'ಕಬ್ಜ' ಟೀಸರ್ ತುಂಬಾ 'ಕೆಜಿಎಫ್' ಛಾಯೆ: ಕತೆ?
ಆರ್ ಚಂದ್ರು ನಿರ್ದೇಶಿಸಿ ಉಪೇಂದ್ರ ನಟಿಸಿರುವ 'ಕಬ್ಜ' ಸಿನಿಮಾದ ಟೀಸರ್ ಇಂದು (ಸೆಪ್ಟೆಂಬರ್ 17) ಬಿಡುಗಡೆ ಆಗಿದ್ದು, ಟೀಸರ್‌ನಲ್ಲಿ 'ಕೆಜಿಎಫ್' ಸಿನಿಮಾದ ಛಾಯೆ ದಟ್ಟವಾಗಿ ಕಾಣುತ್ತಿದೆ.
'ಕಬ್ಜ' ಸಿನಿಮಾದ ಟೀಸರ್ ನೋಡಿದರೆ 'ಕೆಜಿಎಫ್' ಸಿನಿಮಾ ಸರಣಿಯ ನೆನಪಾಗುವುದು ಖಂಡಿತ. 'ಕಬ್ಜ' ಸಿನಿಮಾದ ಟೋನ್ 'ಕೆಜಿಎಫ್' ಸಿನಿಮಾ ಸರಣಿಯನ್ನೇ ಹೋಲುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ.
'ಕೆಜಿಎಫ್' ಮಾದರಿಯಲ್ಲಿಯೇ ಮಹಾತ್ವಾಕಾಂಕ್ಷಿ ಬಾಲಕ, ಆತನ ತಾಯಿ, ಬಾಲ್ಯದಲ್ಲಿ ಬಡತನ, ತಿನ್ನಲು ಊಟಕ್ಕೂ ಪರದಾಟ, ಹುಡುಗ ಗ್ಯಾಂಗ್‌ಸ್ಟರ್ ಆಗುವುದು, ಕೆಟ್ಟವರೇ ತುಂಬಿರುವ ಕಪ್ಪು ಮಣ್ಣಿನ ಊರು, ಅಲ್ಲೊಬ್ಬ ದೈತ್ಯ ವಿಲನ್ ಅವನನ್ನು ಕೊಲ್ಲುವ ನಾಯಕ ಇದೇ ಕತೆಯನ್ನು 'ಕಬ್ಜ' ಸಹ ಒಳಗೊಂಡಿರುವುದು ಟೀಸರ್‌ನಿಂದ ಗೊತ್ತಾಗುತ್ತಿದೆ.

'ಕೆಜಿಎಫ್' ಸಿನಿಮಾದ ಕೆಲವು ಮುಖ್ಯ ದೃಶ್ಯಗಳಿಗೂ, 'ಕಬ್ಜ' ಸಿನಿಮಾದಲ್ಲಿ ತೋರಿಸಲಾಗಿರುವ ದೃಶ್ಯಗಳಿಗೂ ಬಹಳಷ್ಟು ಸಾಮ್ಯತೆ ಇದೆ. 'ಕಬ್ಜ' ಸಿನಿಮಾದ ಟೀಸರ್ ಪ್ರೆಸೆಂಟೇಶನ್ ಸಹ 'ಕೆಜಿಎಫ್ 2' ಸಿನಿಮಾದ ಟ್ರೈಲರ್ ಪ್ರೆಸೆಂಟೇಶನ್ ಮಾದರಿಯಲ್ಲಿಯೇ ಇದೆ. ಸಂಭಾಷಣೆ ಇಲ್ಲದೆ, ಕೇವಲ ಬಂದೂಕಿನ ಶೂಟ್ ಮಾಡುವ ಶಬ್ದವನ್ನಷ್ಟೆ ಟೀಸರ್‌ನ ಹಿನ್ನೆಲೆ ಸಂಗೀತವಾಗಿ ಬಳಸಲಾಗಿದೆ. ಅಲ್ಲಲ್ಲಿ ಅಷ್ಟೆ ಬೇರೆ ಇನ್‌ಸ್ಟ್ರುಮೆಂಟ್ ಸಂಗೀತದ ಬಳಕೆಯಾಗಿದೆ. ಟೀಸರ್ ಬಿಡುಗಡೆ ಆದ ಎರಡೇ ಗಂಟೆಗಳಲ್ಲಿ 'ಕೆಜಿಎಫ್' ಹಾಗೂ 'ಕಬ್ಜ' ನಡುವೆ ಇರುವ ಸಾಮ್ಯತೆಯ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಮೀಮ್‌ಗಳು ಹರಿದಾಡುತ್ತಿವೆ.
ಟೀಸರ್‌ನಲ್ಲಿ ಉಪೇಂದ್ರ ಬಾಯಲ್ಲಿ ಸಿಗಾರ್ ಇಟ್ಟುಕೊಂಡು ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಸಹ ಟೀಸರ್ ಅಂತ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೀಸರ್ ಬಿಡುಗಡೆ ಇಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿದೆ.
'ಕಬ್ಜ' ಸಿನಿಮಾವನ್ನು ಆರ್.ಚಂದ್ರು ನಿರ್ದೇಶನ ಮಡಿದ್ದು, 'ಕೆಜಿಎಫ್' ಮಾದರಿಯಲ್ಲಿ ಈ ಸಿನಿಮಾದ ಕತೆ ಸಹ 1950-60 ರ ಸಮಯದಲ್ಲಿ ನಡೆಯುತ್ತದೆ. 'ಕೆಜಿಎಫ್' ಮಾದರಿಯಲ್ಲಿ ಈ ಸಿನಿಮಾವನ್ನು ಸಹ ಎರಡು ಭಾಗಗಳಲ್ಲಿ ತೆರೆಗೆ ತರಲಾಗುತ್ತಿದೆ. ಸಿನಿಮಾದಲ್ಲಿ ಶ್ರೆಯಾ ಶಿರಿನ್ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications











