twitter
    For Quick Alerts
    ALLOW NOTIFICATIONS  
    For Daily Alerts

    ಅಭಿಮಾನಿಗಳಿಗೆ ಸಹಾಯ ಮಾಡೋಕಾಗುತ್ತಾ ಡಿಯರ್ ಸ್ಟಾರ್ಸ್; ಪತ್ರ ವೈರಲ್

    |

    ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆ ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಚಿಕಿತ್ಸೆ ಸಿಗದೆ ಸಾವನೊಪ್ಪುತ್ತಿದ್ದಾರೆ. ಇಂಥ ಕಷ್ಟದ ಸಮಯದಲ್ಲಿ ಸ್ಟಾರ್ ನಟರು ಯಾಕೆ ಸಹಾಯಕ್ಕೆ ಬರಬಾರದು ಎಂದು ಅಭಿಮಾನಿಯೊಬ್ಬರು ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Recommended Video

    ಕೊರೋನಾ ಸಂಕಷ್ಟದಲ್ಲಿ ಸ್ಟಾರ್ ನಟರಿಗೆ ಬಹಿರಂಗ ಪತ್ರ ವೈರಲ್!! | Filmibeat Kannada

    ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಅವರು ಸ್ಟಾರ್ ನಟರಿಗೆ ಪತ್ರಬರೆದಿದ್ದಾರೆ. ಇಂಥ ಕಷ್ಟದ ಸಮಯದಲ್ಲಾದರೂ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ್ದೀರಿ. ನಿಮ್ಮನ್ನು ಪ್ರೀತಿಸುವ ಅಭಿಮಾನಿಗಳು ಕಷ್ಟದಲ್ಲಿದ್ದಾರೆ ಅವರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ವೀರಕಪುತ್ರ ಶ್ರೀನಿವಾಸ್ ಅವರು ಬರೆದ ದೀರ್ಘವಾದ ಪತ್ರ ಇಲ್ಲಿದೆ...

    ಅಭಿಮಾನಿಗಳು ಇವತ್ತು ಕಷ್ಟದಲ್ಲಿದ್ದಾರೆ

    ಅಭಿಮಾನಿಗಳು ಇವತ್ತು ಕಷ್ಟದಲ್ಲಿದ್ದಾರೆ

    ಡಿಯರ್ ಸ್ಟಾರ್ ನಟರೇ.. ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದ ಸಾಧಕರು ನೀವು. ತಾಯಿ ಪ್ರೀತಿ ನಂತರ ಅಭಿಮಾನಿಗಳ ಪ್ರೀತಿಯೇ ಅತ್ಯಂತ ಶ್ರೇಷ್ಠವಾದದ್ದು ಎಂಬುದು ನನ್ನ ನಂಬಿಕೆ. ನೀವು ಎಂದೂ ಅವರನ್ನು ನೋಡಲ್ಲ, ನೋಡಿದ್ರೂ ಮಾತನಾಡಿಸಲ್ಲ. ಮಾತನಾಡಿಸಿದ್ರೂ ನಿಮಗೆ ಆ ವ್ಯಕ್ತಿ ಅದರಾಚೆ ನೆನಪಿರಲ್ಲ. ಆದರೂ ಆ ಅಭಿಮಾನಿ ನಿಮ್ಮನ್ನು ಅವನ ಜೀವನದ ಆರಾಧ್ಯದೈವವನ್ನಾಗಿಸಿಕೊಳ್ತಾನೆ. ಜೀವನವಿಡೀ ನಿಮ್ಮನ್ನೇ ಧ್ಯಾನಿಸುತ್ತಾನೆ! ನಿಮ್ಮ ಬಗ್ಗೆ ಎಳ್ಳಷ್ಟು ಅಪಪ್ರಚಾರವಾದ್ರೂ ಹಿಂದೆ ಮುಂದೆ ಯೋಚಿಸ್ದೆ ನಿಮ್ಮ ಪರವಾಗಿ ನಿಂತುಬಿಡ್ತಾನೆ. ನಿಮಗೆ ಕಿಂಚಿತ್ತು ತೊಂದ್ರೆಯಾದ್ರೂ ನೊಂದು ಹೋಗ್ತಾನೆ. ಅಂತಹ ಅಭಿಮಾನಿ ಇವತ್ತು ಕಷ್ಟದಲ್ಲಿದ್ದಾನೆ.

