ಹಿಂದಿ ಹೇರಿಕೆ ವಿರೋಧಿಸಿ ದ್ವಿಭಾಷಾನೀತಿ ಬೆಂಬಲಕ್ಕೆ ನಿಂತ ವಸಿಷ್ಠ ಸಿಂಹ
ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ನೂತನ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನು ಪರಿಚಯಿಸಿದೆ. ಇದಕ್ಕೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿದೆ. ವಿಶೇಷವಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರಕ್ಕೆ ವಿರೋಧವಿದ್ದು, ದ್ವಿಭಾಷಾ ನೀತಿ ಜಾರಿ ತರಲು ಅಭಿಯಾನ ಶುರುವಾಗಿದೆ.
ಕರ್ನಾಟಕದಲ್ಲಿ ದ್ವಿಭಾಷಾ ನೀತಿಯನ್ನು ಜಾರಿ ತರುವಂತೆ ಕನ್ನಡಪರ ಬೆಂಬಲಿಗರು ಟ್ವಿಟ್ಟರ್‌ನಲ್ಲಿ ಅಭಿಯಾನ ಆರಂಭಿಸಿದ್ದರು. ಬುಧವಾರ #WeWantTwolanguagepolicy ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದ್ದು ಅನೇಕರು ಬೆಂಬಲ ಸೂಚಿಸಿದ್ದರು.
ದ್ವಿಭಾಷಾ ನೀತಿ ಜಾರಿಗೆ ಕನ್ನಡ ಚಿತ್ರರಂಗದ ಕೆಲವು ನಟರು ಬೆಂಬಲ ಘೋಷಿಸಿದ್ದಾರೆ. ರಾಜಕಾರಣಿ ಹಾಗೂ ನಟ ನಿಖಿಲ್ ಕುಮಾರ್ ಟ್ವೀಟ್ ಮಾಡಿ ತ್ರಿಭಾಷಾ ನೀತಿ ಖಂಡಿಸಿದ್ದರು. ನಿಖಿಲ್ ಬಳಿಕ ಈಗ ವಸಿಷ್ಠ ಸಿಂಹ ಸಹ ದ್ವಿಭಾಷಾ ನೀತಿಗೆ ಆಗ್ರಹಿಸಿದ್ದಾರೆ. ಮುಂದೆ ಓದಿ.....

ತ್ರಿಭಾಷಾನೀತಿ ಹೇರಣೆಯ ವಿರುದ್ಧ ಕೈಜೋಡಿಸೋಣ
''ನೆರೆಯ ತಮಿಳುನಾಡು ಹಾಗೂ ಉತ್ತರದ ಕೆಲ ರಾಜ್ಯಗಳಂತೆ ಕರ್ನಾಟಕದಲ್ಲೂ #ದ್ವಿಭಾಷಾನೀತಿ ಜಾರಿಗೆ ಬರಬೇಕು. ಇತರೆ (optional) ಭಾಷೆಗಳನ್ನು ಆಯ್ಕೆ ಮಾಡುವ ಅವಕಾಶ ಕಲಿಯುವವರದ್ದಾಗಿರಬೇಕು!! ಮೂರನೇ ಭಾಷೆಯ ಹೆಸರಿನಲ್ಲಿ ಯಾವ ಭಾಷೆಯನ್ನೂ ಹೇರುವ ಪ್ರಯತ್ನ ನಡೆಯಬಾರದು.. ತ್ರಿಭಾಷಾನೀತಿ ಹೇರಣೆಯ ವಿರುದ್ಧ ಕೈಜೋಡಿಸೋಣ' ಎಂದು ಕರೆ ನೀಡಿದ್ದಾರೆ.

ಹಿಂದಿ ಹೇರಿಕೆಯ ಮಹಾ ಹುನ್ನಾರ
'ಹಲವು ದಶಕಗಳಿಂದ ಕರ್ನಾಟಕದ ಪಠ್ಯಕ್ರಮದಲ್ಲಿ ಹಿಂದಿ ವಿಷಯವನ್ನು ಕಡ್ಡಾಯವಾಗಿ ಕಲಿಯಲೇಬೇಕೆನ್ನುವ ನಿಯಮವಿದೆ. ಒಂದು ವಿಷಯವಾಗಿ ಕಡ್ಡಾಯವಾಗಿ ಹಿಂದಿಯನ್ನು ಕಲಿಯಲೇಬೇಕೆನ್ನುವ ನಿಯಮ ಹಿಂದಿ ಹೇರಿಕೆಯಲ್ಲದೆ ಮತ್ತೇನು ? ಕರ್ನಾಟಕ ಪಠ್ಯದಲ್ಲಿ ಹಿಂದಿ ಸೇರಿಸಿರುವುದು ಹಿಂದಿ ಹೇರಿಕೆಯ ಮಹಾ ಹುನ್ನಾರ' ಎಂದು ನಿಖಿಲ್ ಕುಮಾರ್ ಟೀಕಿಸಿದ್ದಾರೆ.

ಸಂಪರ್ಕ ಭಾಷೆಯಾಗಿ ಹಿಂದಿಯ ಅವಶ್ಯಕತೆಯಿಲ್ಲ
ಪಠ್ಯಕ್ರಮದಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಿರುವುದು ಶಾಲಾ ಮಕ್ಕಳಿಗೆ ಅನಗತ್ಯ ಹೊರೆಯಾಗಿದೆ. ಹಿಂದಿ ಕಲಿಕೆಗೆ ಮೀಸಲಿಡುವ ಸಮಯವನ್ನು ಜೀವನ ಕೌಶಲ್ಯಗಳನ್ನು ಕಲಿಯಲು ಉಪಯೋಗಿಸಿಕೊಳ್ಳಬಹುದು. ಇಂಗ್ಲಿಷ್ ಅನ್ನು ಇಡೀ ಜಗತ್ತು ಸಂಪರ್ಕ ಭಾಷೆಯಾಗಿ ಒಪ್ಪಿರುವಾಗ, ಮತ್ತೊಂದು ಸಂಪರ್ಕ ಭಾಷೆಯಾಗಿ ಹಿಂದಿಯ ಅವಶ್ಯಕತೆಯಿಲ್ಲ' ಎಂದು ನಿಖಿಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾನು ನಿಮ್ಮ ಜೊತೆಯಲ್ಲಿ ನಿಲ್ಲುತ್ತೇನೆ
'ಈ ನೀತಿಯನ್ನು ಕನ್ನಡಿಗರು ಇಷ್ಟು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವುದೇ ದುರ್ದೈವ. ಹಿಂದಿ ಹೇರಿಕೆಯ ವಿರುದ್ಧ ಜ್ವಾಲೆ ಎದ್ದಿರುವ ಇದೇ ಸಂದರ್ಭದಲ್ಲಿ ಈ ಹುನ್ನಾರ ಕೊನೆಗಾಣಲಿ ಎಂದು ಆಶಿಸುತ್ತೇನೆ. ಈ ನಮ್ಮ ಹೋರಾಟಕ್ಕೆ ಯಶಸ್ಸು ಸಿಗುವವರೆಗೂ ನಾನು ನಿಮ್ಮ ಜೊತೆಯಲ್ಲಿ ನಿಲ್ಲುತ್ತೇನೆ. #WeWantTwoLanguagePolicy' ಎಂದು ಅಭಿಯಾನಕ್ಕೆ ಕೈಜೋಡಿಸಿದ್ದಾರೆ.


Click it and Unblock the Notifications











