ಬುದ್ದಿವಂತನನ್ನೇ ಯಾಮಾರಿಸಿದ ಚಾಲಾಕಿ ಹ್ಯಾಕರ್, ಉಪೇಂದ್ರ ಮತ್ತು ಪ್ರಿಯಾಂಕ ಕಡೆಯಿಂದ ನಿಮಗೆ ಮೆಸೇಜ್ ಬಂತಾ ?
ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು... ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೋಸ ಮಾಡಲು ವಂಚಕರು ಸದಾ ಹೊಸ ದಾರಿಯನ್ನು ಹುಡುಕುತ್ತಲೇ ಇರುತ್ತಾರೆ. ಇನ್ನೂ ಇವರ ಕಣ್ಣು ಕೇವಲ ಜನಸಾಮಾನ್ಯರ ಮೇಲೆ ಮಾತ್ರ ಇರುವುದಿಲ್ಲ.
ಬದಲಿಗೆ ಚಿತ್ರರಂಗದವರ ಮೇಲೆ ಕೂಡ ಇರುತ್ತೆ. ದೊಡ್ಡ ದೊಡ್ಡ ಸ್ಟಾರ್‌ಗಳ ಮೇಲೆಯೂ ಇರುತ್ತೆ. ಚೂರು ಯಾಮಾರಿದರೂ ಸಾಕು ಈ ಕಿರಾತಕರು ತಮ್ಮ ಖೆಡ್ಡಾಗೆ ಸೆಲೆಬ್ರೆಟಿಗಳನ್ನು ಕೆಡವಿಕೊಂಡು ಬಿಡುತ್ತಾರೆ. ಉದಾಹರಣೆಗೆ ಕನ್ನಡ ಚಿತ್ರರಂಗದ ನಾಯಕ-ನಿರ್ದೇಶಕ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕ ಅವರನ್ನೇ ತೆಗೆದುಕೊಳ್ಳಿ.

ಹೌದು, ಇನ್ನೇನು ಈ ಸೆಪ್ಟೆಂಬರ್ 18ರಂದು ಉಪೇಂದ್ರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಅಭಿಮಾನಿಗಳ ಅಭಿಮಾನದ ಜಾತ್ರೆಯಲ್ಲಿ ಮಿಂದೇಳಲಿದ್ದಾರೆ. ಅಭಿಮಾನಿಗಳು ಕೂಡ ಈ ಬಾರಿಯ ಬರ್ತ್‌ಡೇಗೆ ವೆರೈಟಿ ವೆರೈಟಿ ಉಡುಗೊರೆಗಳನ್ನು ಉಪೇಂದ್ರ ತಮಗೆ ನೀಡಬಹುದು ಎಂದುಕೊಂಡಿದ್ದಾರೆ. ತಮ್ಮ ನಿರ್ದೇಶನದ ಮುಂದಿನ ಚಿತ್ರವನ್ನು ಉಪೇಂದ್ರ ಘೋಷಿಸಬಹುದಾ..? ಹೇಗೆ..? ಎಂದು ತಮ್ಮ ತಮ್ಮಲ್ಲಿ ಚರ್ಚೆಯನ್ನು ಕೂಡ ಮಾಡುತ್ತಿದ್ದಾರೆ.
ಹೀಗಿರುವಾಗ ಇಂದು ಬೆಳ್ಳಂಬೆಳಗ್ಗೆ ಚಾಲಾಕಿ ಹ್ಯಾಕರ್ ಭಾರತೀಯ ಚಿತ್ರರಂಗದ ಬುದ್ದಿವಂತ ನಿರ್ದೇಶಕ ಉಪೇಂದ್ರಗೆ ಚಮಕ್ ಕೊಟ್ಟಿದ್ದಾನೆ. ಪಾರ್ಸಲ್ ನೀಡುವ ನೆಪದಲ್ಲಿ ಮೊದಲು ಉಪ್ಪಿ ಅವರ ಮುದ್ದಿನ ಮಡದಿ ಪ್ರಿಯಾಂಕ ಅವರ ಫೋನ್ ಹ್ಯಾಕ್ ಮಾಡಿದ್ದಾನೆ.
ಪ್ರಿಯಾಂಕ ಉಪೇಂದ್ರ ಫೋನ್ ಹ್ಯಾಕ್ ಆದ ವಿಚಾರವನ್ನು ಅರಿಯದ ಉಪೇಂದ್ರ, ತಮ್ಮ ಫೋನ್‌ನ್ನು ಕೂಡ ಪ್ರಿಯಾಂಕ ಅವರಿಗೆ ನೀಡಿದ್ದಾರೆ. ಆಗ ಪ್ರಿಯಾಂಕ ಮತ್ತೆ ಪ್ರಯತ್ನ ಮಾಡಿದಾಗ ಉಪೇಂದ್ರ ಅವರ ಫೋನ್‌ನ್ನು ಕೂಡ ಹ್ಯಾಕರ್ ಹ್ಯಾಕ್ ಮಾಡಿದ್ದಾನೆ.
ಇಷ್ಟೆಲ್ಲಾ ಆದ ನಂತರ ಉಪೇಂದ್ರ ಸದ್ಯ ಎಚ್ಚೆತ್ತುಕೊಂಡಿದ್ದು, ನನ್ನ ಮತ್ತು ಪ್ರಿಯಾಂಕ ಅವರ ಫೋನ್ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ. ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ, ನಮ್ಮಿಂದ ಹಣ ಕಳಿಸುವಂತೆ ಮೆಸೇಜ್ ಬಂದರೆ ಯಾರು ಕೂಡ ಕಳುಹಿಸಬೇಡಿ ಅದು ನಾವಲ್ಲ ಎಂದು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಲ್ಲಿ.. ಚಿತ್ರರಂಗದ ಸ್ನೇಹಿತರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಪೊಲೀಸರ ಮೊರೆ ಹೋಗುತ್ತಿದ್ದೇವೆ ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಯುತ್ತೆ ಎಂದು ಕೂಡ ಹೇಳಿದ್ಧಾರೆ.
ಇನ್ನೂ ಉಪೇಂದ್ರ ಬೆನ್ನ ಹಿಂದೆಯೇ ಪ್ರಿಯಾಂಕ ಉಪೇಂದ್ರ ಕೂಡ ವಿಡಿಯೋ ಮೂಲಕ ಮನವಿಯನ್ನು ಮಾಡಿಕೊಂಡಿದ್ದು, ಯಾರು ಹಣ ಕಳುಹಿಸಬೇಡಿ ಎಂದು ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ''ನ್ಯೂಸ್ 18 ಕನ್ನಡ''ಗೆ ಪ್ರತಿಕ್ರಿಯೆಯನ್ನು ಕೂಡ ನೀಡಿರುವ ಪ್ರಿಯಾಂಕ ಉಪೇಂದ್ರ, ಹೊಸ ಫರ್ನೀಚರ್‌ನ ನಾವು ತೆಗೆದುಕೊಂಡಿದ್ದೇವು. ಆ ಪೈಕಿ ನಮ್ಮ ಮನೆಗೆ ಇನ್ನೂ ಎರಡು ಫರ್ನೀಚರ್ ಬರುವುದು ಬಾಕಿ ಇತ್ತು ಎಂದು ಹೇಳಿದ್ದಾರೆ.
ಬೆಳಗ್ಗೆ ಅಪರಿಚಿತ ನಂಬರ್ ನಿಂದ ಕರೆ ಬಂತು ಆಗ ನಾನು ಫೋನ್ ರಿಸೀವ್ ಮಾಡಿದೆ. ಆ ನಂತರ ಡಿಲಿವರಿ ಕೋಡ್ ಬರುತ್ತೆ ಅದನ್ನು ಹೇಳುವಂತೆ ನನಗೆ ಹೇಳಿದರು ಎಂದಿರುವ ಪ್ರಿಯಾಂಕ ಉಪೇಂದ್ರ ನಾನು ನಿಜಕ್ಕೂ ಡಿಲಿವರಿ ಕೋಡ್ ಇರಬಹುದೇನೋ ಎಂದುಕೊಂಡು ಹೇಳಿದೆ. ಆ ನಂತರ ನನ್ನ ಮೊಬೈಲ್ ಫೋನ್ ಹ್ಯಾಂಗ್ ಆಗಲು ಶುರುವಾಯ್ತು ಎಂದು ಹೇಳಿದ್ದಾರೆ. ಆ ನಂತರ ಹಲವರಿಗೆ ಹಣ ಕಳಿಸುವಂತೆ ಮೆಸೇಜ್‌ಗಳು ಹೋಗಿವೆ ಈ ಹಿನ್ನೆಲೆ ಯಾರು ಹಣ ಕಳುಹಿಸಬೇಡಿ ಎಂದು ಹೇಳಿದ್ದಾರೆ. ಸದ್ಯ ಉಪೇಂದ್ರ ಮತ್ತು ಪ್ರಿಯಾಂಕ ಸೈಬರ್ ಕ್ರೈಮ್‌ಗೆ ದೂರು ನೀಡಿದ್ಧಾರೆ.


Click it and Unblock the Notifications











