UI Teaser: ಆಡಂ - ಈವ್‌ನಿಂದ ಕಲ್ಕಿವರೆಗೆ: ಯುಐ ಟೀಸರ್ ಆ ಸಿನಿಮಾ ನೆನಪಿಸುತ್ತಾ?
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'UI' ಚಿತ್ರದ ಅಫೀಷಿಯಲ್ ಟೀಸರ್ ರಿಲೀಸ್ ಆಗಿದೆ. AI ಜಮಾನದಲ್ಲಿ ಉಪ್ಪಿ 'UI' ಕಥೆ ಹೇಳೋಕೆ ಬರ್ತಿದ್ದಾರೆ. ಈ ಹಿಂದೆ ಬರೀ ಕತ್ತಲು ಕತ್ತಲು ಟೀಸರ್ ತೋರಿಸಿ ಚಮಕ್ ಕೊಟ್ಟಿದ್ದ ಸೂಪರ್ ಸ್ಟಾರ್ ಕೊನೆಗೂ ವಿಷ್ಯುವಲ್ ಟೀಸರ್ ಬಿಟ್ಟಿದ್ದಾರೆ. ನಗರದ ಹೋಟೆಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೀತಿದೆ.
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ 'UI' ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಉಪ್ಪಿ ಆಪ್ತರು ಕೂಡ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕಳೆದ ವರ್ಷವೇ ಬಿಡುಗಡೆ ಆಗುತ್ತದೆ ಎಂದುಕೊಂಡಿದ್ದ ಸಿನಿಮಾ ಕಾರಣಾಂತರಗಳಿಮದ ತಡವಾಗಿತ್ತು. ಆದರೆ ಟೀಸರ್ ಬಂದ್ರು ರಿಲೀಸ್ ಮಾತ್ರ ಇನ್ನು ಅನೌನ್ಸ್ ಆಗಿಲ್ಲ.

ಜಿ. ಮನೋಹರನ್ ಹಾಗೂ ಕೆ. ಪಿ ಶ್ರೀಕಾಂತ್ 'UI' ಚಿತ್ರವನ್ನು ನಿರ್ಮಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದ್ದು ಉಪೇಂದ್ರ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಹೆಚ್. ಸಿ ವೇಣು ಛಾಯಾಗ್ರಹಣ ಚಿತ್ರಕ್ಕಿದೆ. ಅಚ್ಯುತ್ ಕುಮಾರ್, ಆರ್ಮುಗ ರವಿಶಂಕರ್, ಸಾಧು ಕೋಕಿಲ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ನಿಜ ಹೇಳಬೇಕು ಅಂದ್ರೆ ಇಡೀ ಮನುಕುಲದ ಚರಿತ್ರೆಯನ್ನು ಉಪೇಂದ್ರ ಒಂದೂವರೆ ನಿಮಿಷದ ಟೀಸರ್‌ನಲ್ಲಿ ಬಿಚ್ಚಿಟ್ಟಿದ್ದಾರೆ. ಆಡಂ-ಈವ್‌ನಿಂದ ಟೀಸರ್ ಶುರುವಾಗುವಂತೆ ಕಾಣುತ್ತಿದೆ. ಅಲ್ಲಿಂದ ಮುಂದೆ ನಾಗರೀಕತೆ ಬೆಳೆದು ಕೈಗಾರೀಕರಣ, ಆಧುನಿಕರಣದ ಪರಿಣಾಮವಾಗಿ ಪ್ರಪಂಚ ಹೇಗೆಲ್ಲಾ ಸಾಗಿ ಬಂತು? ಬೆಟ್ಟ ಗುಡ್ಡ ಕಾಡು ಎಲ್ಲಾ ಹೋಗಿ ಗಗನಚುಂಬಿ ಕಟ್ಟಡಗಳು, ನಗರ ದುರಾಸೆ, ದೌರ್ಜನ್ಯ ಎಲ್ಲೆ ಮೀರಿ ಏನೆಲ್ಲಾ ಆಯಿತು ಎನ್ನುವುದು ಒಮ್ಮೆ ಕಣ್ಮುಂದೆ ಬರುತ್ತದೆ.
ದುಬೈ ಶೇಕ್‌ಗಳು, ಮಠಾಧೀಶರಂತಹ ನಾ ಸಮಾನ್ಯರನ್ನು ತುಳಿಯುತ್ತಾ ಬೆಳೆಯುವುದು ಪ್ರಪಂಚದಲ್ಲಿ ಹಾಹಾಕಾರ ಶುರುವಾಗಿ ಏನೆಲ್ಲಾ ಆಯಿತು? ಅದನ್ನೆಲ್ಲಾ ತಡೆಯಲು ದಶಾವತಾರದ ಹತ್ತನೇ ಅವತಾರವಾರದ ಕಲ್ಪನೆಯಾದ ಕಲ್ಕಿ ಬರ್ತಾನೆ? ಕೆಟ್ಟದನ್ನು ಅಳಿಸಿ, ಒಳ್ಳೆಯದನ್ನು ಉಳಿಸುತ್ತಾನೆ ಎನ್ನುವ ಕಾನ್ಸೆಪ್ಟ್‌ನಲ್ಲಿ ಉಪ್ಪಿ ಯುಐ ಸಿನಿಮಾ ಮಾಡುತ್ತಿದ್ದಾರೆ ಅನ್ನೋದು ಮೇಲ್ಕೋಟಕ್ಕೆ ಗೊತ್ತಾಗುತ್ತದೆ.
ಇನ್ನು ಪ್ರಪಂಚದಲ್ಲಿರುವ ಎಲ್ಲಾ ಪ್ರಮುಖ ಕಟ್ಟಡಗಳನ್ನು ತೋರಿಸುವ ಮೂಲಕ ಇಡೀ ಪ್ರಪಂಚಕ್ಕೆ ಸಲ್ಲುವ ಕಥೆ ಎನ್ನುವುದನ್ನು ಉಪ್ಪಿ ಹೇಳುವಂತೆ ಕಾಣುತ್ತಿದೆ. ಕೆಲವೇ ಪ್ರಬಲರು ಜನರನ್ನು ಬಂಧಿಸಿ, ಬೆದರಿಸಿ, ಹಿಂಸಿಸುತ್ತಿರುತ್ತಾರೆ. ಇದು AI ಪ್ರಪಂಚ ಅಲ್ಲ, UI ಪ್ರಪಂಚ ಎಂದು ಆರಂಭದಲ್ಲೇ ಹೇಳಿ ಟೀಸರ್ ಬಗ್ಗೆ ಕುತೂಹಲ ಮೂಡುವಂತೆ ಮಾಡಿದ್ದಾರೆ.
ಕೊನೆಗೆ ವಿವಿಧ ಮತಗಳ, ಸಂಸ್ಕೃತಿಗಳ, ವಿವಿಧ ವರ್ಗಗಳ ಜನ ಕಲ್ಕಿ ವಿರುದ್ಧ ಯುದ್ಧಕ್ಕೆ ಹೊರಟಂತೆ ಟೀಸರ್‌ನಲ್ಲಿ ತೋರಿಸಲಾಗಿದೆ. ಇನ್ನು ಉಪ್ಪಿ ಖಡಕ್ ಲುಕ್ ಅಂತೂ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ಆ ರೀತಿ ಜನರನ್ನು ಹಿಂಸಿಸುತ್ತಿರುವುದು ಯಾರು? ಅವರನ್ನು ಬಿಡಿಸಲು ನಾಯಕ ಬರ್ತಾನಾ? ಅಥವಾ ತಪ್ಪು ಮಾಡಿದವರನ್ನು ನಾಯಕನೇ ಈ ರೀತಿ ಹಿಂಸಿಸಿ ಶಿಕ್ಷಿಸುತ್ತಾನಾ? ಎನ್ನುವ ಪ್ರಶ್ನೆಗಳು ಮೂಡುತ್ತವೆ.
'ಅನ್ನಿಯನ್' ಚಿತ್ರದಲ್ಲಿ ವಿಕ್ರಮ್ ಇದೇ ರೀತಿ ಪ್ರಪಂಚ ಸರಿಯಾಗಬೇಕು ಎಂದು ಬಯಸುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಬೇರೆ ಅವತಾರಗಳಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸುವ ಪಾತ್ರ ಮಾಡಿದ್ದರು. UI ಟೀಸರ್ ನೋಡಿದಾಗ ಆ ಸನ್ನಿವೇಶಗಳ ಕಣ್ಮುಂದೆ ಬರುತ್ತದೆ. ಆದರೆ ಉಪ್ಪಿ ಬೇರೆಯದ್ದೇ ಕಥೆ ಹೇಳೋಕೆ ಬರ್ತಿದ್ದಾರೆ. 'ಸೂಪರ್' ಚಿತ್ರದಲ್ಲಿ ಭವಿಷ್ಯದ ಭಾರತ ಹೇಗಿರಬೇಕು ಎನ್ನುವ ಕನಸನ್ನು ತೋರಿಸಿದ್ದರು. ಅದಕ್ಕಿಂತ ಮುಂದುವರೆದ ಕಥೆಯನ್ನು ಇದೀಗ ಹೇಳೊಕೆ ಬರುತ್ತಿರುವಂತೆ ಕಾಣುತ್ತಿದೆ.

