ಪ್ರೇಮಿಗಳ ದಿನಕ್ಕೆ 'UI' ಹಾಡಿನ ದಿಬ್ಬಣ ; ಪಂಚ ಭಾಷೆಯಲ್ಲಿ ಸಂಗೀತ ಸುಧೆ
ಉಪೇಂದ್ರ ನಿರ್ದೇಶಕರಾಗಿ, ನಟರಾಗಿ ಹೆಸರಾದವರು. ತಮ್ಮ ಅದ್ಭುತ ಪ್ರತಿಭೆ ಮೂಲಕ ಕನ್ನಡದಲ್ಲಷ್ಟೇ ಅಲ್ಲದೇ ಇತರ ಭಾಷೆಗಳಲ್ಲಿಯೂ ಹೆಸರು ಮಾಡಿ ಸೂಪರ್ ಸ್ಟಾರ್ ಆದವರು ಉಪೇಂದ್ರ. ಇಂತಹ ಉಪೇಂದ್ರ ನಿರ್ದೇಶನಕ್ಕಿಳಿದರೆ ಕೇವಲ ಕನ್ನಡಿಗರ ಕಣ್ಣು ಅಷ್ಟೇ ಅಲ್ಲ, ಅಕ್ಕ-ಪಕ್ಕದ ರಾಜ್ಯದವರ ಕಣ್ಣರಳುತ್ತೆ. ಉಪ್ಪಿ ಈ ಬಾರಿ ಯಾವ ಮ್ಯಾಜಿಕ್ ಮಾಡ್ತಾರೆ ಎಂಬ ಕುತೂಹಲ ಗರಿಗೆದರುತ್ತೆ.
ಸದ್ಯಕ್ಕೆ ಯುಐ ಚಿತ್ರದ ವಿಚಾರದಲ್ಲಿ ಕೂಡ ಇಂಥಹದ್ದೇ ಒಂದು ಕುತೂಹಲ ಮನೆ ಮಾಡಿದೆ. ಹೀಗಿರುವಾಗ ಉಪೇಂದ್ರ ತಮ್ಮ ಚಿತ್ರದ ಮೊದಲ ಹಾಡನ್ನ ಅನಾವರಣಗೊಳಿಸಲು ಸರ್ವ ಸನ್ನದ್ಧರಾಗಿದ್ದಾರೆ. ಚಿತ್ರದ ಮೊದಲ ಹಾಡಿನ ಚಿಕ್ಕದಾದ ತುಣುಕನ್ನ ಇದೇ ಫೆಬ್ರವರಿ ಹದಿನಾಲ್ಕರಂದು, ಪ್ರೇಮಿಗಳ ದಿನದ ಪ್ರಯುಕ್ತ ಬಿಡುಗಡೆ ಮಾಡಲಿದ್ದಾರೆ.

ಇನ್ನೂ ಹಾಡಿನ ಕುರಿತು ಮಾಹಿತಿಯನ್ನ ಹಂಚಿಕೊಂಡಿರುವ ಉಪೇಂದ್ರ, ಇದೇ ಸಮಯದಲ್ಲಿ ಹೊಚ್ಚ ಹೊಸ ಪೋಸ್ಟರ್ ನ ಕೂಡ ಬಿಡುಗಡೆ ಮಾಡಿದ್ದಾರೆ. ವಿಶೇಷ.. ವಿಕ್ಷಿಪ್ತ ಹಾಗೂ ವಿನೂತನವಾದ ಈ ಪೋಸ್ಟರ್ ಅಭಿಮಾನಿ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆ ಹುಟ್ಟು ಹಾಕಿದೆ. ಉಪೇಂದ್ರ ಅವರ ಈ ಗೆಟಪ್ ಕುತೂಹಲ ಕೆರಳಿಸಿದೆ. ಹಾಲಿವುಡ್ ನ ಅವತಾರ್ ಚಿತ್ರಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಯು ಐ ಮೂಡಿ ಬಂದಿದೆಯಾ ಎಂಬ ಪ್ರಶ್ನೆಯನ್ನೂ ಕೂಡ ಈ ಪೋಸ್ಟರ್ ಮೂಡಿಸಿದೆ.
ಅಜನೀಶ್ ಲೋಕನಾಥ್ ಸಂಗೀತ
ರವಿಶಂಕರ್, ಅಚ್ಯುತ್ ಕುಮಾರ್, ಸಾಧುಕೋಕಿಲಾ ಈ ಚಿತ್ರದಲ್ಲಿ ಭಿನ್ನವಾದ ಪಾತ್ರಗಳನ್ನ ನಿರ್ವಹಿಸಿದ್ದಾರೆ. ರೀಶ್ಮಾ ನಾಣಯ್ಯ, ನಿಧಿ ಸುಬ್ಬಯ್ಯ ಕೂಡ ಸಿನಿಮಾದಲ್ಲಿದ್ದಾರೆ. ಇನ್ನೂ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವರ್ಲ್ಡ್‌ನಂತೆ ಉಪೇಂದ್ರ ತಮ್ಮ ಯುಐ ವರ್ಲ್ಡ್ ಸೃಷ್ಟಿಸಿದ್ದಾರೆ.

