"ನಾನು ಕ್ಯಾರೆಕ್ಟರ್ ಏನು ಅಂತ ಹೇಳ್ತೀನಿ, ಪ್ರವಚನ ಮಾಡೋದಿಲ್ಲ": ಪ್ರಶಾಂತ್ ನೀಲ್
ಬ್ಲಾಕ್‌ಬಸ್ಟರ್ KGF ಸಿನಿಮಾ ವಿಚಿತ್ರ ಕಾರಣಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ತೆಲುಗು ನಿರ್ದೇಶಕ ವೆಂಕಟೇಶ್ ಮಹ ಸಿನಿಮಾ ಬಗ್ಗೆ ಮಾಡಿದ ಅಪಹಾಸ್ಯ. ಅದಕ್ಕೆ ಮೂರ್ನಾಲ್ಕು ಜನ ತೆಲುಗು ನಿರ್ದೇಶಕರ ವ್ಯಂಗ್ಯ ಕುಹಕ ನಗೆ ಇಷ್ಟಕ್ಕೆಲ್ಲಾ ಕಾರಣ. KGF ಸಿನಿಮಾ ಬಗ್ಗೆ ಪ್ರಶಾಂತ್ ನೀಲ್ ಮಾಡಿದ ಕಥೆ, ಪಾತ್ರ ಪೋಷಣೆ ಬಗ್ಗೆ ತೆಲುಗು ನಿರ್ದೇಶಕನ ಕಾಮೆಂಟ್‌ಗೆ ಸಿನಿರಸಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಕೊನೆಗೂ ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ನಾನು ಹೇಳಿದ ಅರ್ಥ ಅದಲ್ಲ. ನಾನು ಈಗಲೂ ನನ್ನ ಅಭಿಪ್ರಾಯಕ್ಕೆ ಬದ್ಧವಾಗಿದ್ದೇನೆ. ಆದರೂ ನಾನು ಆ ರೀತಿ ಮಾತನಾಡಬಾರದಿತ್ತು ಎನ್ನುವ ಅರ್ಥದಲ್ಲಿ ಕ್ಷಮೆಯಾಚಿಸಿದ್ದು ಆಯಿತು. ಆದರೂ KGF ಸಿನಿಮಾ ಅಭಿಮಾನಿಗಳಿಗೆ ವೆಂಕಟೇಶ್ ಮಹಾ ಮೇಲಿನ ಅಸಮಾಧಾನ ಮಾತ್ರ ಕಮ್ಮಿ ಆಗಿಲ್ಲ. ತೆಲುಗು ಪ್ರೇಕ್ಷಕರು ಕೂಡ ವೆಂಕಟೇಶ್ ಮಹಾ ಮಾತುಗಳನ್ನು ಒಪ್ಪಲು ಸಿದ್ಧರಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಿರ್ದೇಶಕ KGF ಸಿನಿಮಾ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು.

ವೆಂಕಟೇಶ್ ಮಹಾ ಕ್ಷಮೆ ಕೇಳಿದರೂ ಕೂಡ ಅಭಿಮಾನಿಗಳು ಇನ್ನು ಟ್ರೋಲ್ ಮಾಡ್ತಿದ್ದಾರೆ. ನಿರ್ದೇಶಕ ಕೇಳಿದ ಪ್ರಶ್ನೆಗೆ ಹಿಂದೆ ಸಂದರ್ಶನದಲ್ಲಿ ಪ್ರಶಾಂತ್ ನೀಲ್‌ಗೆ ಎದುರಾಗಿತ್ತು. ಆಗಲೇ ಅದಕ್ಕೆ ಅವರು ಕ್ಲಾರಿಟಿ ನೀಡಿದ್ದರು. ಆ ವಿಡಿಯೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ನಿಮಗೆ ಈಗ ಉತ್ತರ ಸಿಕ್ಕಿರಬಹುದು ಎಂದು ವೆಂಕಟೇಶ್ ಮಹಾಗೆ ತಿರುಗೇಟು ನೀಡುತ್ತಿದ್ದಾರೆ. KGF- 2 ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಈ ಬಗ್ಗೆ ಮಾತನಾಡಿದ್ದರು.
ಒಬ್ಬ ತಾಯಿ ತನ್ನ ಮಗನಿಗೆ ಜಗತ್ತಿನಲ್ಲಿ ಇರುವ ಚಿನ್ನವನ್ನೆಲ್ಲಾ ಸಂಪಾದಿಸುವಂತೆ ಹೇಳುವುದು ಹಿಂದೆ ಅವಳು ಅನುಭವಿಸಿದ ಬಡತನಕ್ಕೆ ಕಾರಣ. ಅದಕ್ಕೆ ತನ್ನ ಮಗನಿಗೆ ನೀನು ಹೇಗೆ ಬದುಕುತ್ತಿಯೋ ನನಗೆ ಗೊತ್ತಿಲ್ಲ. ಆದರೆ ಸಾಯುವಾಗ ದೊಡ್ಡ ಶ್ರೀಮಂತನಾಗಿ ಸಾಯಬೇಕು ಎಂದು ಹೇಳುತ್ತಾಳೆ. ರಾಕಿ ಏನು ಇಲ್ಲದೇ ಸತ್ತರೆ ಆತನ ತಾಯಿಯ ಮಾತಿಗೆ ಅರ್ಥ ಇರುವುದಿಲ್ಲ ಎಂದು ಪ್ರಶಾಂತ್ ನೀಲ್ ಹೇಳಿದ್ದರು.
ಅದು ಬೇಜವಾಬ್ದಾರಿ ಸ್ಟೇಟ್‌ಮೆಂಟೇ, ಇಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ನಾನು ಕ್ಯಾರೆಕ್ಟರ್ ಬಗ್ಗೆ ಮಾತ್ರ ಹೇಳುತ್ತೇನೆ. ಪ್ರವಚನ ಮಾಡಲ್ಲ ಎಂದು ಕಂಪ್ಲೀಟ್ ಕ್ಲಾರಿಟಿ ನೀಡಿದ್ದರು. ಆತನ ತಾಯಿಯ ಉದ್ದೇಶ ತನ್ನ ಮಗ ಬಡವನಾಗಿ ಸಾಯಬಾರದು ಎಂದು ಹೇಳಬಹುದು ಎಂದಿದ್ದರು. ಕಮರ್ಷಿಯಲ್ ಸಿನಿಮಾಗಳಲ್ಲಿ ಇಂತಹ ಲಾಜಿಕ್‌ಗಳನ್ನೆಲ್ಲಾ ಹುಡುಕಲು ಸಾಧ್ಯವಿಲ್ಲ. ಹಾಗೆ ನೋಡಿದರೆ ತೆಲುಗು ಪ್ರೇಕ್ಷಕರು ಕೂಡ ಈ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಕಥೆ, ಪಾತ್ರ ಪೋಷಣೆ ಎಲ್ಲದರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. KGF ಸಿನಿಮಾ ತೆಲುಗಿನಲ್ಲೂ ಸೂಪರ್ ಹಿಟ್ ಆಗಿತ್ತು.

