UI First Look: ವೀವ್ಸ್, ಲೈಕ್ಸ್‌ಗೋಸ್ಕರ ಯುಐ ಫಸ್ಟ್ ಲುಕ್ ರಿಲೀಸ್ ಮಾಡ್ಬೇಕಾ? ಎಂದ ಉಪ್ಪಿ: ಹಾಗಾದ್ರೆ ಟೀಸರ್ ಬರಲ್ವಾ?
ಫಸ್ಟ್ ಲುಕ್ ಪೋಸ್ಟರ್, ಟೀಸರ್ ಬಿಟ್ಟು ತೆಲಗೆ ಹುಳ ಬಿಡುವವರನ್ನು ನೋಡಿದ್ದೇವೆ. ಆದರೆ ಫಸ್ಟ್ ಲುಕ್, ಟೀಸರ್ ಯಾಕೆ ರಿಲೀಸ್ ಮಾಡ್ಬೇಕು? ಅಂತ ಉಪ್ಪಿ ಕೇಳ್ತಿದ್ದಾರೆ. ಹೈಪ್ ಮಾಡೋಕೆ ಸಿನಿಮಾ ಸ್ಯಾಂಪಲ್ ರಿಲೀಸ್ ಮಾಡ್ಲೇಬೇಕಾ? ಪಬ್ಲಿಸಿಟಿ ಯಾಕ್ ಮಾಡ್ಬೇಕು? ಹೈಪ್ ಮಾಡೋದಾ? ಆಗೋದಾ? ಅಂತೆಲ್ಲಾ ಉಪ್ಪಿ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಬಹಳ ದಿನಗಳ ಬಳಿಕ ನಿರ್ದೇಶಿಸಿ, ನಟಿಸಿರುವ 'UI' ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ಸಿನಿಮಾ ಪ್ರಮೋಷನ್‌ಗೆ ಚಿತ್ರತಂಡ ತಯಾರಿ ನಡೆಸಿದೆ. ಇಂತಹ ಹೊತ್ತಲ್ಲೇ ನಿರ್ಮಾಪಕರಾದ ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರನ್ ಸೀದಾ ಉಪ್ಪಿ ಮನೆಗೆ ಹೋಗಿ ಟೀಸರ್ ರಿಲೀಸ್ ಮಾಡೋಣ ಅಂದಿದ್ದಾರೆ. ಅದಕ್ಕೆ ಉಪ್ಪಿ ತಮ್ಮದೇ ಸ್ಟೈಲ್‌ನಲ್ಲಿ ಟೀಸರ್ ಯಾಕೆ ಬಿಡಬೇಕು? ಎಂದು ಕೇಳಿದ್ದಾರೆ.

'UI' ಸಿನಿಮಾ ಟೀಸರ್ ರಿಲೀಸ್ ಬಗ್ಗೆ ತಂಡ ಸ್ಪೆಷಲ್ ವಿಡಿಯೋ ಮಾಡಿದೆ. ಆ ಮೂಲಕ ಟೀಸರ್ ಬಗ್ಗೆ ಕುತೂಹಲ ಕೆರಳುವಂತೆ ಮಾಡುತ್ತಿದೆ. ಒಂದು ನಿಮಿಷದಲ್ಲಿ ನಮ್ಮ ಸಿನಿಮಾ ಯಾವ ರೇಂಜಿಗಿದೆ ಅಂತ ತೋರಿಸುವಂತೆ ಇದ್ದರೆ 2 ಗಂಟೆ ಸಿನಿಮಾ ನಾನ್ಯಾಕೆ ಮಾಡಬೇಕು ಎಂದು ಉಪೇಂದ್ರ ಕೇಳಿದ್ದಾರೆ. ರಿಯಲ್ ಸ್ಟಾರ್ ಪ್ರಶ್ನೆಗಳಿಗೆ ನಿರ್ಮಾಪಕರಿಬ್ಬರು ಗೊಂದಲಕ್ಕೀಡಾಗಿದ್ದಾರೆ. ಅಂದಹಾಗೆ ಈ ವಿಡಿಯೋ ಮುಂದುವರೆದ ಭಾಗ ಶೀಘ್ರದಲ್ಲೇ ಬರಲಿದೆ. ಶ್ರೀಕಾಂತ್ ಹಾಗೂ ಮನೋಹರನ್ ಯಾವ ರೀತಿ ಉಪೇಂದ್ರನ ಒಪ್ಪಿಸಿ ಟೀಸರ್ ರಿಲೀಸ್ ಮಾಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ಸೆಪ್ಟೆಂಬರ್ 18ಕ್ಕೆ ರಿಯಲ್ ಸ್ಟಾರ್ ಹುಟ್ಟಹಬ್ಬದ ಸಂಭ್ರಮದಲ್ಲಿ 'UI' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಟೀಸರ್ ರಿಲೀಸ್ ಆಗುವ ಸಾಧ್ಯತೆಯಿದೆ. ಬಹಳ ವರ್ಷಗಳ ನಂತರ ಉಪ್ಪಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಗರಿಗೆದರಿದೆ. ಮೂರು ನಾಮನೋ ಮತ್ತೇನೋ ಗೊತ್ತಿಲ್ಲ, ಒಟ್ನಲ್ಲಿ ಟೈಟಲ್‌ನಿಂದಲೇ ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಾಕ್ಕಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ.

