ತೆಲುಗಿನತ್ತ ಮತ್ತೆ ಮುಖ ಮಾಡಿದ ಉಪೇಂದ್ರ, ಹೀರೋ ಯಾರು ? ಯಾವುದು ಸಿನಿಮಾ ?
ಚಿತ್ರರಂಗದ ಯಾವ ಹಿನ್ನೆಲೆ ಇಲ್ಲದೇ ಕಾಶೀನಾಥ್ ಎಂಬ ಅಪ್ರತಿಮ ಪ್ರತಿಭಾವಂತನ ಮನವೊಲಿಸಿ ಅವಕಾಶ ಪಡೆದು, ಬರಹಗಾರನಾಗಿ ಕೆಲಸ ಆರಂಭ ಮಾಡಿದವರು ಉಪೇಂದ್ರ. ಆ ನಂತರ ಸಹ ನಿರ್ದೇಶಕರಾಗಿ ಬಡ್ತಿಯನ್ನು ಪಡೆದು 'ತರ್ಲೆ ನನ್ ಮಗ' ಚಿತ್ರದ ಮೂಲಕ ನಿರ್ದೇಶಕನ ಸ್ಥಾನವನ್ನು ಕೂಡ ಅಲಂಕರಿಸಿದರು. ತಮ್ಮ ಚಿತ್ರಗಳಿಂದ ಭಾರತದ ಚಿತ್ರ ಪ್ರೇಮಿಗಳನ್ನು ನಿಬ್ಬೇರಗಾಗಿಸಿದರು.
ಆ ನಂತರ ನಾಯಕನಾಗಿ ಕೂಡ ಹೊರ ಹೊಮ್ಮಿದರು. ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಸ್ಥಾನವನ್ನು ಕೂಡ ಅಲಂಕರಿಸಿದರು. ಇನ್ನು ಉಪೇಂದ್ರಗೆ ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಬೇರೆ ಭಾಷೆಯಲ್ಲಿ ಕೂಡ ಅಗಣಿತ ಅಭಿಮಾನಿಗಳಿದ್ದಾರೆ. ಅದರಲ್ಲಿಯೂ ತೆಲುಗಿನಲ್ಲಿ ಉಪೇಂದ್ರ ಅವರಿಗೆ ವಿಶೇಷ ಸ್ಥಾನ ನೀಡಲಾಗಿದೆ.

ಇದಕ್ಕೆ ಕೈಗನ್ನಡಿ ಎನ್ನುವಂತೆ ಉಪೇಂದ್ರ ತೆಲುಗಿನಲ್ಲಿ ರಾ..ನೀಥೋನೆ ವುಂಟನು..ಓಕ್ಕೇ ಮಾತಾ.. ಚಿತ್ರಗಳಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಸೆಲ್ಯೂಟ್, ಸನ್ ಆಫ್ ಸತ್ಯ ಮೂರ್ತಿ, ಗಣಿ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು ಇಲ್ಲಿಯವರೆಗೆ ಉಪೇಂದ್ರ ಹಲವಾರು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇಂಥಾ ಉಪೇಂದ್ರ ಇದೀಗ ಮತ್ತೊಂದು ತೆಲುಗು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್‌ನ್ನು ಬಿಡುಗಡೆ ಮಾಡಲಾಗಿದ್ದು ಚಿತ್ರದಲ್ಲಿ ಉಪೇಂದ್ರ ಸೂಪರ್ ಸ್ಟಾರ್ ಪಾತ್ರವನ್ನೇ ನಿರ್ವಹಿಸುತ್ತಿದ್ದಾರೆ. ಸೂರ್ಯ ಕುಮಾರ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.
ರಾಮ್ ಪೋತಿನೇನಿ ಈ ಚಿತ್ರದ ನಾಯಕ. ಇದು ಇವರು ಅಭಿನಯಿಸಿರುವ 22ನೇ ಸಿನಿಮಾ. ಇಸ್ಮಾರ್ಟ್ ಶಂಕರ್ ಚಿತ್ರದ ನಂತರ ಒಂದಾದ ಮೇಲೊಂದು ಸೋಲನ್ನು ಕಂಡಿರುವ ರಾಮ್ ಪೋತಿನೇನಿ ಈ ಚಿತ್ರದಲ್ಲಿ ಸಾಗರ್ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ಆಕ್ಷನ್ ಇಮೇಜ್‌ನ ಬದಲಿಸಿಕೊಳ್ಳುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡುತ್ತಿದ್ದಾರೆ.
