Kabzaa Trailer: 'ಕಬ್ಜ' ಟ್ರೈಲರ್ ಲಾಂಚ್ ಈವೆಂಟ್ ಟ್ರೈಲರ್ ಲಾಂಚ್ ಸ್ಥಳ, ದಿನಾಂಕ ನಿಗದಿ: ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
ಆರ್. ಚಂದ್ರು ನಿರ್ಮಿಸಿ, ನಿರ್ದೇಶನ ಮಾಡುತ್ತಿರುವ 'ಕಬ್ಜ' ಸಿನಿಮಾ ಸೌಂಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಈ ಗ್ಯಾಂಗ್‌ಸ್ಟರ್ ಸಿನಿಮಾ ಪ್ಯಾನ್ ಲೆವೆಲ್‌ನಲ್ಲಿ ತೆರೆಗಪ್ಪಳಿಸಲಿದೆ. ಭಾನುವಾರವಷ್ಟೇ ಶಿಡ್ಲಘಟ್ಟದಲ್ಲಿ ಚಿತ್ರದ ಆಡಿಯೋ ಲಾಂಚ್ ಆಗಿತ್ತು. ಇದೀಗ ಟ್ರೈಲರ್ ಲಾಂಚ್‌ಗೆ ದಿನಗಣನೆ ಶುರುವಾಗಿದೆ. ಬಹಳ ದೊಡ್ಡಮಟ್ಟದಲ್ಲಿ ಈವೆಂಟ್ ಪ್ಲ್ಯಾನ್ ಮಾಡಲಾಗುತ್ತಿದೆ.
ಈಗಾಗಲೇ 'ಕಬ್ಜ' ಚಿತ್ರದ 3 ಹಾಡುಗಳು ರಿಲೀಸ್ ಆಗಿದೆ. ಒಂದು ಟೀಸರ್ ಕೂಡ ಬಂದು ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಬಹುಕೋಟಿ ವೆಚ್ಚದಲ್ಲಿ 'ಕಬ್ಜ' ಸಿನಿಮಾ ನಿರ್ಮಾಣವಾಗಿದೆ. ಅದಕ್ಕೆ ತಕ್ಕಂತೆ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಇದೀಗ ಟ್ರೈಲರ್ ಲಾಂಚ್ ಸಮಯ ಹತ್ತಿರ ಬಂದಿದೆ. ಟೀಸರ್, ಸಾಂಗ್ಸ್ ನೋಡಿದ ಮೇಲೆ ಟ್ರೈಲರ್ ಬಗ್ಗೆಯೂ ಕುತೂಹಲ ಇದೆ.

ಮಾರ್ಚ್ 2ಕ್ಕೆ ಮುಂಬೈ ಅಂದೇರಿಯ ಸಿನಿಪೊಲೀಸ್ ಥಿಯೇಟರ್‌ನಲ್ಲಿ 'ಕಬ್ಜ' ಟ್ರೈಲರ್ ಲಾಂಚ್ ಈವೆಂಟ್ ನಡೆಯಲಿದೆ. ಅದಕ್ಕೆ ಬೇಕಾದ ತಯಾರಿ ಈಗಾಗಲೇ ಶುರುವಾಗಿದೆ. ಆರ್. ಚಂದ್ರು ಬಹಳ ದೊಡ್ಡಮಟ್ಟದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಸುಮಾರು 50 ದೇಶಗಳಲ್ಲಿ ಏಕಕಾಲಕ್ಕೆ 4000 ಸ್ಕ್ರೀನ್‌ಗಳಲ್ಲಿ ಆರ್. ಚಂದ್ರು 'ಕಬ್ಜ' ಚಿತ್ರವನ್ನು ರಿಲೀಸ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.
ಈ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಭಾರ್ಗವ್ ಭಕ್ಷಿ ಎನ್ನುವ ಖಡಕ್ ರೋಲ್ ಪ್ಲೇ ಮಾಡಿದ್ದಾರೆ. ನಾಯಕಿಯಾಗಿ ಶ್ರಿಯಾ ಶರಣ್ ಮಿಂಚಿದ್ದಾರೆ. ಇನ್ನುಳಿದಂತೆ ಮುರಳಿ ಶರ್ಮಾ, ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಕಬೀರ್ ದುಹಾನ್ ಸಿಂಗ್, ಜಾನ್ ಕೊಕೇನ್, ಬಿ. ಸುರೇಶ್ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ತಾನ್ಯಾ ಹೋಪ್ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.
5 ಭಾಷೆಗಳಲ್ಲಿ 'ಕಬ್ಜ' ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. 40ರ ದಶಕದಿಂದ ಗ್ಯಾಂಗ್‌ಸ್ಟರ್ ಡ್ರಾಮಾ ಸಿನಿಮಾ ಕಥೆ ಶುರುವಾಗಲಿದೆ. ರೆಟ್ರೋ ಸ್ಟೈಲ್‌ನಲ್ಲಿ ಚಿತ್ರವನ್ನು ಬಹಳ ಸೊಗಸಾಗಿ ತೆರೆಗೆ ತರಲಾಗುತ್ತಿದೆ. ಬಹುತೇಕ ಸೆಟ್‌ಗಳಲ್ಲೇ 'ಕಬ್ಜ' ಚಿತ್ರವನ್ನು ಕಟ್ಟಿಕೊಡಲಾಗಿದೆ. ಎರಡು ಭಾಗಗಳಾಗಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಒಳ್ಳೆ ಮೊತ್ತಕ್ಕೆ ಚಿತ್ರದ ಥ್ರಿಯೇಟ್ರಿಕಲ್ ರೈಟ್ಸ್ ಮಾರಾಟವಾಗಿದೆ. ಹೊರ ರಾಜ್ಯಗಳಲ್ಲೂ ಸಿನಿಮಾ ದೊಡ್ಡದಾಗಿ ಸೌಂಡ್ ಮಾಡುವ ಅಂದಾಜಿದೆ.