ಸಂದರ್ಶನದಲ್ಲಿ ನಿರ್ದೇಶಕ ವೆಂಕಟೇಶ್ ಮಹಾ ಹೇಳಿದ್ದು ಏನು ಅಂದ್ರೆ, "ಇಡೀ ಪ್ರಪಂಚದಲ್ಲಿ ಯಾವ ತಾಯಿಯಾದರೂ ಮಗ ದೊಡ್ಡವನಾದ ಮೇಲೆ ಒಳ್ಳೆಯ ಹೆಸರು ಮಾಡು, ನಾಲ್ಕು ಜನರಿಗೆ ಅನ್ನ ಹಾಕು ಎಂದು ಸಲಹೆ ನೀಡುತ್ತಾಳೆ, ಆದರೆ ಇಲ್ಲಿ ಈ ಮಹಾತಾಯಿ ದೊಡ್ಡ ಮಟ್ಟದಲ್ಲಿ ಚಿನ್ನ, ಹಣ ಸಂಪಾದಿಸು ಎಂದು ಹೇಳುತ್ತಾಳೆ. ಮಹಾತಾಯಿ ಮಾತಿನಂತೆ ಆತ ಕೆಲಸಗಾರರ ಸಹಾಯ ಪಡೆದುಕೊಂಡು ಲೋಡ್‌ಗಟ್ಟಲೆ ಚಿನ್ನವನ್ನು ಹೊರತೆಗೆದು ಆ ಜನರಿಗೆ ಮನೆಗಳನ್ನು ನೀಡಿ, ಆ ಚಿನ್ನವನ್ನೆಲ್ಲಾ ತೆಗೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿಬಿಡುತ್ತಾನೆ"
"ಎಂತಹ ಕಂತ್ರಿ ನಾಯಿ ಇರಬೇಡ ಆತ, ಇಂತಹ ಕಂತ್ರಿ ನಾಯಿಯ ಕಥೆಯನ್ನು ಸಿನಿಮಾ ಮಾಡಿದ್ದಾರೆ, ಅದನ್ನು ನೋಡಿ ನಾವು ಚಪ್ಪಾಳೆ ತಟ್ಟಿ ಗೆಲ್ಲಿಸುತ್ತೇವೆ" ಎಂದು ವೆಂಕಟೇಶ್ ಮಹಾ ಹೇಳಿದ್ದರು. ಈ ರೌಂಡ್ ಟೇಬಲ್ ಸಂದರ್ಶನದಲ್ಲಿ ಕುಳಿತಿದ್ದ ನಿರ್ದೇಶಕರಾದ ಶಿವ ನಿರ್ವಾನ, ವಿವೇಕ್ ಆತ್ರೇಯಾ, ಇಂದ್ರಗಂತ್ತಿ ಮೋಹನ್ ಕೃಷ್ಣ ಹಾಗೂ ನಂದಿನಿ ರೆಡ್ಡಿ ಎಲ್ಲರೂ ವೆಂಕಟೇಶ್ ಮಹಾ ಮಾತುಗಳನ್ನು ಕೇಳಿ ಬಿದ್ದು ಬಿದ್ದು ನಕ್ಕಿದ್ದರು.


Click it and Unblock the Notifications











