For Quick Alerts
  ALLOW NOTIFICATIONS  
  For Daily Alerts

  ಆಮಂತ್ರಣ ಪತ್ರಕ್ಕೆ 9 ಲಕ್ಷ, ಮುಹೂರ್ತಕ್ಕೆ 25 ಲಕ್ಷ. ಅವರು ತಮ್ಮ ಹೆಸರಿಗೆ ತಕ್ಕಂತೆಯೇ ನಡೆದುಕೊಳ್ಳುತ್ತಿದ್ದಾರೆ

  By Staff
  |

  *ಸತ್ಯನಾರಾಯಣ

  ಹಾಲಿವುಡ್‌ ಚಿತ್ರ ಮುಂದೆ ಹೋಗಿದ್ದರಿಂದ ಲಾಭ ಆಗಿದ್ದು ಯಾರಿಗೆ ? ಸ್ಯಾಂಡಲ್‌ ವುಡ್‌ನಲ್ಲಿ ಈ ಪ್ರಶ್ನೆಗೆ ಕೋರಸ್‌ನಲ್ಲಿ ಸಿಗೋದು ಒಂದೇ ಉತ್ತರ - ಧನರಾಜ್‌ಗೆ. ಯಾಕೆಂದರೆ ಉಪೇಂದ್ರ ಸಲೀಸಾಗಿ ಧನರಾಜ್‌ ಕೈಗೆ ಸಿಕ್ಕರು. ಅದು ರುಜುವಾತಾಗಿದ್ದು ಕಳೆದ ಶುಕ್ರವಾರ ಅರಮನೆ ಅಂಗಳದಲ್ಲಿ ನಡೆದ ಮುಹೂರ್ತದಲ್ಲಿ. ಉಪೇಂದ್ರ ನಾಯಕತ್ವದ ಚಿತ್ರವೊಂದರ ಮುಹೂರ್ತ ಕೂಡ ಅನನ್ಯವಾಗಿರಬೇಕು ಎಂಬ ಅಭಿಮಾನಿಗಳ ನಿರೀಕ್ಷೆ ಕೂಡ ಅಲ್ಲಿ ಫಲಿಸಿತ್ತು. ಅರಮನೆ ಅಂದ ಮೇಲೆ ರಾಜನಿರಬೇಕು, ಅದಕ್ಕಾಗಿ ಮೈಸೂರಿನಿಂದ ಶ್ರೀಕಂಠದತ್ತ ಒಡೆಯರ್‌ ಅವರನ್ನೇ ಕರೆ ತಂದ ಉಪೇಂದ್ರ ತಂತ್ರ ಕೂಡ ಜನ ಮೆಚ್ಚುಗೆಗೆ ಪಾತ್ರವಾಯಿತು. ಮಲ್ಲಿಗೆ ಚೆಲ್ಲಿದ ರೆಡ್‌ ಕಾರ್ಪೆಟ್‌....ದೊರೆಯ ಸ್ವಾಗತಕ್ಕೆ ಆನೆಗಳು, ಕುದುರೆಗಳು, ಆಳೆತ್ತರದ ಹಾರಗಳು ಹಾಗೂ ಸಾವಿರಾರು ಜನ.

  ಚಿತ್ರದ ಮುಹೂರ್ತಕ್ಕೆ ರಾತ್ರಿ ಹೊತ್ತನ್ನೇ ಆರಿಸಿಕೊಂಡಿದ್ದಕ್ಕೂ ಅಲ್ಲಿ ಕಾರಣಗಳಿದ್ದವು. ಎಲ್ಲಿ ನೋಡಿದರಲ್ಲಿ ಬೆಳಕಿನ ಚಿತ್ತಾರ. ಅರಮನೆಯ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಪುಟ್ಟ ವೇದಿಕೆಗೆ ದೀಪಾಲಂಕಾರವಿತ್ತು. ಅದರ ಇಕ್ಕೆಲಗಳಲ್ಲಿ ದ್ವಾರ ಪಾಲಕರ ವೇಷದಲ್ಲಿ ನಿಂತ ಪ್ರತಿಮೆಗಳು. ಪ್ರತಿ ಕಾರ್ಯಕ್ರಮ ಆರಂಭಕ್ಕೆ ಮುನ್ನ ಲೈಟ್‌ ಆಫ್‌ ಆಗುತ್ತಿತ್ತು. ಅನಂತರ ಮೂಡುವ ಹೊಸ ಬೆಳಕಿನಲ್ಲಿ ಹೊಸ ದೃಶ್ಯಾವಳಿ ಪ್ರತ್ಯಕ್ಷ .

