»   » ರವಿಚಂದ್ರನ್‌ ಅಭಿಮಾನಿಗಳ ಸಂಘದಿಂದ ವಜ್ರಮುನಿ ಅವರಿಗೆ ಸನ್ಮಾನ

ರವಿಚಂದ್ರನ್‌ ಅಭಿಮಾನಿಗಳ ಸಂಘದಿಂದ ವಜ್ರಮುನಿ ಅವರಿಗೆ ಸನ್ಮಾನ

Posted By: Staff
Subscribe to Filmibeat Kannada

ಬೆಂಗಳೂರು : ಅಖಿಲ ಕರ್ನಾಟಕ ರವಿಚಂದ್ರನ್‌ ಅಭಿಮಾನಿಗಳ ಸಂಘವು ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕ ನಟಭಯಂಕರ ವಜ್ರಮುನಿ ಅವರಿಗೆ 2002ನೇ ಸಾಲಿನ ಶ್ರೀಗಂಧದ ಪ್ರಶಸ್ತಿ ನೀಡಿ ಸನ್ಮಾನಿಸಿತು. ಅನಾರೋಗ್ಯ ಪೀಡಿತರಾಗಿರುವ ವಜ್ರಮುನಿ ಅವರ ವಜ್ರಗಿರಿ ಎಸ್ಟೇಟ್‌ಗೆ ತೆರಳಿದ ಸಂಘದ ಪದಾಧಿಕಾರಿಗಳು ಬೃಹತ್‌ ಪ್ರಶಸ್ತಿ ಫಲಕನೀಡಿ, ಶಾಲು ಹೊದಿಸಿ, ಹೂ ಮಾಲೆ ಹಾಕಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಜ್ರಮುನಿ ಅಭಿಮಾನಿ ಸಂಘಗಳಿಂದಲೇ ಚಿತ್ರರಂಗ ಬೆಳೆಯಲು ಸಾಧ್ಯ. ಯಾವುದೇ ಅಭಿಮಾನಿ ಸಂಘಗಳು ಮತ್ತಾವುದೇ ಕಲಾವಿದನನ್ನು ಕೀಳಾಗಿ ಕಾಣಬಾರದು ಎಂದು ಹೇಳಿದರು. ನನಗೆ ಇನ್ನೂ ನಟನೆಯ ಗೀಳು ಹೋಗಿಲ್ಲ. ಆದರೆ ನಟಿಸಲು ಆರೋಗ್ಯವಿಲ್ಲ ಎಂದು ನೊಂದು ನುಡಿದರು.

ನಾನೇನು ಸಿನಿಮಾದಲ್ಲಿ ನಟಿಸಲೆಂದು ಬಂದವನಲ್ಲ. ರಂಗಕಲಾವಿದರಾಗಿದ್ದ ತಮ್ಮನ್ನು ಪುಟ್ಟಣ್ಣ ಕಣಗಾಲರು ಚಿತ್ರನಟನನ್ನಾಗಿ ಮಾಡಿದರು ಎಂದ ವಜ್ರಮುನಿ, ಹಿಂದೆ ಚಿತ್ರನಟರಿಗೆ ಹೆಚ್ಚಿನ ಅವಕಾಶ ಇರಲಿಲ್ಲ. ಇದು ವಿಫುಲ ಅವಕಾಶವಿದೆ. ಟೀವಿ ಹಾವಳಿಯ ನಡುವೆಯೂ ಚಿತ್ರರಂಗಕ್ಕೆ ತೊಂದರೆ ಇಲ್ಲ ಎಂದರು. ತಮ್ಮನ್ನು ಪೋಷಿಸಿದ ಕನ್ನಡದ ಕಲಾಭಿಮಾನಿಗಳೆಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.

ವಜ್ರಮುನಿ ಅವರ ಬಗ್ಗೆ : ವಜ್ರಮುನಿ ಯಾರಿಗೆ ಗೊತ್ತಿಲ್ಲ ಹೇಳಿ, ತಮ್ಮ ಕ್ರೌರ್ಯಾಭಿನಯದಿಂದಲೇ ಎಲ್ಲರ ಗಮನ ಸೆಳೆದ ಅವರು, ಚಿತ್ರವೊಂದರಲ್ಲಿ ನಾಯಕನಟರಾಗಿಯೂ ಅಭಿನಯಿಸಿದ್ದರು. ಗಂಡಬೇರುಂಢ ಮೊದಲಾದ ಕನ್ನಡ ಚಿತ್ರಗಳನ್ನು ನಿರ್ಮಿಸಿ ಕೈಸುಟ್ಟುಕೊಂಡರು.

ಬಹುತೇಕ ಖಳನಟರಾಗಿಯೇ ನಟಿಸಿದ ವಜ್ರಮುನಿ, ಭಕ್ತಕುಂಬಾರ, ಭರ್ಜರಿಭೇಟೆ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಭವ್ಯ ನಾಯಕಿಯಾಗಿದ್ದ ಕೊಲ್ಲೂರು ಮೂಕಾಂಬಿಕೆ ಚಿತ್ರದಲ್ಲಿ ನಾಯಕ ನಟರಾಗಿಯೂ ಅವರು ಅಭಿನಯಿಸಿದರು.

ತಮ್ಮ ಗಡುಸು ಧ್ವನಿ ಹಾಗೂ ಗಂಟಿಕ್ಕುವ ಮುಖ ಭಾವದಿಂದ ಹಲವು ದಶಕಗಳ ಕಾಲ ಖಳನಟ ಶ್ರೇಷ್ಠರಾಗಿದ್ದ ವಜ್ರಮುನಿ, 'ಪ್ರಚಂಡ ರಾವಣ" ನಾಟಕದ ನೂರಾರು ಪ್ರದರ್ಶನ ನೀಡಿದ್ದಾರೆ.

ಸಂಪತ್ತಿಗೆ ಸವಾಲ್‌, ಪಟ್ಟಣಕ್ಕೆ ಬಂದ ಪತ್ನಿಯರು, ಸಾಕ್ಷಾತ್ಕಾರ, ಭರ್ಜರಿಭೇಟೆ, ಸ್ವಾತಿ, ಭಕ್ತಕುಂಬಾರ, ನನ್ನ ದೇವರು, ದಾರಿ ತಪ್ಪಿದ ಮಗ, ನಾನೊಬ್ಬ ಕಳ್ಳ, ಸಾಂಗ್ಲಿಯಾನ, ಸಾಹಸಸಿಂಹ ಮೊದಲಾದ ನೂರಾರು ಚಿತ್ರಗಳಲ್ಲಿ ವಜ್ರಮುನಿ ನಟಿದ್ದಾರೆ.(ಇನ್‌ಫೋ ವಾರ್ತೆ)

English summary
Kannada senior actor felicitated with Srigandha award
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada