UI Teaser Update: ಅಭಿಮಾನಿಗಳ ಕೈಗೆ ಉಪ್ಪಿನ ತಗ್ಲಾಕಿದ ಪ್ರೊಡ್ಯೂಸರ್ ಬಾಮೈದ
ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'UI' ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗ್ತಿದ್ದು ಟೀಸರ್ ರಿಲೀಸ್ ಅಪ್‌ಡೇಟ್ ಸಿಕ್ಕಿದೆ. ಇತ್ತೀಚೆಗೆ ಟೀಸರ್ ರಿಲೀಸ್ ಬಗ್ಗೆ ಚಿತ್ರತಂಡ ಸ್ಪೆಷಲ್ ವಿಡಿಯೋ ಹಂಚಿಕೊಂಡಿತ್ತು. ಇದೀಗ ಮತ್ತೊಂದು ವಿಡಿಯೋ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.
ಚಿತ್ರದ ನಿರ್ಮಾಪಕರು ಹಾಗೂ ಉಪೇಂದ್ರ ನಡುವಿನ ಸಂಭಾಷಣೆಯ ರೀತಿಯಲ್ಲಿ ಮೊದಲ ವಿಡಿಯೋ ಬಂದಿತ್ತು. ಫಸ್ಟ್ ಲುಕ್, ಟೀಸರ್ ಯಾಕೆ ರಿಲೀಸ್ ಮಾಡ್ಬೇಕು? ಹೈಪ್ ಮಾಡೋಕೆ ಸಿನಿಮಾ ಸ್ಯಾಂಪಲ್ ರಿಲೀಸ್ ಮಾಡ್ಲೇಬೇಕಾ? ಪಬ್ಲಿಸಿಟಿ ಯಾಕ್ ಮಾಡ್ಬೇಕು? ಹೈಪ್ ಮಾಡೋದಾ? ಆಗೋದಾ? ಒಂದು ನಿಮಿಷದಲ್ಲಿ ನಮ್ಮ ಸಿನಿಮಾ ಯಾವ ರೇಂಜಿಗಿದೆ ಅಂತ ತೋರಿಸುವಂತೆ ಇದ್ದರೆ 2 ಗಂಟೆ ಸಿನಿಮಾ ನಾನ್ಯಾಕೆ ಮಾಡಬೇಕು" ಅಂತೆಲ್ಲಾ ಉಪ್ಪಿ ಪ್ರಶ್ನೆಗಳ ಸುರಿಮಳೆ ಸುರಿಸಿದ್ದರು.

ಹೊಸ ವಿಡಿಯೋದಲ್ಲಿ ಅಭಿಮಾನಿಗಳೇ ಉಪೇಂದ್ರ ಮನೆ ಮುಂದೆ ಬಂದುಬಿಟ್ಟಿದ್ದಾರೆ. ನಮಗೆ 'UI' ಸಿನಿಮಾ ಟೀಸರ್ ಬೇಕೇ ಬೇಕು, ಯಾವಾಗ ರಿಲೀಸ್ ಅಂತ ಕೇಳಿದ್ದಾರೆ. ಉಪ್ಪಿ ಏನೋ ಒಂದು ಹೇಳಿ ಎಲ್ಲರನ್ನು ಸಾಗ ಹಾಕಲು ನೋಡಿದ್ದಾರೆ. ಆದರೆ ನಿರ್ಮಾಪಕರ ಬಾಮೈದ ಅಭಿಮಾನಿಗಳ ಕೈಲಿ ಉಪ್ಪಿನ ಸರಿಯಾಗಿ ತಗ್ಲಾಕಿದ್ದಾನೆ. ಇದು ಜಸ್ಟ್ ಸಿನಿಮಾ ಪ್ರಮೋಷನ್‌ಗಾಗಿ ಮಾಡಿರೋ ಆಕ್ಟ್ ಅಷ್ಟೇ. ಉಪೇಂದ್ರ ಕೊನೆಗೂ ಟೀಸರ್ ರಿಲೀಸ್ ಡೇಟ್, ಪ್ಲೇ ಹೇಳುವಂತೆ ಮಾಡಿದ್ದಾರೆ. ಅಲ್ಲಿಗೆ ನಿರ್ಮಾಪಕರು ಖುಷಿಯಾಗಿದ್ದಾರೆ.