  ಮೊದಲಿಗೆ ಉದಯ್‌ ಜಾದೂಗಾರ್‌ ಮ್ಯಾಜಿಕ್‌ ಶೋ. ಮಂತ್ರದಂಡದಿಂದಲೇ ಜ್ಯೋತಿ ಬೆಳಗುವ ಗಿಮಿಕ್‌. ಅದೇ ದಂಡ ಅನಂತರ ಹೂ ಪಕಳೆಗಳನ್ನು, ರಾಷ್ಟ್ರ ಧ್ಜಜವನ್ನೂ ಸೃಷ್ಟಿಸಿತು. ಅವರ ಸಂಗಾತಕ್ಕಿದ್ದ ಮಿಮಿಕ್ರಿ ಪಟು ದಯಾನಂದ್‌ ಅವರ ಮಾತಿನ ವರಸೆ, ಗದ್ದಲದಲ್ಲಿ ಮುಳುಗಿಹೋಗಿದ್ದು ಕೂಡ ಅತಿಥಿಗಳ ಸೌಭಾಗ್ಯವೇ ಆಗಿರಬಹುದು. ಆಗ ಯಾರಿಗೂ ಮಾತು ಕೇಳುವ ವ್ಯವಧಾನವಿರಲಿಲ್ಲ. ಡೆಸೆಂಬರ್‌ ಚಳಿ, ಅದೂ ಅರಮನೆಯ ಬಯಲಲ್ಲಿ ಅಂದ ಮೇಲೆ ನೀವೇ ಊಹಿಸಿಕೊಳ್ಳಿ. ನೀವು ಹಲ್ಲು ಕಡಿಯುವ ಸದ್ದೇ ನಿಮಗೆ ಆಪ್ಯಾಯಮಾನವಾಗಬೇಕು !

  ಮೊದಲು ಒಡೆಯರು ಕಾರಲ್ಲಿ ಬಂದರು. ಅವರ ಬೆನ್ನಿಗೇ ಆನೆಗಳು. ಕೊನೆಗೆ ಕುದುರೆ ಸಾರೋಟದಲ್ಲಿ ಬಂದಿಳಿದವಳು ಚಿತ್ರದ ನಾಯಕಿ ಪ್ರಿಯಾಂಕ. ಚೆಲುವಲ್ಲಿ ಅವಳಿಗೆ ಐವತ್ತು ಅಂಕ. ನಾಯಕಿಯ ಆಗಮನವಾದ ಕೂಡಲೇ ವೇದಿಕೆಯ ಎಡ ಬಲದಿಂದ ಇಬ್ಬರು ನಾಯಕರು ಪ್ರತ್ಯಕ್ಷ . ಕನ್ನಡದ ಉಪೇಂದ್ರ ತೆಲುಗಲ್ಲಿ ಸೆಟ್ಲ್‌ ಆಗಿರುವ ಕನ್ನಡಿಗ ಪ್ರಭುದೇವ. ಇಬ್ಬರೂ, ನಾಯಕಿಯರಿಗೆ ಹಾರ ಹಾಕಿದರು. ಒಡೆಯರು ಕ್ಲಾಪ್‌ ಮಾಡಿದರು. ಸಂತೋಷದಿಂದಲ್ಲ , ಆವತ್ತಿನ ಮಟ್ಟಿಗೆ ಅವರಿಗೆ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವುದು ಕರ್ತವ್ಯವಾಗಿತ್ತು. ಅಂದ ಹಾಗೆ ಇದೇ ದೃಶ್ಯವನ್ನು ಚಿತ್ರದಲ್ಲೂ ಬಳಸಿಕೊಳ್ಳಲಾಗುವುದು ಎಂದು ಉಪೇಂದ್ರ ಆಮೇಲೆ ತಿಳಿಸಿದರು. ಹತ್ತು ನಿಮಿಷದಲ್ಲಿ ಮುಗಿದ ಕಾರ್ಯಕ್ರಮದ ಕ್ಲೈಮ್ಯಾಕ್ಸ್‌ಗೆ 15 ನಿಮಿಷದ ಬಾಣ ಬಿರುಸು, ಪಟಾಕಿಗಳ ಸದ್ದು, ಗಗನದಲ್ಲಿ ನಕ್ಷತ್ರ ಮಾಲೆ. ಅಲ್ಲಿಂದ ಬಿದ್ದ ಹೂಕುಂಡದ ಚೂರುಗಳೇ ಅತಿಥಿಗಳ ಪಾಲಿಗೆ ದೇವತೆಗಳು ಸುರಿಸಿದ ಪುಷ್ಪ ವೃಷ್ಟಿ.

