»   » ಉಸಿರೆ ಚಿತ್ರದಲ್ಲಿ ಚಕ್ಕೋತ, ಚಕ್ಕೋತ... ಹುಡುಗಿ

ಉಸಿರೆ ಚಿತ್ರದಲ್ಲಿ ಚಕ್ಕೋತ, ಚಕ್ಕೋತ... ಹುಡುಗಿ

Posted By: Staff
Subscribe to Filmibeat Kannada

ಕ್ರೇಜಿ ಸ್ಟಾರ್‌ ರವಿಚಂದ್ರನ್‌ ನಟಿಸಿರುವ ಉಸಿರೇ.. ಚಿತ್ರೀಕರಣದ ಹಂತದಲ್ಲೇ ಭಾರಿ ಪ್ರಚಾರ ಪಡೆದಿದೆ. ಸುದ್ದಿಯನ್ನೂ ಮಾಡಿದೆ. ಮಾಡುತ್ತಿದೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿರುವ ಈ ಚಿತ್ರದ ಮೂಲಕ ಹಂಸಲೇಖ ಮತ್ತು ರವಿಚಂದ್ರನ್‌ ಮತ್ತೆ ಒಂದಾಗುತ್ತಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು.

ಈಗ ಬಂದಿರುವ ಸುದ್ದಿಯ ರೀತ್ಯ ಉಸಿರೇ ಚಿತ್ರದಿಂದ ಉಸಿರು ಬಿಗಿ ಹಿಡಿದ ಹಂಸಲೇಖ ನಿರ್ಗಮಿಸಿದ್ದಾರೆ. ಆ ಜಾಗವನ್ನು ಕೆ. ಕಲ್ಯಾಣ್‌ ಆಕ್ರಮಿಸಿದ್ದಾರೆ. ಈ ಮುನ್ನ ಚಿತ್ರಕ್ಕೆ ಹಂಸಲೇಖ ಗೀತೆಗಳನ್ನು ಬರೆಯುತ್ತಾರೆ ಎಂದು ನಿರ್ಧಾರವಾಗಿತ್ತು. ಇಳಯ ರಾಜರ ಸಂಗೀತದಲ್ಲಿ, ಹಂಸಲೇಖರ ಸಾಹಿತ್ಯಕ್ಕೆ ರವಿಚಂದ್ರನ್‌ ಹೆಜ್ಜೆ ಹಾಕುತ್ತಾರೆ ಎಂಬ ಸುದ್ದಿ ಸ್ಯಾಂಡಲ್‌ವುಡ್‌ ಸಂದಿಗೊಂದಿಗಳಲ್ಲೆಲ್ಲಾ ಸುಳಿದಾಡಿ, ಪತ್ರಿಕೆಗಳಿಗೂ ಆಹಾರವಾಗಿತ್ತು.

ಆದರೆ, ದಿಢೀರ್‌ ಬೆಳವಣಿಗೆಯಲ್ಲಿ ಎಲ್ಲ ಬದಲಾಯಿತು. ಹಂಸಲೇಖ ಬರೆಯಬೇಕಿದ್ದ ಹಾಡುಗಳನ್ನು ಕೆ. ಕಲ್ಯಾಣ್‌ ಬರೆದಿದ್ದಾರೆ. ಈ ಗೀತೆಗಳನ್ನು ಎಸ್‌.ಪಿ. ಬಾಲಸುಬ್ರಹ್ಮಣ್ಯಂ, ಇಳಯರಾಜಾ ಅವರ ಪುತ್ರಿ ಭವತರಣಿ, ಜೇಸುದಾಸ್‌, ಮನು ಹಾಗೂ ಚಿತ್ರಾ ಹಾಡಿದ್ದಾರೆ. ಮೊದಲ ಬಾರಿಗೆ ಇಳಯ ರಾಜ ರವಿಚಂದ್ರನ್‌ ಅಭಿನಯದ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಗಾನಬ್ರಹ್ಮ ಮೆಚ್ಚಿದ ಕಲ್ಯಾಣ : ಕಲ್ಯಾಣ್‌ ಬರೆದಿರುವ ಬ್ರಹ್ಮನೆ ಮೆಚ್ಚಿದನು ಈ ಸುಂದರಿ ಸೃಷ್ಟಿಯನು ....ಎಂಬ ಗೀತೆಯನ್ನು ಜೇಸುದಾಸ್‌ ತುಂಬಾ ಮೆಚ್ಚಿಕೊಂಡರಂತೆ, ಗಾನ ಬ್ರಹ್ಮರಾದ ಜೇಸುದಾಸ್‌ ಕಲ್ಯಾಣ್‌ರನ್ನು ಮನತುಂಬಿ ಅಭಿನಂದಿಸಿದರಂತೆ.

ಅಂದಹಾಗೆ ಯಾರೇ ನೀನು ಚೆಲುವೆ ಚಿತ್ರದ ಚಕ್ಕೋತ... ಚಕ್ಕೋತ... ಗೀತೆಯ ಖ್ಯಾತಿಯ ರಕ್ಷಾ ಉಸಿರೇ ಚಿತ್ರದ ಗೀತೆಯಾಂದರಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಕೇರಳದ ಸುಂದರ ತಾಣಗಳಲ್ಲಿ ಚಿತ್ರದ ಹಾಡುಗಳ ಚಿತ್ರೀಕರಣ ನಡೆದಿದೆ. ಎ.ಎಕ್ಸ್‌. ಪ್ರಭು ನಿರ್ದೇಶನದಂತೆ ರಮೇಶ್‌ ಬಾಬು ತಮ್ಮ ಕ್ಯಾಮರಾದಲ್ಲಿ ಈ ಸುಂದರ ತಾಣಗಳನ್ನು ಸೆರೆಹಿಡಿದಿದ್ದಾರೆ. ತಾರಾಗಣದಲ್ಲಿ ರವಿಚಂದ್ರನ್‌, ರಕ್ಷಾ, ರಚನಾ, ಪ್ರಕಾಶ್‌ ರೈ, ಸಾಧು ಕೋಕಿಲಾ, ದೊಡ್ಡಣ್ಣ, ಜ್ಯೋತಿ, ಶೋಭರಾಜ್‌, ಮಧುರಾ ಇದ್ದಾರೆ. ಸಂಭಾಷಣೆ ನಂಜುಂಡರದು.

English summary
shooting round up of kannada film usire

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada