ಉಪ್ಪಿ ಹುಟ್ಟುಹಬ್ಬಕ್ಕೆ 'ಬುದ್ದಿವಂತ- 2': ಬಹಳ ತಡವಾಗುತ್ತಿರುವ ಈ ಸಿನಿಮಾ ಕಥೆಯೇನು?
ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಬುದ್ದಿವಂತ- 2' ಅಂತೂ ಇಂತೂ ರಿಲೀಸ್‌ಗೆ ರೆಡಿಯಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಟೀಸರ್ ರಿವೀಲ್ ಆಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಪ್ರೇಕ್ಷಕರ ಮುಂದೆ ಬರಬೇಕಿತ್ತು. ಆದರೆ ಯಾಕೋ ಅದು ಸಾಧ್ಯವಾಗಲೇ ಇಲ್ಲ. ಟೈಟಲ್ ಹಾಗೂ ಪೋಸ್ಟರ್‌ಗಳಿಂದ ಸದ್ದು ಮಾಡುತ್ತಿರುವ ಸಿನಿಮಾ ಸೆಪ್ಟೆಂಬರ್‌ನಲ್ಲಿ ಥಿಯೇಟರ್‌ಗೆ ಅಂಗಳಕ್ಕೆ ಬರಲಿದೆ.
ನಿರ್ದೇಶಕ ಆರ್. ಚಂದ್ರು ಬಳಗದಲ್ಲಿ ಗುರ್ತಿಸಿಕೊಂಡಿದ್ದ ಜಯರಾಮ್ ಮಾಧವನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಚಾಲ್ತಿಯಲ್ಲಿದೆ. ಕೋವಿಡ್‌ಗೂ ಮುನ್ನವೇ ಸಿನಿಮಾ ಚಿತ್ರೀಕರಣವಾಗಿತ್ತು. ಆದರೆ ಸಿನಿಮಾ ಯಾಕೋ ಥಿಯೇಟರ್ ಕಡೆ ಮುಖ ಮಾಡಲಿಲ್ಲ. 'ಚಮಕ್, 'ಅಯೋಗ್ಯ' ಸಿನಿಮಾಗಳ ನಿರ್ಮಾಪಕ ಡಾ.ಟಿ.ಆರ್ ಚಂದ್ರಶೇಖರ್ 'ಬುದ್ದಿವಂತ- 2' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸೆಪ್ಟೆಂಬರ್ 18ರಂದು ಉಪೇಂದ್ರ ಹುಟ್ಟುಹಬ್ಬ. ಸೆಪ್ಟೆಂಬರ್ 15ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. 15 ವರ್ಷಗಳ ಹಿಂದೆ ಉಪ್ಪಿ ನಟನೆಯ 'ಬುದ್ದಿವಂತ' ಸಿನಿಮಾ ಸೂಪರ್ ಹಿಟ್ ಆಗಿತ್ತು. ತಮಿಳಿನ 'ನಾನ್ ಅವನ್‌ಇಲೈ' ಸಿನಿಮಾ ರೀಮೆಕ್ ಆಗಿದ್ದ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ವಿಭಿನ್ನ ಶೇಡ್‌ಗಳಿದ್ದ ಪಾತ್ರದಲ್ಲಿ ನಟಿಸಿದ್ದರು.
ಕುತೂಹಲ ಕೆರಳಿಸಿದ ಸಿನಿಮಾ
ಜನಪ್ರಿಯ 'ಬುದ್ದಿವಂತ' ಟೈಟಲ್‌ನಲ್ಲೇ ಸಿನಿಮಾ ಮೂಡಿ ಬರುತ್ತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಈ ಬಾರಿ ಉಪೇಂದ್ರ ತಮ್ಮ ಬುದ್ದಿವಂತಿಕೆಯಿಂದ ಏನೆಲ್ಲಾ ಚಮತ್ಕಾರ ಮಾಡ್ತಾರೆ? ಪ್ರೇಕ್ಷಕರನ್ನು ಹೇಗೆ ರಂಜಿಸ್ತಾರೆ? ಎನ್ನುವ ಪ್ರಶ್ನೆ ಸಹಜವಾಗಿಯೇ ಎಲ್ಲರನ್ನು ಕಾಡುತ್ತಿದೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಎಸ್. ನವೀನ್ ಕುಮಾರ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಜಾಗೂ ರವಿವರ್ಮ, ವಿಕ್ರಮ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

'ಬುದ್ದಿವಂತ- 2' ಕಥೆಯೇನು?
ರಾಮ್‌ನಾಥ್ ರುಗ್ವೇದಿ ನಿರ್ದೇಶನದ 'ಬುದ್ದಿವಂತ' ಚಿತ್ರದಲ್ಲಿ ಉಪೇಂದ್ರ ಪಂಚಾಮೃತ ಎನ್ನುವ ಚಾಲಾಕಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಬೇರೆ ಬೇರೆ ಹೆಸರುಗಳಲ್ಲಿ ಯುವತಿಯರನ್ನು ಮೋಸ ಮಾಡುವ ಕೆಲಸ ಮಾಡಿದ್ದರು. 'ಬುದ್ದಿವಂತ- 2' ಕಥೆಗೂ ಈ ಹಿಂದಿನ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ಬರೀ ಟೈಟಲ್ ಮಾತ್ರ ತೆಗೆದುಕೊಳ್ಳಲಾಗಿದೆ. ಆದರೆ ಇಲ್ಲಿ ಹೊಸ ಕಥೆಯೇ ಇರಲಿದೆ. ತನ್ನ ಬುದ್ದಿವಂತಿಕೆಯಿಂದ ಈ ಬಾರಿ ನಾಯಕ ಸಮಸ್ಯೆಗಳಿಂದ ಹೇಗೆ ತಪ್ಪಿಸಿಕೊಳ್ಳುತ್ತಾನೆ ಅನ್ನೋದು ಸಿನಿಮಾ ಕಥೆ.
ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ 'ಬುದ್ದಿವಂತ- 2' ಚಿತ್ರದಲ್ಲಿ ಸೋನಾಲ್ ಮೊಂಟೆರೊ ಹಾಗೂ ಮೇಘನಾ ರಾಜ್ ನಾಯಕಿಯರಾಗಿ ನಟಿಸಿದ್ದಾರೆ. ನಟ ಶ್ರೀನಗರ ಕಿಟ್ಟಿ ಚಿತ್ರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ 'ಅವತಾರ್ ಪುರುಷ' ಹಾಗೂ 'ವೀರಂ' ಕಿಟ್ಟಿ ಇಂತದ್ದೇ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಗಮನ ಸೆಳೆದಿದ್ದರು.
ವಿಭಿನ್ನ ಸಿನಿಮಾ ರಿಯಲ್ ಸ್ಟಾರ್
ನಟ ಉಪೇಂದ್ರ ಭಿನ್ನ ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಕಬ್ಜ' ನಂತರ ತಮ್ಮದೇ ನಿರ್ದೇಶನ ಹಾಗೂ ನಟನೆಯ ಯುಐ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೆ. ಪಿ ಶ್ರೀಕಾಂತ್ ಹಾಗೂ ಮನೋಹರ್ ನಾಯ್ಡು ಬಂಡವಾಳ ಹೂಡುತ್ತಿದ್ದಾರೆ. ಇನ್ನು ಕನಕದಾಸರ ಬಯೋಪಿಕ್ ಚಿತ್ರಕ್ಕೂ ಉಪ್ಪಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಾಗಣ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.


Click it and Unblock the Notifications