  ಎಲ್ಲಿಂದಲೋ ಬಂದ ಸಾವಿರಾರು ಅತಿಥಿಗಳಿಗೆ, ಕರೆಯದೇ ಬಂದ ಉತ್ಸಾಹಿಗಳಿಗೆ ನಿರ್ಮಾಪಕ ಧನರಾಜ್‌ ಊಟದ ವ್ಯವಸ್ಥೆ ಮಾಡಿದ್ದರು. ಅದು ಅವರ ಎಂದಿನ ಮೆಚ್ಚಿನ ಕಾಯಕ. ಅನಂತರ ಕ್ಯಾಪಿಟಲ್‌ ಹೋಟೆಲ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಉಪೇಂದ್ರ ಅವರು ಪ್ರಶ್ನೆಗಳ ದಾಳಿಗೂ, ಮೈಗಂಟಿದ ಬಟ್ಟೆ ತೊಟ್ಟ ಪ್ರಿಯಾಂಕ ಕ್ಯಾಮರಾಗಳ ದಾಳಿಗೂ ಬಲಿಯಾದರು. ಚಪ್ಪಲಿಧಾರಿ ಸಿಂಪಲ್ಟನ್‌ ಪ್ರಭುದೇವ ಅವರಿಂದ ಕನ್ನಡದಲ್ಲೇ ಮಾತು. ಇಷ್ಟು ದಿನ ದೊಡ್ಡ ಬ್ಯಾನರ್‌ನ ಚಿತ್ರಕ್ಕಾಗಿ ಕಾದಿದ್ದು, ಉಪೇಂದ್ರರ ಮೂಲಕ ಅದು ಫಲಿಸಿದ್ದು, ಇತ್ಯಾದಿ ವಿಷಯಹಗಳನ್ನು ಹೇಳಿಕೊಂಡು ತಮ್ಮ ಪಾತ್ರಕ್ಕೆ ತಾವೇ ಕಂಠದಾನ ಮಾಡುವ ಆಸೆಯನ್ನೂ ವ್ಯಕ್ತ ಪಡಿಸಿದರು.

  ಉಪೇಂದ್ರ ಕತೆ ಹೇಳಲು ಒಲ್ಲೆ ಅಂದರು. ಅಬಿಮಾನಿಗಳು ತಮ್ಮ ಬಗ್ಗೆ ಇಟ್ಟ ನಿರೀಕ್ಷೆಗಂತೂ ಮೋಸ ಮಾಡೋಲ್ಲ ಅಂದರು. ಈಜಿಪ್ತಿನಲ್ಲಿ ಶೂಟಿಂಗ್‌ ಸಾಧ್ಯತೆ, 90 ದಿನಗಳಲ್ಲಿ ಶೂಟಿಂಗ್‌ ಮುಗಿಸುವ ನಿರ್ಧಾರ, ಗುರುಕಿರಣ್‌ ಬಿಜಿಯಾಗಿದ್ದರಿಂದ ಹಳೇ ಮಿತ್ರ ಸಾಧು ಕೋಕಿಲ ಅವರಿಗೊಂದು ಚಾನ್ಸ್‌ ಕೊಟ್ಟದ್ದು, ಛಾಯಾ ಗ್ರಾಹಕ ವೇಣುವೇ ತನಗಿಷ್ಟ ಎಂದು ಸಾರಿದ್ದು, ಇತ್ಯಾದಿ ಅಂಶಗಳು ಉಪೇಂದ್ರ ಮಾತಲ್ಲಿ ತೇಲಿ ಹೋದವು. ವಿವಾದಕ್ಕೆ ಅವಕಾಶವೇ ಬಾರದಂತೆ ಗೋಷ್ಠಿ ನಿಭಾಯಿಸಿದ್ದು ಉಪೇಂದ್ರರ ಚಾತುರ್ಯಕ್ಕೆ ನಿದರ್ಶನ.