    ಅವರಿಗೆ ನೀವು ಗೊತ್ತೇ ವಿನಃ ನಿಮಗೆ ಗೊತ್ತಿಲ್ಲ

    ಅವರಿಗೆ ನೀವು ಗೊತ್ತೇ ವಿನಃ ನಿಮಗೆ ಗೊತ್ತಿಲ್ಲ

    ಸೋಂಕಿಗೆ ಒಳಗಾಗುತ್ತಿರುವ ಲಕ್ಷಾಂತರ ಜನರಲ್ಲಿ ನಿಮ್ಮ ಅಭಿಮಾನಿಗಳೂ ಇದ್ದಾರೆ. ಆದ್ರೆ ಅವರು ತಮ್ಮ ಕಷ್ಟವನ್ನು ನಿಮ್ಮ ತನಕ ತಲುಪಿಸಲಾರರು. ಏಕೆಂದರೆ ನೀವು ಅವರಿಗೆ ಗೊತ್ತೇ ವಿನಃ ಅವರು ನಿಮಗೆ ಗೊತ್ತಿಲ್ಲ. ನಿಮ್ಮ ಹುಟ್ದಬ್ಬಕ್ಕೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ನಿಮ್ಗೆ ವಿಶ್ ಮಾಡಿ ಗೊತ್ತಿದೆಯೇ ಹೊರತು ನಿಮ್ಮ ಸಂಪರ್ಕದಲ್ಲಿರೋದು ಗೊತ್ತಿಲ್ಲ.

    ಏನಾದರೂ ಮಾಡ್ಲಿಕ್ಕೆ ಆಗುತ್ತಾ ಡಿಯರ್ ಸ್ಟಾರ್ಸ್?

    ಏನಾದರೂ ಮಾಡ್ಲಿಕ್ಕೆ ಆಗುತ್ತಾ ಡಿಯರ್ ಸ್ಟಾರ್ಸ್?

    ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಪರವಾಗಿ ವರ್ಷಗಟ್ಟಲೇ ಪ್ರಚಾರ ಮಾಡೋದು, ಜಗಳ ಮಾಡೋದು ಗೊತ್ತೇ ವಿನಃ ನಿಮ್ಮಿಂದ ಏನನ್ನೂ ನಿರೀಕ್ಷಿಸಿ ಗೊತ್ತಿಲ್ಲ. ನಿಮ್ಮ ಸಿನಿಮಾ ಬಿಡುಗಡೆಯಾದಾಗ ಜಾತ್ರೆಯಂತೆ ಖರ್ಚು ಮಾಡಿ ಸಂಭ್ರಮಿಸುವುದು ಗೊತ್ತಿದೆಯೇ ವಿನಃ ಅಷ್ಟೇ ಸಲೀಸಾಗಿ ಕೊರೊನಾಗೆ ಚಿಕಿತ್ಸೆ ಪಡೆಯುವುದು ಹೇಗೆಂದು ಗೊತ್ತಿಲ್ಲ. ಅಂತಹವರಿಗಾಗಿ ಏನಾದ್ರೂ ಮಾಡ್ಲಿಕ್ಕಾಗುತ್ತಾ ಡಿಯರ್ ಸ್ಟಾರ್ಸ್?

    ಗೂಡು ಸೇರಿ ಕುಳಿತು ಬಿಡೋದು ಯಾವ ನ್ಯಾಯ?

    ಗೂಡು ಸೇರಿ ಕುಳಿತು ಬಿಡೋದು ಯಾವ ನ್ಯಾಯ?

