ರಕ್ಷಿತಾ ಪ್ರೇಮ್ ಬಗ್ಗೆ ರವಿಚಂದ್ರನ್ ಅಭಿಮಾನಿಗಳು ಕೆಂಡಾಮಂಡಲ.!
Recommended Video

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಚಿತ್ರದ ಬಗ್ಗೆ ಹೊಗಳುವವರಿಗಿಂತ ತೆಗಳುವವರ ಸಂಖ್ಯೆಯೇ ಜಾಸ್ತಿ ಇದೆ. ಪ್ರೇಮ್ ನಿರ್ದೇಶನದ 'ದಿ ವಿಲನ್' ಕುರಿತು ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಬ್ಬರು ಸೂಪರ್ ಸ್ಟಾರ್ ಗಳನ್ನ ಪ್ರೇಮ್ ಸರಿಯಾಗಿ ಬಳಸಿಕೊಂಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೇ, 'ದಿ ವಿಲನ್' ಚಿತ್ರದಲ್ಲಿ ಕಥೆಯೇ ಇಲ್ಲ. ಸುಮ್ಮನೆ ಸನ್ನಿವೇಶಗಳನ್ನು ಪೋಣಿಸಿಕೊಂಡು ಹೋಗಲಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
'ದಿ ವಿಲನ್' ಚಿತ್ರದ ಬಗ್ಗೆ ಗೇಲಿ, ಟೀಕೆ ಮಾಡಿದವರಿಗೆ ನಿನ್ನೆ ರಕ್ಷಿತಾ ಪ್ರೇಮ್ ಫೇಸ್ ಬುಕ್ ಅಕೌಂಟ್ ನಿಂದ ಒಂದು ಪತ್ರ ಪೋಸ್ಟ್ ಆಗಿತ್ತು. ಆ ಪತ್ರವನ್ನ ರಕ್ಷಿತಾ ಪ್ರೇಮ್ ಬರೆದಿಲ್ಲ. ಆದರೂ, ಅದು ರಕ್ಷಿತಾ ಪ್ರೇಮ್ ಅಕೌಂಟ್ ನಿಂದ ಪಬ್ಲಿಶ್ ಆಗಿರುವ ಕಾರಣ ಕ್ರೇಜಿ ಸ್ಟಾರ್ ರವಿಚಂದ್ರನ್ ಫ್ಯಾನ್ಸ್ ಆಕ್ರೋಶಗೊಂಡಿದ್ದಾರೆ.
ಪತ್ರದಲ್ಲಿ 'ಪ್ರೇಮಲೋಕ'ದ ಕಥೆಯ ಬಗ್ಗೆ ಉಲ್ಲೇಖ ಮಾಡಲಾಗಿದೆ. ಹೀಗಾಗಿ, ರಕ್ಷಿತಾ ಪ್ರೇಮ್ ವಿರುದ್ಧ ರವಿಚಂದ್ರನ್ ಅಭಿಮಾನಿಗಳು ಸಿಡಿಮಿಡಿಗೊಂಡಿದ್ದಾರೆ. ಮುಂದೆ ಓದಿರಿ...
ಪತ್ರದಲ್ಲಿ ಇರುವುದೇನು.?
