'ತಿಥಿ' ಚಿತ್ರದ ಗಡ್ಡಪ್ಪ ಖ್ಯಾತಿಯ ನಟ ಚನ್ನೇಗೌಡ್ರು ವಿಧಿವಶ
ಸೂಪರ್ ಹಿಟ್ 'ತಿಥಿ' ಚಿತ್ರದಲ್ಲಿ ನಟಿಸಿದ್ದ ನಟ ಚನ್ನೇಗೌಡ್ರು ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು(ನವೆಂಬರ್ 12) ಕೊನೆಯುಸಿರೆಳೆದಿದ್ದಾರೆ.
ಚನ್ನೇಗೌಡ ಅವರಿಗೆ ಪಾರ್ಶ್ವವಾಯು ಆಗಿ ಹಾಸಿಗೆ ಹಿಡಿದಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಕೆಮ್ಮು, ಉಬ್ಬಸ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರ ಚಿಕಿತ್ಸೆಗೆ ಆರ್ಥಿಕ ಸಮಸ್ಯೆ ಕೂಡ ಇತ್ತು.

10 ವರ್ಷಗಳ ಹಿಂದೆ ಬಂದಿದ್ದ 'ತಿಥಿ' ಸಿನಿಮಾ ದೇಶ ವಿದೇಶಗಳಲ್ಲಿ ಸದ್ದು ಮಾಡಿತ್ತು. ಹಲವು ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿತ್ತು. ಚಿತ್ರದಲ್ಲಿ ಗಡ್ಡಪ್ಪ ಪಾತ್ರದಲ್ಲಿ ಚನ್ನೇಗೌಡ ಸಹಜ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಅವರ ಅಗಲಿಕೆಗೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು 'ತಿಥಿ' ಚಿತ್ರಕ್ಕೆ ಸಿಕ್ಕಿತ್ತು. ಆ ಬಳಿಕ ಅದೇ ಶೈಲಿಯ ನಾಲ್ಕೈದು ಸಿನಿಮಾಗಳಲ್ಲಿ ಚನ್ನೇಗೌಡ ನಟಿಸಿದ್ದರು. ಸೆಂಚುರಿ ಗೌಡ ಆಗಿ ನಟಿಸಿದ್ದ ಸಿಂಗ್ರಿ ಗೌಡ ಹಾಗೂ ಅಭಿ ಪಾತ್ರದಲ್ಲಿ ಅಭಿಷೇಕ್ ಆ ಸಿನಿಮಾಗಳಲ್ಲಿ ಜೊತೆಯಾಗಿದ್ದರು. 'ತಿಥಿ' ಚಿತ್ರದಂತೆ ಆ ಚಿತ್ರಗಳು ಹೆಸರು ತಂದು ಕೊಡಲಿಲ್ಲ. ಡಬಲ್ ಮೀನಿಂಗ್ ಡೈಲಾಗ್‌ಗಳನ್ನು ಹೇಳಿಸುವ ಪ್ರಯತ್ನ ಕೂಡ ನಡೆದಿತ್ತು.
'ಏನ್ ನಿನ್ ಪ್ರಾಬ್ಲಂ?' ಎನ್ನುವುದು ಗಡ್ಡಪ್ಪನ ಫೇಮಸ್ ಡೈಲಾಗ್ ಆಗಿತ್ತು. ಮಂಡ್ಯ ನೊದೆಕೊಪ್ಪಲು ಗ್ರಾಮದಲ್ಲಿ ಚನ್ನೇಗೌಡ ನಿಧನರಾಗಿದ್ದಾರೆ. ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ. 'ತಿಥಿ' ಬಳಿಕ 'ತರ್ಲೆ ವಿಲೇಜ್', 'ಜಾನಿ ಮೇರಾ ನಾಮ್', 'ಹಳ್ಳಿ ಪಂಚಾಯಿತಿ' ಸೇರಿ ಏಳೆಂಟು ಚಿತ್ರಗಳಲ್ಲಿ ಚನ್ನೇಗೌಡ ನಟಿಸಿದ್ದರು.