ಈ ಲೋಕಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಸ್ಪರ್ಶದ ಅನುಭವ ಈ ಫೆಬ್ರವರಿ 14ರಂದು ಆಗಲಿದೆ. ವಿಶೇಷ ಅಂದರೆ ಈ ಅನುಭವ ಕನ್ನಡಿಗರಿಗಷ್ಟೇ ಸೀಮಿತವಾಗಿಲ್ಲ. ಬೇರೆ ಭಾಷೆಯವರಿಗೂ ಕೂಡ ಈ ಅನುಭವ ಆಗಲಿದೆ.
ಟೆಕ್ನಿಕಲಿ ಸೌಂಡ್ ಮಾಡಲಿರುವ ಯುಐ
ಯು ಐ ಸಿನಿಮಾದಲ್ಲಿ ಗ್ರಾಫಿಕ್ಸ್ ಜೊತೆಗೆ ಕಂಪ್ಯೂಟರೈಸ್ಡ್ ಕ್ಯಾಮೆರಾ ಬಳಕೆಯಾಗಿದೆ. ಹೀಗೆ ಒಂದಷ್ಟು ಹೊಸ ಪ್ರಯತ್ನಗಳ ಜತೆಗೆ ಉಪೇಂದ್ರ ಪ್ರೇಕ್ಷಕರ ಎದುರು ಬರಲು ಸಜ್ಜಾಗುತ್ತಿದ್ದಾರೆ. ಈ ರೀತಿಯ ಪ್ರಯತ್ನಕ್ಕಾಗಿ ಆರಂಭದಿಂದಲೇ ಎಲ್ಲರ ಚಿತ್ತ ಕದಿಯುತ್ತಿರುವ ಯುಐ ಚಿತ್ರವನ್ನ ಅದ್ಧೂರಿಯಾದ ಸೆಟ್ ಗಳನ್ನ ನಿರ್ಮಿಸಿ ಚಿತ್ರೀಸಲಾಗಿದೆ.

ಇನ್ನೂ ಕೆ.ಪಿ.ಶ್ರೀಕಾಂತ್ ಹಾಗೂ ಜಿ,ಮನೋಹರನ್ ಚಿತ್ರವನ್ನ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಕನ್ನಡದ ಜೊತೆ ಬೇರೆ ಭಾಷೆಗಳಲ್ಲಿ ಕೂಡ ಏಕಕಾಲಕ್ಕೆ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಟೊಂಕ ಕಟ್ಟಿ ನಿಂತಿದ್ದಾರೆ. ಭಾರತದಲ್ಲೇ ಮೊದಲ ಬಾರಿ ಎನ್ನುವಂಥ ಕಥಾವಸ್ತು ಹಾಗೂ ಸಿನಿಮಾಗೆ ಬಳಕೆ ಮಾಡಿರುವ ತಂತ್ರಜ್ಞಾನದ ವಿಚಾರದಲ್ಲಿಯೂ ಹಲವು ಮೊದಲಗಳು ಈ ಚಿತ್ರದಲ್ಲಿವೆ.
ಒಟ್ಟಿನಲ್ಲಿ ಇದು ಎಐ ಅಲ್ಲ ಯುಐ ಜಗತ್ತು ಎಂದು ಮೊದಲಿಂದ ಹೇಳುತ್ತಾ ಬಂದಿರುವ ಉಪೇಂದ್ರ, ನೀವೆಲ್ಲರೂ ನಾನು ಆಗಬೇಕು ಅದೇ ಸಿನಿಮಾ ಎಂದು ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆ ಸಮಯದಲ್ಲಿ ಸಿನಿಮಾದ ಆಳ ಅಗಲ ಬಿಚ್ಚಿಡುವ ಪ್ರಯತ್ನವನ್ನ ಉಪೇಂದ್ರ ಪಟ್ಟಿದ್ದರು. ಇದೀಗ ಚಿತ್ರದ ಮೊದಲ ಹಾಡನ್ನ ಬಿಡುಗಡೆ ಮಾಡುತ್ತಿದ್ದಾರೆ. ಫೆಬ್ರವರಿ 14ರಿಂದ ಉಪ್ಪಿಯ ಯು ಐ ಚಿತ್ರದ ಹಾಡಿನ ದಿಬ್ಬಣ ಹೊರಡಲಿದೆ.


Click it and Unblock the Notifications











