ಕಟ್ಟಡಗಳಿಗೆ ಬಣ್ಣ ಬಳಿಯುತ್ತಿದ್ದ ಹುಡುಗ ನಾಯಕನಾದ !
ಈ ನಾಯಕನ ಹೆಸರು ಸಾಕಷ್ಟು ಜನರಿಗೆ ಗೊತ್ತಿಲ್ಲದೆ ಇದ್ದರೂ ಈತನ ಮುಖ ಪರಿಚಯ ಮಾತ್ರ ಪ್ರತಿಯೊಬ್ಬರಿಗೂ ಇದ್ದೇ ಇದೆ. ಕಾರಣ ವಾರದಲ್ಲಿ ಬಿಡುಗಡೆ ಆಗುವ ಆರೇಳು ಸಿನಿಮಾದಲ್ಲಿ ಒಂದು ಚಿತ್ರದಲ್ಲಾದರೂ ಈತ ಅವಕಾಶ ಗಿಟ್ಟಿಸಿಕೊಂಡಿರುತ್ತಾನೆ.
ವಿಚಿತ್ರ ಎಂದರೆ ಹೊಸಬರ ಸಿನಿಮಾಗಳಲ್ಲಿ ನಾಯಕನಿಗಿಂತಲೂ ಇವನೇ ಅದ್ಬುತವಾಗಿ ಅಭಿನಯ ಮಾಡಿದ್ದಾನೆ ಎನ್ನುವ ಅಭಿಪ್ರಾಯವನ್ನು ಪ್ರೇಕ್ಷಕರಿಂದ ಪಡೆದುಕೊಂಡಿರುವಂತ ಕಲಾವಿದ. ಸಿನಿಮಾ ನಾಯಕ ಆಗಬೇಕು ಎನ್ನುವ ಏಕೈಕ ಆಸೆಯನ್ನು ಹೊತ್ತು ತೀರ್ಥಹಳ್ಳಿಯ ಕುಗ್ರಾಮವೊಂದರಿಂದ ಬೆಂಗಳೂರಿನ ದಾರಿ ಹಿಡಿದ ನಟ ವರ್ಧನ್.
ಅಭಿನಯಿಸಿದ ಸಿನಿಮಾಗಳ ಪಟ್ಟಿ ಸಾಕಷ್ಟಿದೆ. ಅದೇ ರೀತಿ ಅನುಭವಿಸಿರುವ ಕಷ್ಟಗಳು ಮತ್ತು ಬದುಕು ತೋರಿಸಿದ ಮತ್ತೊಂದು ಪ್ರಪಂಚದ ಪರಿಚಯವೂ ಚೆನ್ನಾಗಿದೆ. ಸಾವಿರಾರು ಕಷ್ಟಗಳ ಮಧ್ಯೆ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಮುಂದುವರೆದ ಕಲಾವಿದ ಈಗ ನಾಯಕನಾಗಿ ಚಿತ್ರರಂಗದಲ್ಲಿ ಬಡ್ತಿ ಪಡೆಯುತ್ತಿದ್ದಾರೆ. ಸಿಮೆಂಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ನಾಯಕನಾದ ಕಥೆ ಇಲ್ಲಿದೆ ಮುಂದೆ ಓದಿ

ಹಳ್ಳಿ ಹುಡುಗ ನಾಯಕನಾದ ಕಥೆ
ವರ್ಧನ್. 'ಚೆಲುವಿನ ಚಿತ್ತಾರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕಲಾವಿದ. ತೀರ್ಥಹಳ್ಳಿಯ ಬಿದರಳ್ಳಿ ಎಂಬ ಗ್ರಾಮದ ರಂಗಪ್ಪ ಮತ್ತು ಶಾರದಮ್ಮ ದಂಪತಿಯ ಮೂವರು ಗಂಡು ಮಕ್ಕಳಲ್ಲಿ ವರ್ಧನ್ ಕೂಡ ಒಬ್ಬರು. ಬಡತನವೇ ಓದಿಗೆ ಅಡ್ಡವಾದಾಗ ಹೀರೋ ಆಗಬೇಕೆಂದು ಕನಸು ಕಟ್ಟಿದ್ದ ವರ್ಧನ್ ಯಾರಿಗೂ ತಿಳಿಸದೇ ಊರು ಬಿಟ್ಟು ಬಂದರು.

ಸಿನಿಮಾ ಪ್ರೀತಿ ಕಲಿಸಿದ ಜೀವನವೇ ಬೇರೆ
ಆರಂಭದಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡಿದ ವರ್ಧನ್ ಬೆಂಗಳೂರಿನಲ್ಲಿ ಊರು ಬಿಟ್ಟು ಬಂದವರಿಗೆ ನೆಲಯಾಗುವ ಎಲ್ಲಾ ಕೆಲಸಗಳನ್ನೂ ಮಾಡಿದ್ದಾರೆ.
ಬಾಡಿಗೆ ಮನೆಯ ಸಾಮಾನುಗಳನ್ನು ಶಿಫ್ಟ್ ಮಾಡೋ ಕೆಲಸ, ಕಟ್ಟಡಗಳಿಗೆ ಪೇಯಿಂಟ್ ಮಾಡುವುದು. ಹೀಗೆ ಸಾಕಷ್ಟು ಕೆಲಸಗಳು ವರ್ಧನ್ ಅವರಿಗೆ ಬದುಕಿನ ಮತ್ತೊಂದು ಮುಖವನ್ನು ತೋರಿಸಿಕೊಟ್ಟಿದೆ.