ತಿಂಗಳ ಹಿಂದೆ ಕುಸಿದು ಬಿದ್ದು ಚನ್ನೇಗೌಡ ಅವರ ಸೊಂಟಕ್ಕೆ ಪೆಟ್ಟಾಗಿ, ಆಪರೇಷನ್ ಕೂಡ ಆಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಂಜೆ ಸ್ವಗ್ರಾಮ ಅಂತ್ಯಕ್ರಿಯೆ ಮಾಡುವುದಾಗಿ ಅವರ ಪುತ್ರಿ ತಿಳಿಸಿದ್ದಾರೆ.
'ತಿಥಿ' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದ ಈರೇಗೌಡ ಕೂಡ ಚೆನ್ನೇಗೌಡ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. "ಪ್ರೀತಿಯ ಮಾವ, ನನ್ನ ಬಾಲ್ಯದ ಕುತೂಹಲ, ವಿಸ್ಮಯ ಮತ್ತು ಸ್ಫೂರ್ತಿಯ ಮೂಲ ನೀವು, ನಿಮ್ಮ ಸರಳತೆ, ಸ್ವಾಭಿಮಾನ ಮತ್ತು ಯಾವ ಸಂದರ್ಭದಲ್ಲೂ ದೃತಿಗೆಡದೆ ನೀವು ಬದುಕಿದ ರೀತಿ, ನಿಮ್ಮ ಜೀವನ ನನಗೆ ಸದಾ ಮಾರ್ಗದರ್ಶನವಾಗಿದೆ. ನಿಮ್ಮೊಂದಿಗಿನ ಒಡನಾಟ ಅವಿಸ್ಮರಣೀಯ, ನಮ್ಮ ಮೊದಲ ಸಿನಿಮಾ ಪ್ರಯಾಣದಲ್ಲಿ ನಿಮ್ಮ ಅಮೂಲ್ಯ ಕೊಡುಗೆಯನ್ನು ಎಂದಿಗೂ ಮರೆಯಲಾಗದು. ನಿಮ್ಮ ಸ್ಮರಣೆ ಸದಾ ನಮ್ಮ ಹೃದಯಗಳಲ್ಲಿ ಜೀವಂತವಾಗಿರುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
"ನಾನು ಭೇಟಿಯಾದ ಅಪರೂಪದ ಆತ್ಮಗಳಲ್ಲಿ ಒಬ್ಬನ ನಷ್ಟದಿಂದ ತೀವ್ರ ದುಃಖಿತನಾಗಿದ್ದೇನೆ; ಇದು ಎಂದಿಗೂ ಬಾರದೇ ಇರಬೇಕೆಂದು ನಾನು ಬಯಸಿದ್ದೆ. ಅವರ ಕಣ್ಣುಗಳಲ್ಲಿನ ಮಿನುಗು, ಅವರ ನಗುವಿನ ಆಳ, ಅವರ ಹೆಜ್ಜೆಗಳಲ್ಲಿನ ಚೈತನ್ಯ, ಅವರ ಸಾರದ ಸೌಂದರ್ಯ; ಅವರು ನನ್ನ ಜೀವನದಲ್ಲಿ ಅಂತಹ ಮಹತ್ವದ ಮತ್ತು ಶ್ರೀಮಂತ ಪಾತ್ರವನ್ನು ವಹಿಸಿದ ವ್ಯಕ್ತಿ. ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾಗಿ ಅವರೊಂದಿಗೆ ಚಹಾ ಸೇವಿಸಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ - ಇದು ಆ ದಿನದ ಫೋಟೋ" ಎಂದು 'ತಿಥಿ' ಚಿತ್ರದ ನಿರ್ದೇಶಕ ರಾಮ್ ರೆಡ್ಡಿ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