''#ರವಿಚಂದ್ರನ್ ರವರಿಗೆ ಶ್ರೀಮಂತಿಕೆ, ತಂದೆ ವೀರಾಸ್ವಾಮಿ ಜೊತೆಗೆ ಸರಸ್ವತಿ ಪುತ್ರರಾದ ನಾದಬ್ರಹ್ಮ ಹಂಸಲೇಖರಿದ್ದರು. ಹಳೆಯ 'ಪ್ರೇಮಲೋಕ' ಸಿನಿಮಾ ಇತ್ತೀಚಿನ 'ಟಗರು' ಸಿನಿಮಾದಲ್ಲೂ ಕಥೆ ಇರಲಿಲ್ಲ. ಜನ ನೋಡಲಿಲ್ವಾ, 25 ವಾರ ಓಡಲಿಲ್ಲವಾ. ಕಥೆಯಿಲ್ಲದೆ ಓಡಿರೋ ನೂರಾರು ಸಿನಿಮಾ ಉದಾಹರಣೆ ಇಲ್ವಾ'' ಎಂದು ರಕ್ಷಿತಾ ಪ್ರೇಮ್ ಫೇಸ್ ಬುಕ್ ಅಕೌಂಟ್ ನಿಂದ ಪೋಸ್ಟ್ ಆಗಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಗರಂ ಆದ ವಿ.ರವಿಚಂದ್ರನ್ ಫ್ಯಾನ್ಸ್
''ಪ್ರೇಮಲೋಕದ ಸಿನಿಮಾ ಬಗ್ಗೆ ಮಾತನಾಡಲು ಯೋಗ್ಯತೆ ಇರಬೇಕು. ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿದ ಸಿನಿಮಾ ಪ್ರೇಮಲೋಕ. ಪ್ರೇಮಲೋಕ ಸಿನಿಮಾದ ಕಥೆ ಅರ್ಥವಾಗದಿದ್ದರೆ ಮತ್ತೊಮ್ಮೆ ನೋಡಿ ತಿಳಿದುಕೊಳ್ಳಿ. ಆದರೆ ಪ್ರೇಮಲೋಕದಲ್ಲಿ ಕಥೆ ಇಲ್ಲವೆಂದು ಹೇಳಬೇಡಿ. ಒಂದು ವರ್ಷ ಹೂಡಿದ ದಾಖಲೆ ಹಾಗೂ ಭಾರತೀಯ ಚಿತ್ರರಂಗ ಕನ್ನಡದ ಸಿನಿಮಾಗಳ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅದು ನಮ್ಮ ಪ್ರೇಮಲೋಕ'' ಎಂದು ವಿ.ರವಿಚಂದ್ರನ್ ಫ್ಯಾನ್ಸ್ ಫೇಸ್ ಬುಕ್ ನಲ್ಲಿ ರಕ್ಷಿತಾ ಪ್ರೇಮ್ ಗೆ ತಿರುಗೇಟು ಕೊಟ್ಟಿದ್ದಾರೆ.
ಯಾವುದನ್ನೂ ಹೋಲಿಸಬೇಡಿ.!
''ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡುವ ಚಿತ್ರಗಳು ತೀರಾ ಅಪರೂಪ. ರವಿ ಸರ್ ಚಿತ್ರರಂಗದ ಶೋ ಮ್ಯಾನ್. ಪ್ರೇಮಲೋಕದಂತಹ ಬ್ಲಾಕ್ ಬಸ್ಟರ್ ಚಿತ್ರವನ್ನ ಅವರು ಕೊಟ್ಟಿದ್ದಾರೆ. ಈ ಚಿತ್ರವನ್ನ ಬೇರೆ ಯಾವ ಚಿತ್ರಕ್ಕೂ ಹೋಲಿಸಬೇಡಿ'' ಎಂದಿದ್ದಾರೆ ರವಿಚಂದ್ರನ್ ಫ್ಯಾನ್ಸ್
ಈ ತರಹ ಪ್ರಚಾರ ಬೇಡ.!
''ಸಿನಿಮಾ ಪ್ರಚಾರಕ್ಕೆ ಇನ್ನೊಬ್ಬರ ಚಿತ್ರದ ಬಗ್ಗೆ ಮಾತನಾಡುವುದು ತಪ್ಪು. ನಿಮ್ಮ ನಿಮ್ಮ ಸಿನಿಮಾಗಳ ಬಗ್ಗೆ ಮಾತ್ರ ಗಮನ ಸೆಳೆಯುವ ಕೆಲಸ ಮಾಡಿ'' ಎಂದು ರಕ್ಷಿತಾ ಪ್ರೇಮ್ ಗೆ ರವಿಚಂದ್ರನ್ ಫ್ಯಾನ್ಸ್ ಸಲಹೆ ಕೊಟ್ಟಿದ್ದಾರೆ.


Click it and Unblock the Notifications











