ಸ್ಟಾರ್ ಹೊಲಗೇರಿ ಶಬ್ಧ ಬಳಸಿದ್ದರು. ಈ ಬಗ್ಗೆ ದಲಿತ ಸಂಘಟನೆಗಳು ಉಪೇಂದ್ರ ವಿರುದ್ಧ ಆಕ್ರೋಶಗೊಂಡಿವೆ. ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು ವಿಚಾರಣೆಗೆ ಬರುವಂತೆ ನಟನಿಗೆ ನೋಟಿಸ್ ನೀಡಲಾಗಿದೆ.
ತಮ್ಮ ಹೇಳಿಕೆಯ ಬಗ್ಗೆ ಶನಿವಾರವೇ ಉಪೇಂದ್ರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಕ್ಷಮೆ ಕೇಳಿ ವಿಡಿಯೋ ಡಿಲೀಟ್ ಮಾಡಿದ್ದರು. ಆದರೂ ಕೂಡ ಆಕ್ರೋಶ ಮಾತ್ರ ಕಮ್ಮಿ ಆಗುತ್ತಿಲ್ಲ. ಇದೇ ಕಾರಣಕ್ಕೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಇದು ಉಪೇಂದ್ರಗೆ ಸಂಕಷ್ಟ ತಂದಿದ್ದು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇನ್ನು ಉಪೇಂದ್ರ ಹೇಳಿಕೆ ವಿರೋಧಿಸಿ ರಾಮನಗರ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ನಡೆದಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಸಚಿವರಾದ ಹೆಚ್. ಸಿ ಮಹದೇವಪ್ಪ ಸರಣಿ ಟ್ವೀಟ್ ಮಾಡಿ ಉಪೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಕ್ಷೇಪಾರ್ಹ ಪದ ಬಳಕೆ ಹಿನ್ನೆಲೆಯಲ್ಲಿ ನಟ ಉಪೇಂದ್ರ ವಿರುದ್ಧ ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆ ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಎರಡು ದೂರು ದಾಖಲಾಗಿದೆ. ವಕೀಲರೊಬ್ಬರು ಕೂಡ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಉಪೇಂದ್ರ ಬಂಧನಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ. ಇದೀಗ ಪೊಲೀಸರು ನಟ ಉಪೇಂದ್ರಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಹಲವು ವರ್ಷಗಳಿಂದ ಉಪೇಂದ್ರ ಕತ್ರಿಗುಪ್ಪೆ ನಿವಾಸದಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಸದಾಶಿವನಗರದಲ್ಲಿ ಮನೆ ಖರೀದಿಸಿ ಶಿಫ್ಟ್ ಆಗಿದ್ದರು. ಇದೀಗ 2 ಮನೆಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ವಾಟ್ಸ್ ಆ್ಯಪ್ ಮೂಲಕ ನೋಟಿಸ್ ರವಾನಿಸಲಾಗಿದೆ. ಪ್ರಕರಣ ಸಂಬಂಧ ಸ್ಥಳ ಮಹಜರು ಕೂಡ ನಡೆಯಲಿದೆ. ಉಪೇಂದ್ರ ವಿಡಿಯೋ ಮಾಡಿದ ಜಾಗದ ಸ್ಥಳ ಮಹಜರು ಮಾಡಲು ಪೊಲೀಸರು ಮುಂದಾಗಿದ್ದಾರೆ. ಇಂದು(ಆಗಸ್ಟ್ 14) ಬೆಳಗ್ಗೆ 10.30ರ ಬಳಿಕ ಮನೆಗೆ ತೆರಳಿ ದೂರುದಾರರ ಸಮ್ಮುಖದಲ್ಲೇ ಸ್ಥಳ ಮಹಜರು ನಡೆಯಲಿದೆ.
ಪ್ರಜಾಕೀಯ 6 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉಪೇಂದ್ರ ಸೋಶಿಯಲ್ ಮೀಡಿಯಾ ಲೈವ್ ಬಂದಿದ್ದರು. ಜನರ ಜೊತೆಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಪ್ರಜಾಕೀಯ ಪಕ್ಷವನ್ನು ಮುನ್ನಡೆಸುವ ಬಗ್ಗೆ ಮಾತನಾಡಿದ್ದರು. ಈ ವೇಳೆ ಮಾತನಾಡುತ್ತಾ "ಊರು ಎಂದ ಮೇಲೆ ಹೊಲಗೇರಿ ಇರುತ್ತೆ" ಎನ್ನುವ ಗಾದೆ ಮಾತನ್ನು ಪ್ರಸ್ತಾಪಿಸಿ ಮಾತನಾಡಿದ್ದರು. ಇದೇ ಕಾರಣಕ್ಕೆ ದಲಿತ ಸಂಘನಟೆಗಳು ಈಗ ಉಪೇಂದ್ರ ವಿರುದ್ಧ ಆಕ್ರೋಶಗೊಂಡಿವೆ. ಸೋಶಿಯಲ್ ಮೀಡಿಯಾದಲ್ಲೂ ಭಾರೀ ಟೀಕೆ ವ್ಯಕ್ತವಾಗುತ್ತಿದೆ.
ಇನ್ನು ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಂದ ವಿವಿ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಉಪೇಂದ್ರ ಫೇಸ್‌ಬುಕ್ ಲೈವ್ ವೇಳೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ನಟ ಉಪೇಂದ್ರ ವಿರುದ್ಧ ಸಮಾಜಕಲ್ಯಾಣ ಇಲಾಖೆಯಿಂದ ದೂರು ದಾಖಲಾಗಿದೆ. ಉಪೇಂದ್ರ ಪ್ರತಿಕೃತಿ ದಹಿಸಿ ಪ್ರತಿಭಟಿಸಲು ವಿವಿ ಸಂಶೋಧನಾ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.


Click it and Unblock the Notifications