ಐದು ವರ್ಷ ಮನೆಯ ಸಂಪರ್ಕವಿಲ್ಲದೆ ಬೆಳೆದ
ಊರು ಬಿಟ್ಟು ಬೆಂಗಳೂರಿಗೆ ಬಂದ ವರ್ಧನ್ ಸುಮಾರ್ ಐದು ವರ್ಷಗಳ ಕಾಲ ಮನೆಯವರ ಸಂಪರ್ಕವನ್ನೇ ಬಿಟ್ಟಿಬಿಟ್ಟಿದ್ದರು. ಮನೆಯವರಿಗೆ ಎಲ್ಲಿದ್ದೀನಿ ಅಂತನೂ ಸೂಚನೆ ನೀಡಿರಲಿಲ್ಲ. ಅಷ್ಟರಲ್ಲಿ ಆಗಲೇ ವರ್ಧನ್ ಬೆಂಗಳೂರಿನಲ್ಲಿ ಸಿಮೆಂಟ್ ಅಂಗಡಿಯ ಲಾರಿ ಕ್ಲೀನರ್ ಆಗಿ ಕೆಲಸ ಆರಂಭಿಸಿದ್ದರು.

ತಮ್ಮನಿಗಾಗಿ ಪ್ರತಿ ಸಿನಿಮಾ ನೋಡಿದ ಅಣ್ಣ
ವರ್ಧನ್ ಸಿನಿಮಾ ನಾಯಕನಾಗಬೇಕು ಎನ್ನುವ ಆಸೆಯನ್ನು ಹೊಂದಿದ್ದ ಎನ್ನುವುದು ಅವರ ಅಣ್ಣನಿಗೆ ತಿಳಿದಿದ್ದು. ಮಾಗಡಿಯ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ , ತಮ್ಮನನ್ನು ಹುಡುಕುವ ಸಲುವಾಗಿ ಪ್ರತಿ ಶುಕ್ರವಾರ ಬಿಡುಗಡೆ ಆಗುತ್ತಿದ್ದ ಸಿನಿಮಾವನ್ನು ತಪ್ಪದೇ ನೋಡುತ್ತಿದ್ದರಂತೆ.

ಹಣೆಬರಹ ಬದಲಾಯಿಸಿದ 'ಉಗ್ರಂ' ಸಿನಿಮಾ
ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು ಸಿನಿಮಾದಲ್ಲಿ ಅಭಿನಯಿಸುವ ಅವಕಾಶಗಳನ್ನು ಪಡೆದುಕೊಂಡ ವರ್ಧನ್ ಅವರಿಗೆ ಪ್ರಖ್ಯಾತಿ ತಂದುಕೊಟ್ಟ ಸಿನಿಮಾ ಶ್ರೀಮುರಳಿ ಅಭಿನಯದ 'ಉಗ್ರಂ'. ನಂತರ ವರ್ಧನ್ ಅಭಿನಯದ Rambo2, ವಾಸು ನಾನ್ ಪಕ್ಕಾ ಕಮರ್ಷಿಯಲ್ ಹೆಸರು ತಂದು ಕೊಟ್ಟ ಸಿನಿಮಾ.

ಪ್ರಜ್ವಲ್ ಚಿತ್ರಗಳಲ್ಲಿ ಹೆಚ್ಚು ಅಭಿನಯ
ವರ್ಧನ್ ಇಲ್ಲಿಯ ವರೆಗೂ ಪಡೆದುಕೊಂಡ ಅವಕಾಶವೆಲ್ಲವೂ ಸಣ್ಣ ಪುಟ್ಟವೆ. ಆದರೆ ಸಿಕ್ಕ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿರುವ ವರ್ಧನ್ ಅತೀ ಹೆಚ್ಚು ಅಭಿನಯ ಮಾಡಿದ್ದು ಪ್ರಜ್ವಲ್ ದೇವರಾಜ್ ಸಿನಿಮಾಗಳಲ್ಲಿ.

ನಾಯಕನಾಗಿ ಪ್ರೇಕ್ಷಕರ ಮುಂದೆ ವರ್ಧನ್
ವರ್ಧನ್ ಕನಸು ನನಸಾಗುವ ಸಮಯ ಬಂದಾಗಿದೆ. ವರ್ಧನ್ ಹೊಸ ಚಿತ್ರವೊಂದರಲ್ಲಿ ನಾಯಕನಾಗುತ್ತಿದ್ದಾರೆ. ಇಂಥದ್ದೆ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಬೇಕು ಎಂದುಕೊಂಡಿದ್ದ ವರ್ಧನ್ ಅದೇ ರೀತಿಯ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಪ್ರಕಾಶ್ ಹೆಬ್ಬಾಳ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಚಿತ್ರರಂಗದ ಬಿಗ್ ಸ್ಟಾರ್ ಒಬ್ಬರು ಸಿನಿಮಾದ ಟೈಟಲ್ ಲಾಂಚ್ ಮಾಡಲಿದ್ದಾರೆ. ಈ ಮೂಲಕ ವರ್ಧನ್ ಕಂಡ ಕನಸು ನನಸಾಗುತ್ತಿದೆ.


Click it and Unblock the Notifications











