ಅತ್ತ ಅಪ್ಪನಿಗೆ 30 ವರ್ಷ: ಇತ್ತ ಮಗಳಿಗೆ ಮೊದಲ ಹೆಜ್ಜೆ
30 ವರ್ಷಗಳ ಹಿಂದೆ ಒಬ್ಬ ಸಾಧಾರಣ ವ್ಯಕ್ತಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಉಪೇಂದ್ರ ಇಂದು ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಆಗಿ ಕನ್ನಡ ಚಿತ್ರರಂಗದಲ್ಲಿ ಬೆಳೆದು ನಿಂತಿದ್ದಾರೆ. ಉಪೇಂದ್ರ ಚಿತ್ರ ಜೀವನ ಶುರು ಆಗಿದ್ದೇ ನಟ, ನಿರ್ದೇಶಕ ಕಾಶಿನಾಥ್ ಅವರ ಬಳಿ. ಕಾಶಿನಾಥ್ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಉಪ್ಪಿ ಆ ಕೆಲಸ ಮಾಡುತ್ತಲೇ ಕಾಶಿನಾಥ್ ನಿರ್ದೇಶನದ ಚಿತ್ರದಲ್ಲಿ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದರು.
1989ರಲ್ಲಿ ರಿಲೀಸ್ ಆದ 'ಅನಂತನ ಅವಾಂತರ' ಚಿತ್ರದ ಒಂದು ಹಾಡಿನಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು. ಚಿತ್ರದ ಹಾಡಿನಲ್ಲಿ ಉಪೇಂದ್ರ ಕಾಮಣ್ಣನಾಗಿ ಮಿಂಚಿದ್ದರು. ಚಿಕ್ಕ ಪಾತ್ರವಾದರೂ ಉಪೇಂದ್ರ ಮೊದಲು ಬಣ್ಣ ಹಚ್ಚಿದ್ದು ಇದೇ ಚಿತ್ರದಿಂದ. ಅಂದ್ಹಾಗೆ, ಉಪೇಂದ್ರ ಅವರ ಮೊದಲ ಸಿನಿಮಾ ರಿಲೀಸ್ ಆಗಿ ಕಳೆದ ಜನವರಿಗೆ 30 ವರ್ಷಗಳು ಕಳೆದಿವೆ.

ಉಪೇಂದ್ರ ಈಗ ನಿರ್ದೇಶಕನಾಗಿ, ನಟನಾಗಿ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲೂ ಉಪೇಂದ್ರ ಮಿಂಚುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಿಯಲ್ ಸ್ಟಾರ್ ಮುದ್ದಿನ ಮಗಳು ಐಶ್ವರ್ಯ ಸಹ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅಭಿನಯದ 'ದೇವಕಿ' ಚಿತ್ರದ ಮೂಲಕವೇ ಮಗಳು ಸಹ ಎಂಟ್ರಿಯಾಗಿರುವುದು ವಿಶೇಷ. ಸದ್ಯ, ಮಗಳ ಟೀಸರ್ ರಿಲೀಸ್ ಆಗಿದ್ದು ಮೊದಲ ಚಿತ್ರದಲ್ಲೇ ಐಶ್ವರ್ಯ ತಮ್ಮ ಪ್ರತಿಭೆ ಮೂಲಕ ಉತ್ತಮ ಪ್ರತಿಕ್ರಿಯೆ ಪಡೆದಿದ್ದಾರೆ.
ಅಪ್ಪನ ರೀತಿ ಮಗಳು ಸಹ ಚಿತ್ರರಂಗಕ್ಕೆ ಬಂದಿದ್ದಾರೆ. ಅತ್ತ ಉಪೇಂದ್ರ ಚಿತ್ರರಂಗಕ್ಕೆ ಬಂದು ಮೂವತ್ತು ವರ್ಷ ಆಗಿದೆ. ಇತ್ತ ಅವರ ಮಗಳು ಮೊದಲ ಹೆಜ್ಜೆ ಯನ್ನು ಇಟ್ಟಿದ್ದಾರೆ.


Click it and Unblock the Notifications