ಇನ್ನು ಟೀಸರ್ ನಡುವೆ ಸಣ್ಣ ಲವ್ ಸ್ಟೋರಿಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಉಯ್ಯಾಲೆ ಮೇಲೆ ಇಬ್ಬರು ಕುಳಿತಿದ್ದು, ಸುತ್ತಾ ಇರುವ ಗೋಡೆಗಳ ಮೇಲೆ ಅಂಟಿಸಿರುವ ಭಿತ್ತಿ ಪತ್ರಗಳಲ್ಲಿ ಸಾಕಷ್ಟು ಸಂಗತಿಗಳಿವೆ. ಫೀಲ್ ಲವ್, ಸತ್ಯ ಯು ಲವ್ ಐ ಹೀಗೆ ಒಂದಷ್ಟು ಬರಹಗಳಿವೆ. ಮೈಕ್‌ಗಳನ್ನು ಹಿಡಿದು ಸುದ್ದಿಗೋಷ್ಠಿಗೆ ಬಂದಂತಹ ಪತ್ರಕರ್ತರು ಎನ್ನುವಂತಹ ಸನ್ನಿವೇಶವೂ ಚಿತ್ರದಲ್ಲಿದೆ. ಉಪೇಂದ್ರ ಮುಂದೆ ಹೀಗೆಲ್ಲಾ ಆಗಬಹುದು? ಎಂದು ಈ ಚಿತ್ರದಲ್ಲಿ ಹೇಳುತ್ತಿದ್ದಾರೆ. ಹೀಗಾದರೆ ಚೆನ್ನಾಗಿರುತ್ತದೆ ಎನ್ನುತ್ತಿದ್ದಾರಾ? ಅಥವಾ ತಮ್ಮ ಕಲ್ಪನೆಯಲ್ಲಿ ಈ ರೀತಿ ಪ್ರಪಂಚ ನೋಡುತ್ತಿದ್ದಾರಾ? ಅನ್ನೋದೆಲ್ಲಾ ಸಿನಿಮಾ ತೆರೆಕಂಡ ಮೇಲೆ ಗೊತ್ತಾಗಲಿದೆ.


Click it and Unblock the Notifications











