'ಮಹದಾಯಿ' ಸಮಸ್ಯೆ ನಿವಾರಣೆಗೆ ಪ್ರಜಾಕಾರಣಿ ಉಪ್ಪಿ ಕೊಟ್ಟ ಈ ಸಲಹೆ ಒಮ್ಮೆ ಕೇಳಿ!
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡಿದೆ. ಹೋರಾಟದಲ್ಲಿ ಭಾಗಿಯಾಗಿರುವ ರೈತರು ಸಿನಿಮಾ ನಟರು ಕೂಡ ನಮ್ಮ ಹೋರಾಟಕ್ಕೆ ಸಾಥ್ ನೀಡಬೇಕು ಎಂದು ಹೇಳಿದ್ದರು. ಅದೇ ರೀತಿ ನಿನ್ನೆ ಕೆಲವು ನಟರು ಮತ್ತು ಇಂದು ನಟ ಶಿವರಾಜ್ ಕುಮಾರ್ ಮತ್ತು ಯಶ್ ರೈತರ ಹೋರಾಟಕ್ಕೆ ಜೊತೆಯಾಗಲಿದ್ದಾರೆ.
ಇವುಗಳ ನಡುವೆಯೇ ನಟ ಹಾಗೂ ಕೆ.ಪಿ.ಜೆ.ಪಿ ಪಕ್ಷದ ಮುಖ್ಯಸ್ಥ ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಪುಸ್ತಕದ ಎರಡು ಪುಟಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಇರುವ ಒಂದು ಘಟನೆಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಈ ಹಿಂದೆ ಕಾವೇರಿ ಹೋರಾಟದ ವೇಳೆ ಉಪೇಂದ್ರ ''ಜನರಿಗೆ ಕಾವೇರಿ ನೀರಿನ ಸಮಸ್ಯೆ ಇಲ್ಲ.. ನೀರಿನ ಸಮಸ್ಯೆ ಇದೆ'' ಎಂದು ಹೇಳಿದ್ದರು.
ಅದೇ ರೀತಿ ಈಗಲೂ ಒಂದು ಸಣ್ಣ ಉದಾಹರಣೆ ಮೂಲಕ ಮಹದಾಯಿ ಮಾತ್ರವಲ್ಲ ರಾಜ್ಯದ ನೀರಿನ ಸಮಸ್ಯೆಯನ್ನು ಯಾವ ರೀತಿ ಬಗೆ ಹರಿಸಿಕೊಳ್ಳಬಹುದು ಎಂಬ ಸಲಹೆ ನೀಡಿದ್ದಾರೆ. ಮುಂದೆ ಓದಿ...

ಉಪ್ಪಿ ಐಡಿಯಾ
ಯಾವಾಗಲೂ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುವ ಉಪೇಂದ್ರ ಇದೀಗ ಆಂಧ್ರ ಪ್ರದೇಶದಲ್ಲಿ ನಡೆದ ಒಂದು ಘಟನೆಯನ್ನು ವಿವರಿಸಿ ಅದೇ ರೀತಿ ನಮ್ಮ ರಾಜ್ಯ ನೀರಿನ ಸಮಸ್ಯೆಯನ್ನು ನಿವಾರಿಸಬಹುದು ಅಲ್ವಾ ಎಂದು ಉಪ್ಪಿ ಕೇಳಿದ್ದಾರೆ.

ಆಂಧ್ರದಲ್ಲಿ ನಡೆದ ಸತ್ಯ ಘಟನೆ
ಆಂಧ್ರದ ಅನಂತಪುರ ಜಿಲ್ಲೆಯ ರಾಯಲಸೀಮದಲ್ಲಿ ಇದೇ ರೀತಿ ನೀರಿನ ಹಾಹಾಕಾರ ಇತ್ತು. ಆ ವೇಳೆ ಅಂದರೆ 1995ರಲ್ಲಿ ಪುಟ್ಟಪರ್ತಿಯ ಭಗವಾನ್ ಸಾಯಿಬಾಬಾ ರವರು ಸರ್ಕಾರವೇ ಮಾಡದ ಒಂದು ದೊಡ್ಡ ಕೆಲಸವನ್ನು ಪ್ರಾರಂಭ ಮಾಡಿದರು.

ಸತತ 18 ತಿಂಗಳಿನಲ್ಲಿ
ರಾಯಲಸೀಮದ ನೀರಿನ ಸಮಸ್ಯೆ ನಿವಾರಣೆಗೆ ಮುಂದಾದ ಭಗವಾನ್ ಸಾಯಿಬಾಬಾ ಅವರು 18 ತಿಂಗಳಿನಲ್ಲಿ 2000 ಕಿಲೋ ಮೀಟರ್ ಪೈಪ್ ಲೈನ್ ಜೊತೆಗೆ 43 ನೀರಿನ ದೊಡ್ಡ ತೊಟ್ಟಿಗಳನ್ನು ನಿರ್ಮಿಸಿದರು. ಒಂದು ನೀರಿನ ತೊಟ್ಟಿ 1.5 ಲಕ್ಷ ಲೀಟರ್ ನಿಂದ 25 ಲಕ್ಷ ಲೀಟರ್ ಸಾಮರ್ಥ್ಯ ಇತ್ತು. ಇದರ ಮೂಲಕ ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಚೆನೈ ನಲ್ಲಿ ನಡೆದ ಘಟನೆ
ಇದೇ ರೀತಿಯ ಘಟನೆ ಚೆನೈ ನಲ್ಲಿ ಕೂಡ ನಡೆದಿದೆ. ಚೆನೈನಲ್ಲಿ ಇದ್ದ ನೀರಿನ ಸಮಸ್ಯೆಗೆ ಸಾಯಿಬಾಬಾ ಅವರು ಕೃಷ್ಣ ನದಿಯ ನೀರನ್ನು ಚೆನೈಗೆ ಹರಿಸುವಂತೆ ಕೆಲಸ ಶುರು ಮಾಡಿದರು. ಅದೇ ರೀತಿ ನಿಗದಿತ ಅವಧಿಯಲ್ಲಿ ಅದು ಪೂರ್ಣವಾಯಿತು. ಜನರಿಗೆ ಕುಡಿಯುವ ನೀರು ಜೊತೆಗೆ ನೀರು ಬರುವ ಮಾರ್ಗದಲ್ಲಿ 3 ಲಕ್ಷ ಹೆಕ್ಟೇರ್ ವ್ಯವಸಾಯ ಭೂಮಿಗೆ ನೀರನ್ನು ಹರಿಸಲಾಯ್ತು.

ಪ್ರಯತ್ನ ಪಡಬೇಕು
''ಪ್ರಯತ್ನ ಇದ್ದರೇ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿ'' ಎಂದು ಹೇಳಿರುವ ಉಪೇಂದ್ರ 'ಮಹದಾಯಿಗೆ ಈ ರೀತಿಯ ಪ್ರಯತ್ನಗಳು ಪರಿಹಾರವಾಗಬಹುದೇ ??'' ಎಂದು ಟ್ವಿಟ್ಟರ್ ಖಾತೆಯಲ್ಲಿ ಜನರಿಗೆ ಒಂದು ಸಲಹೆ ಮುಂದಿಟ್ಟಿದ್ದಾರೆ.


Click it and Unblock the Notifications