"ಇದೇ ಸೆಪ್ಟೆಂಬರ್ 18, ಅಭಿಮಾನಿಗಳ ದಿನ(ತಮ್ಮ ಹುಟ್ಟುಹಬ್ಬ) ಊರ್ವಶಿ ಥಿಯೇಟರ್‌ನಲ್ಲಿ UI ಸಿನಿಮಾ ಟೀಸರ್ ರಿಲೀಸ್ ಆಗುತ್ತದೆ" ಎಂದು ಉಪೇಂದ್ರ ಘೋಷಿಸಿದ್ದಾರೆ. ರಿಯಲ್ ಸ್ಟಾರ್ ಬಹಳ ದಿನಗಳ ಬಳಿಕ ಮತ್ತೆ ನಿರ್ದೇಶಿಸಿ ನಟಿಸಿರುವ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ಗರಿಗೆದರಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣವಾಗಿದೆ. ಸಿನಿಮಾ ಕತೆಯೇನು? ಕಾನ್ಸೆಪ್ಟ್ ಏನು? ಅನ್ನೋದು ರಿವೀಲ್ ಆಗಿಲ್ಲ. ಆದರೆ ಇದು ಪಕ್ಕಾ ಉಪ್ಪಿ ಸ್ಟೈಲ್ ಸಿನಿಮಾ. ಇವತ್ತಿನ ವಿದ್ಯಮಾನಗಳ ಜೊತೆಗೆ ಒಂದು ವಿಭಿನ್ನ ಕಥೆಯನ್ನು ಉಪ್ಪಿ ಸಿನಿಮಾದಲ್ಲಿ ಹೇಳೋಕೆ ಹೊರಟಿರೋದು ನಿಜ.
'ಉಪ್ಪಿ-2' ಸಿನಿಮಾ ಬಳಿಕ 'UI' ಚಿತ್ರಕ್ಕೆ ಉಪೇಂದ್ರ ಆಕ್ಷನ್ ಕಟ್ ಹೇಳಿದ್ದಾರೆ. ಟೈಟಲ್‌ನಿಂದಲೇ ಭಾರೀ ಕುತೂಹಲ ಮೂಡಿಸಿದ್ದಾರೆ. ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರನ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿಧಿ ಸುಬ್ಬಯ್ಯ, ಇಂದ್ರಜಿತ್ ಲಂಕೇಶ್ ಹಾಗೂ ಪ್ರಶಾಂತ್ ಸಂಬರಗಿ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.
ಕಂಪ್ಯೂಟರೈಸ್ಡ್ ಕ್ಯಾಮೆರಾ ಹಾಗೂ ಮೊಕೊ ಬೋಟ್ ಕ್ಯಾಮರಾಗಳಲ್ಲಿ 'UI' ಸಿನಿಮಾ ಸೆರೆ ಹಿಡಿಯಲಾಗಿದೆ. ಸಿನಿಮಾ ಟೈಟಲ್‌ಗೆ ಅರ್ಥ ಏನು ಅನ್ನೋದೇ ಗೊತ್ತಾಗದಂತೆ ಉಪೇಂದ್ರ ಈಗಾಗಲೇ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ. ಇದನ್ನು ಮೂರು ನಾಮ ಅನ್ನಬೇಕಾ? ಯುಐ ಅನ್ನಬೇಕಾ? ಅಥವಾ ಮತ್ತೇನಾದರೂ ಅರ್ಥ ಇದ್ಯಾ? ಎಲ್ಲದಕ್ಕೂ ಸಿನಿಮಾ ರಿಲೀಸ್ ಬಳಿಕ ಉತ್ತರ ಸಿಗಲಿದೆ.
ಸ್ಪೆಷಲ್ ಸಾಂಗ್ ಬಿಟ್ಟು ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಉಪ್ಪಿ ತಮ್ಮದೇ ಸ್ಟೈಲ್‌ನಲ್ಲಿ ಆ ಸಾಂಗ್ ಕೂಡ ಡಿಸೈನ್ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಟ್ಯೂನ್ ಕೊಟ್ಟ ಬಳಿಕ ಯಾರು ಐಟಂ ಸಾಂಗ್‌ನಲ್ಲಿ ಕುಣಿಯುತ್ತಾರೆ ಅನ್ನೋದು ಗೊತ್ತಾಗಲಿದೆ. ಸೆಪ್ಟೆಂಬರ್ 18ರಂದು ಟೀಸರ್ ರಿಲೀಸ್ ಬಳಿಕ ಪ್ರಮೋಷನ್ ಶುರುಮಾಡಿ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಿದೆ ಚಿತ್ರತಂಡ. ವರ್ಷಾಂತ್ಯಕ್ಕೆ 'UI' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