  ಅಂದ ಹಾಗೆ ಈ ಚಿತ್ರವನ್ನು ನಿರ್ದೇಶಿಸುವವರು ಉಪೇಂದ್ರರ ಶಿಷ್ಯರಾದ ಲೋಕನಾಥ್‌ ಮತ್ತು ರಾಜಾ ರಾಮ್‌. ಮುಹೂರ್ತದಲ್ಲಾಗಲೀ, ಸುದ್ದಿಗೋಷ್ಠಿಯಲ್ಲಾಗಲೀ ಈ ಜೋಡಿಯನ್ನ ಯಾರೂ ಗುರುತಿಸಲಿಲ್ಲ. ಅವರಿಗೆ ಅದು ಬೇಕಿದ್ದಂತೆಯೂ ಕಾಣಿಸಲಿಲ್ಲ. ಉಪೇಂದ್ರ ಇದ್ದ ಮೇಲೆ ಅಲ್ಲಿ ಉಳಿದವರಿಗೇನು ಕೆಲಸ ! ಸಂಗೀತ ನಿರ್ದೇಶಕ ಅವರ ದೇಹ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರೂ ಮನಸ್ಸು ಮಾತ್ರ ಉಪೇಂದ್ರರ ಆಫೀಸಿನಲ್ಲಿತ್ತು. ಪದೇ ಪದೇ ನಾನು ಹೋಗ್ಲಾ ಎಂದು ಅವರು ಉಪೇಂದ್ರರ ಬಳಿ ಗೋಗರೆಯುತ್ತಿದ್ದದ್ದೂ ಆವತ್ತಿನ ಮಟ್ಟಿಗೆ ಒಳ್ಳೆ ದೃಶ್ಯ.

  ಮುಹೂರ್ತದಿಂದ ಹಿಡಿದು ಸಂತೋಷ ಕೂಟದ ತನಕ ಅತಿಥಿಗಳ ಸಕಲ ಬೇಡಿಕೆಗಳನ್ನೂ ಪೂರೈಸುವಲ್ಲಿ ಧನ್ಯತೆಯನ್ನು ಅನುಭವಿಸಿದ ಧನರಾಜ್‌ ಯಾರೊಂದಿಗೂ ಮಾತಾಡಲಿಲ್ಲ. ಮಾತಿಗೆ ಕರೆದರೆ ಪಾನೀಯ ತರುತ್ತಿದ್ದರು. ಅರಮನೆಯಲ್ಲಿ ಪಾರ್ವತಮ್ಮ ರಾಜ್‌ ಕುಮಾರ್‌ ತಮ್ಮನ್ನು ವಿಶ್ವಾಸದಿಂದ ಆಲಂಗಿಸಿದ್ದು ಮಾತ್ರ ಅವರ ನೆನಪಿನ ಆಲ್ಬಂನಲ್ಲಿ ಅಚ್ಚಾಗಿತ್ತು. ಕಾವೇರಿ ಹೆಸರಲ್ಲಿ ಆರಂಭವಾಗಬೇಕಿದ್ದ ಈ ಚಿತ್ರಕ್ಕೆ ಈಗ ಹೊಸ ಹೆಸರಿನ ಹುಡುಕಾಟ ನಡೆದಿದೆ. ಶೂಟಿಂಗ್‌ ಮುಗಿಯುವ ದಿನ ಪೇಪರ್‌ ನೋಡಿ. ಅಲ್ಲೇ ಟೈಟಲ್‌ ಬಹಿರಂಗವಾಗುತ್ತದೆ ಅನ್ನುತ್ತಾರೆ ಉಪೇಂದ್ರ. ಮೂರುಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುವುದರಿಂದ ಧನರಾಜ್‌ ಅವರ ಹಳೇ ಸಾಲ ತೀರಿ, ಅವರ ಬದುಕಿಗೊಂದು ದಾರಿಯಾಗುವ ಸಾಧ್ಯತೆಯಂತೂ ಇದೆ. ಆದರೆ ಅವರು ಖರ್ಚು ಮಾಡುತ್ತಿರುವ ರೀತಿ ಮಾತ್ರ ಉಪೇಂದ್ರರನ್ನೇ ಗಾಬರಿಯಾಗಿಸಿದೆ. ಬರೀ ಮುಹೂರ್ತದ ಆಮಂತ್ರಣ ಪತ್ರಕ್ಕೇ 9 ಲಕ್ಷ ಖರ್ಚಾಗಿದೆ. ಮುಹೂರ್ತದ ಖರ್ಚು ಒಟ್ಟಾರೆ 25 ಲಕ್ಷವಂತೆ.

  ಧನರಾಜ್‌ ತಮ್ಮ ಹೆಸರಿಗೆ ತಕ್ಕಂತೆಯೇ ನಡೆದುಕೊಳ್ಳುತ್ತಿದ್ದಾರೆ.

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X