    ಕಷ್ಟದಲ್ಲಿರುವ ಅಭಿಮಾನಿಗಳನ್ನು ಹುಡುಕುವುದು ಕಷ್ಟ ಅನ್ನೋದು ಗೊತ್ತು. ನೀವೇನಾದ್ರೂ ಸಹಾಯ ಮಾಡ್ತೀನಿ ಅಂತ ಮುಂದೆ ಬಂದ್ರೆ ಆಕಾಂಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದ್ಬಿಡ್ತಾರೆ ಅನ್ನೋದು ಗೊತ್ತು. ಆದ್ರೂ ಏನಾದ್ರೂ ಮಾಡ್ಬಹುದಾ ಈ ಸಂದರ್ಭದಲ್ಲಿ ನೋಡಿ ಪ್ಲೀಸ್. ಏಕೆಂದರೆ ಈ ಸಮಾಜ ನೀವು ಚೆನ್ನಾಗಿರಲು ಏನೆಲ್ಲಾ ಕೊಟ್ಟಿದೆ. ಅಂತಹ ಸಮಾಜ ಇಂದು ಕಷ್ಟದಲ್ಲಿರುವಾಗ Stay Home, Stay Safe ಅಂತ ಉಚಿತ ಸಲಹೆಯೊಂದನ್ನು ಕೊಟ್ಟು ನಮ್ಮಂತಹ ಸಾಮಾನ್ಯರಂತೆ ನೀವೂ ಗೂಡು ಸೇರಿ ಕೂತುಬಿಡೋದು ಯಾವ ನ್ಯಾಯ?

    ಜನರ ಜೀವಗಳನ್ನು ಕಾಪಾಡಿ

    ಜನರ ಜೀವಗಳನ್ನು ಕಾಪಾಡಿ

    ನಿಮಗೆ ಈ ಅಭಿಮಾನಿಗಳು ಮತ್ತು ಸಮಾಜ ನೀಡಿರುವ ಸ್ಥಾನಮಾನ ಸಾಮಾನ್ಯದಲ್ಲವಲ್ಲ. ಓಹ್ ಹೌದಾ. ಹಾಗಾದ್ರೆ ಒಂದಷ್ಟು ಕುಟುಂಬಗಳಿಗೆ ಅಕ್ಕಿ ಕೊಡ್ತೀವಿ, ಒಂದಷ್ಟು ಹೊಟ್ಟೆಗಳಿಗೆ ಅನ್ನ ನೀಡ್ತೀವಿ, ಮಾಸ್ಕ್ ವಿತರಿಸ್ತೀವಿ. ಒಂದಷ್ಟು ಜನರನ್ನು ಊರುಗಳಿಗೆ ತಲುಪಿಸೋಕೆ ಗಾಡಿ ಕಳಿಸ್ತೀವಿ. ಅನ್ನೋ ಸಪ್ಪೆ ನಿರ್ಧಾರಗಳಿಗೆ ಬರಬೇಡಿ ಪ್ಲೀಸ್. ಇಲ್ಲಿ ಜನರ ಜೀವಗಳು ಹೋಗ್ತಿವೆ. ನಿಜಕ್ಕೂ ಏನಾದ್ರೂ ಮಾಡುವುದಿದ್ದರೆ ನಿಮ್ಮ ಸಂಪರ್ಕ, ಪ್ರಭಾವ ಬಳಸಿ ಜನರ ಜೀವಗಳನ್ನು ಕಾಪಾಡಿ.