ಎ. ಜೆ ಶೆಟ್ಟಿ ಸಿನಿಮಾಟೋಗ್ರಫಿ 'ಕಬ್ಜ' ಚಿತ್ರಕ್ಕಿದೆ. ರವಿ ಬಸ್ರೂರು ಸಂಗೀತ ಚಿತ್ರದ ಮತ್ತೊಂದು ಹೈಲೆಟ್. ಅಂಡರ್‌ವರ್ಲ್ಡ್ 'ಕಬ್ಜ'ಗಾಗಿ ಗ್ಯಾಂಗ್‌ಸ್ಟರ್‌ಗಳ ನಡುವೆ ನಡೆಯುವ ಕಾದಾಟದ ಕಥೆ ಚಿತ್ರದಲ್ಲಿದೆ. ಬ್ರಿಟೀಷರ ಕಾಲದಲ್ಲಿ ಅನಿವಾರ್ಯ ಕಾರಣಗಳಿಂದ ಅರಕೇಶ್ವರ ಅಂಡರ್‌ವರ್ಲ್ಡ್‌ಗೆ ಎಂಟ್ರಿ ಕೊಡ್ತಾನೆ. ಮುಂದೆ ಆತ ಅಂಡರ್‌ವರ್ಲ್ಡ್ ಕಿಂಗ್ ಆಗ್ತಾನೆ. ಅಲ್ಲಿಂದ ಮುಂದೆ ಸಿನಿಮಾ ಕಥೆ ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಚಂದ್ರು ಹೇಳಿದ್ದಾರೆ.
ಸ್ವತಃ ಚಂದ್ರು ಕಥೆ, ಚಿತ್ರಕಥೆ ಬರೆದು 'ಕಬ್ಜ' ಸಿನಿಮಾ ಮಾಡಿದ್ದಾರೆ. 'KGF' ರೀತಿಯಲ್ಲೇ ಸಿನಿಮಾ ಸದ್ದು ಮಾಡೋಕೆ ಬರ್ತಿದೆ. ರಾಣಿ ಮಧುಮತಿ ಪಾತ್ರದಲ್ಲಿ ನಾಯಕಿ ಶ್ರಿಯಾ ಶರಣ್ ಕಾಣಿಸಿಕೊಂಡಿದ್ದಾರೆ. ಮಧುಮತಿಯ ನಟರಾಜ ಆರಾಧನೆಯ 'ನಮಾಮಿ ನಮಾಮಿ' ಸಾಂಗ್ ಈಗಾಗಲೇ ರಿಲೀಸ್ ಆಗಿ ಸಿನಿರಸಿಕರ ಮನ ಗೆದ್ದಿದೆ. ರಿಯಲ್ ಸ್ಟಾರ್ ದಶಕಗಳ ಹಿಂದೆಯೇ ತಮ್ಮ 'ಎ', 'ಉಪೇಂದ್ರ' ಸಿನಿಮಾಗಳಿಂದ ಪರಭಾಷಾ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ 'ಕಬ್ಜ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ.


Click it and Unblock the Notifications