ನಿಧಿ ಸುಬ್ಬಯ್ಯ, ಇಂದ್ರಜಿತ್ ಲಂಕೇಶ್ ಹಾಗೂ ಪ್ರಶಾಂತ್ ಸಂಬರಗಿ ಸೇರಿದಂತೆ ದೊಡ್ಡ ತಾರಾಗಣ 'UI' ಚಿತ್ರದಲ್ಲಿದೆ. ಕಂಪ್ಯೂಟರೈಸ್ಡ್ ಕ್ಯಾಮೆರಾ ಹಾಗೂ ಮೊಕೊ ಬೋಟ್ ಕ್ಯಾಮರಾಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಇನ್ನು ಚಿತ್ರದ ಸ್ಪೆಷಲ್ ಸಾಂಗ್ ಶೂಟಿಂಗ್ ಮಾತ್ರ ಬಾಕಿಯಿದೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಸ್ಪೆಷಲ್ ಸಾಂಗ್ ಟ್ಯೂನ್ ಸಿಕ್ಕ ಕೂಡಲೇ ಸಾಂಗ್ ಶೂಟಿಂಗ್ ನಡೆಯಲಿದೆ.
ಹೀರೊ ಆದ ಬಳಿಕ ಉಪೇಂದ್ರ ಸಿನಿಮಾ ನಿರ್ದೇಶನ ಮಾಡುವುದು ಕಮ್ಮಿ ಆಗಿದೆ. ಆದರೆ ಅಭಿಮಾನಿಗಳು ಮಾತ್ರ ಸದಾ ಅವರ ನಿರ್ದೇಶನದ ಚಿತ್ರಕ್ಕಾಗಿ ಕಾಯುತ್ತಾರೆ. ನಿರ್ದೇಶನದಲ್ಲಿ ಅಂತಾದೊಂದು ಮ್ಯಾಜಿಕ್ ಮಾಡಿದ್ದಾರೆ ಸ್ಯಾಂಡಲ್‌ವುಡ್ ಬುದ್ಧಿವಂತ. 8 ವರ್ಷಗಳ ಹಿಂದೆ ಕೊನೆಯದಾಗಿ 'ಉಪ್ಪಿ-2' ಚಿತ್ರ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದರು. ಇದೀಗ 'UI' ಕತೆ ಹೇಳಲು ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಥೀಮ್ ಪೋಸ್ಟರ್‌ನಿಂದಲೇ ಉಪ್ಪಿ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡುವಂತೆ ಮಾಡಿದ್ದರು. ಇನ್ನು ಟೀಸರ್ ರಿಲೀಸ್ ಮಾಡಿ ಯಾವ ರೀತಿ ಸದ್ದು ಮಾಡುತ್ತಾರೋ ಕಾದು ನೋಡಬೇಕಿದೆ.


Click it and Unblock the Notifications