ಚಂದು ಚಾಂಪಿಯನ್, ಮಿಸ್ಟರ್ ಬಚ್ಚನ್ ಚಿತ್ರಗಳಲ್ಲಿ ಅಭಿನಯಿಸಿರುವ ಭಾಗ್ಯಶ್ರೀ ಬೋರ್ಸೆ ಈ ಚಿತ್ರದ ನಾಯಕಿ. ವಿಜಯ್ ದೇವರಕೊಂಡ ಅಭಿನಯದ ಕಿಂಗಡಮ್ ಚಿತ್ರದಲ್ಲಿ ಕೂಡ ಭಾಗ್ಯಶ್ರೀ ಅಭಿನಯಿಸಿದ್ದಾರೆ.
ಇನ್ನು ಅನುಷ್ಕಾ ಶೆಟ್ಟಿ ಅಭಿನಯದ ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದ ಮಹೇಶ್ ಬಾಬು ಪಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ರಾವ್ ರಮೇಶ್, ಮುರಳಿ ಶರ್ಮಾ, ಸತ್ಯಾ, ರಾಹುಲ್ ರಾಮಕೃಷ್ಣ, ಮತ್ತು ವಿಟಿವಿ ಗಣೇಶ್ ಈ ಚಿತ್ರದ ಪೋಷಕ ಪಾತ್ರ ವರ್ಗದಲ್ಲಿದ್ದಾರೆ. ಇದೇ ಮೇ 15ಕ್ಕೆ ಚಿತ್ರದ ಶೀರ್ಷಿಕೆ ಅನಾವರಣವಾಗಲಿದೆ. ಚಿತ್ರದ ಕುರಿತು ಇನ್ನು ಹೆಚ್ಚಿನ ಮಾಹಿತಿ ಹೊರ ಬೀಳಲಿದೆ.
ಇನ್ನುಳಿದಂತೆ ಈ ಚಿತ್ರವನ್ನು ಹೊರತು ಪಡಿಸಿದರೆ ಉಪೇಂದ್ರ ತಮಿಳಿನಲ್ಲಿ ಕೂಲಿ ಚಿತ್ರದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಜೊತೆ ಅಭಿನಯಿಸಿದ್ದಾರೆ. ಲೊಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರದಲ್ಲಿ ಆಮೀರ್ ಖಾನ್ ಕೂಡ ಪಾತ್ರವೊಂದನ್ನು ನಿರ್ವಹಿಸಿರುವುದು ವಿಶೇಷ. ಇನ್ನು ಕನ್ನಡದಲ್ಲಿ ಅರ್ಜುನ್ ಜನ್ಯ ನಿರ್ದೇಶನದ 45 ಚಿತ್ರದಲ್ಲಿ ಕೂಡ ಉಪೇಂದ್ರ ಅಭಿನಯಿಸಿದ್ದಾರೆ. ಡಾ.ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಕಾಂಬಿನೇಷನನ್ ಈ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
ಮತ್ತೊಂದೆಡೆ ಉಪೇಂದ್ರ ಅವರ ಮಗ ಆಯುಷ್ ಕೂಡ ತಂದೆಯ ಜಾಡು ಹಿಡಿದು ಚಿತ್ರರಂಗಕ್ಕೆ ಬಂದಿದ್ದು, ಆಯುಷ್ ಅಭಿನಯದ ಚೊಚ್ಚಲ ಚಿತ್ರದ ಮುಹೂರ್ತ ಕೂಡ ಸದ್ಯದಲ್ಲಿಯೇ ನಡೆಯಲಿದೆ. ಇದರ ನಡುವೆ ಪ್ರಿಯಾಂಕ ಉಪೇಂದ್ರ ಕೂಡ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ.


Click it and Unblock the Notifications