    ಕೋವಿಡ್ ಸೆಂಟರ್ ತೆರೆಯಲು ಜಾಗ ನೀಡಿ

    ಕೋವಿಡ್ ಸೆಂಟರ್ ತೆರೆಯಲು ಜಾಗ ನೀಡಿ

    ನಿಮ್ಮ ತೋಟದ ಮನೆಯಲ್ಲೋ, ನಿಮ್ಮ ಹೋಟೆಲ್ ಗಳಲ್ಲೋ, ಅಥವಾ ನಿಮ್ಗೆ ಗೊತ್ತಿರುವ ಕಲ್ಯಾಣ ಮಂಟಪಗಳಲ್ಲೋ ಒಂದು ನೂರಿನ್ನೂರು ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆದಿಡಿ. ಎಷ್ಟೋ ಜನ ಸಣ್ಣ ಸಣ್ಣ ರೂಮುಗಳಲ್ಲಿ, ಸಿಂಗಲ್ ಬೆಡ್ ರೂಮ್ ಇರುವ ಮನೆಗಳಲ್ಲಿ ವಾಸಿಸ್ತಿದ್ದಾರೆ. ದುಡಿಯಲು ಹೊರಗಡೆ ಹೋಗುವ ಒಬ್ಬರಿಗೆ ಕೊರೊನಾ ಬಂದ್ರೆ ಮನೆಯವರೆಲ್ಲರೂ ಕೊರೊನಾ ಸೋಂಕಿಗೆ ಒಳಗಾಗಬೇಕಾದ ಪರಿಸ್ಥಿತಿ ಇದೆ. ಅಂತಹವರಿಗೆ ನಿಮ್ಮ ಕೋವಿಡ್ ಕೇರ್ ಸೆಂಟರ್ ಆದ್ಯತೆ ನೀಡಲಿ.

    ಸರ್ಕಾರ ಚಿಕಿತ್ಸೆ ನೀಡಲು ವಿಫಲವಾಗಿದೆ

    ಸರ್ಕಾರ ಚಿಕಿತ್ಸೆ ನೀಡಲು ವಿಫಲವಾಗಿದೆ

    ಜೊತೆಗೆ ಸರ್ಕಾರದ ಜೊತೆ ನಿರಂತರ ಸಂಪರ್ಕ ಸಾಧಿಸಿ ನಿಜಕ್ಕೂ ಅಗತ್ಯವಿರುವಂತಹವರಿಗೆ ಹಾಸಿಗೆ, ಆಕ್ಸಿಜನ್ ಗಳನ್ನು ದೊರಕಿಸಿಕೊಡಿ. ಕೊರೊನಾ ಬಂದಿದ್ದಕ್ಕೆ ಜನ ಸಾಯ್ತಿಲ್ಲ, ಸರ್ಕಾರ ಚಿಕಿತ್ಸೆ ನೀಡಲು ವಿಫಲವಾಗಿರುವ ಕಾರಣಕ್ಕೆ ಜನ ಸಾಯ್ತಿರೋದು. ಅಂತಹ ಅಸಹಾಯಕರಿಗೆ ತಮ್ಮ ಸಹಾಯಹಸ್ತ ಸಿಗಬಾರದೇಕೆ? ನಿಮ್ಮ ಮಾತನ್ನು ಅಷ್ಟು ಸಲೀಸಾಗಿ ಅಲ್ಲಗೆಳೆಯುವಂತಹ ಯಾವ ಮಂತ್ರಿಗಳೂ, ಆಸ್ಪತ್ರೆಗಳೂ ನಮ್ಮ ಕರ್ನಾಟಕದಲ್ಲಿಲ್ಲ. ಈ ನಿಟ್ಟಿನಲ್ಲಿ ಯೋಚಿಸಬಾರದೇಕೆ?

    ಸೋನು ಸೂದ್ ಮಾದರಿಯಾಗಲಿ

    ಸೋನು ಸೂದ್ ಮಾದರಿಯಾಗಲಿ

    ಕೊನೇ ಮಾತು. ಭಾರತದಲ್ಲಿ ಸುಮಾರು ಸ್ಟಾರ್ ನಟರಿದ್ದಾರೆ. ಆದ್ರೆ ಕೋವಿಡ್ ಬಂದ್ಮೇಲೆ ಜನ ರಿಯಲ್ ಸ್ಟಾರ್ ಎಂದು ಗುರುತಿಸಿದ್ದು ಮತ್ತು ಗೌರವಿಸಿದ್ದು ಸೋನು ಸೂದ್ ಎಂಬೊಬ್ಬ ಪೋಷಕನಟನನ್ನು ಮಾತ್ರ. ನಿಮ್ಮ ಅಭಿಮಾನಿಗಳಿಗೆ ನೀವು ಮಾದರಿಯಾಗಿರುವ ಹಾಗೆ, ನಿಮಗೆ ಸೋನು ಸೂದ್ ಮಾದರಿಯಾಗಲೆಂದು ಆಶಿಸುವೆ.

    English summary
    Veerakaputra Srinivasa writes letter to Stars for help fans who suffers from Corona.
    Thursday, April 22, 2021, 9:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X