ದರ್ಶನ್ ಕೊಲೆ ಮಾಡಿದ್ದು ನೀವು ನೋಡಿದ್ರಾ ಎಂದ ಅಪ್ಪು ಅಪ್ಪಿಕೊಂಡಿದ್ದ ನಟ!
ಹಣದ ಅಮಲು .. ಅಳತೆಗೂ ಮೀರಿದ ಜನಪ್ರಿಯತೆ .. ಸುತ್ತಲು ಮೊಳಗುವ ಜೈಕಾರದ ನಶೆ .. ನಾನೇನೂ ಮಾಡಿದರು ಬಚಾವ್ ಆಗ್ಬಿಡ್ತೀನಿ ಎನ್ನುವ ಅಹಂಕಾರ.. ಇವೆಲ್ಲವನ್ನೂ ನೆತ್ತಿಗೇರಿಸಿಕೊಂಡರೆ ಏನಾಗುತ್ತೆ ಅಂತ ಯಾರಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರದಂತೆ ನಿಲ್ಲುವುದು ದರ್ಶನ್ ಎಂಬ ಆರಡಿ ನಾಯಕನ ಬದುಕು.
ಇಂಥ ದರ್ಶನ್ ಈಗ ಜೈಲಿನಲ್ಲಿದ್ದಾರೆ. ನಿಜಾ.. ದರ್ಶನ್ ಕೇವಲ ಆರೋಪಿ ಮಾತ್ರ, ಇನ್ನೂ ಅಪರಾಧಿ ಎಂದು ಸಾಬೀತು ಆಗಿಲ್ಲ. ಹಾಗಂಥ ಈ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿಯೇ ಇಲ್ಲ ಎಂಬ ವಾದ ಮಾಡುವಂತೆ ಇಲ್ಲ. ಯಾಕೆಂದರೆ, ರೇಣುಕಾ ಸ್ವಾಮಿ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದು ಇದೇ ದರ್ಶನ್ ಫರ್ಮಾನು ಹೊರಡಿಸಿದ ನಂತರವೇ.

ಆದರೆ ಈ ಕಹಿ ಸತ್ಯವನ್ನು ಕೂಡ ಒಪ್ಪಲು ಅನೇಕರು ತಯಾರಿಲ್ಲ. ಅಭಿಮಾನಿಗಳ ಕಥೆ ಬಿಡಿ, ಚಿತ್ರರಂಗದಲ್ಲಿಯೇ ಅನೇಕರು ದರ್ಶನ್ ತುಂಬಾನೇ ಅಮಾಯಕ, ಮುಗ್ದ ಎಂದೆಲ್ಲ ಮಾತನಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್ ಯಾವ ತಪ್ಪು ಮಾಡಿಲ್ಲ ಎಂಬಂತೆ ದರ್ಶನ್ ಪರ ಮಾತನಾಡಲು ಶುರು ಮಾಡಿದ್ದಾರೆ. ಇದಕ್ಕೆ ಕನ್ನಡದ ಖ್ಯಾತ ನಟ ಮತ್ತು ರಂಗಕರ್ಮಿ ಎಂ.ಕೆ.ಮಠ ಸದ್ಯದ ಉದಾಹರಣೆ.
ಹೌದು. ಪವರ್ ಟಿವಿ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿರುವ ಎಂ.ಕೆ.ಮಠ, ದರ್ಶನ್ ಪರವಾಗಿ ಮಾತನಾಡಿದ್ದಾರೆ. ಅವರು ಕೃತ್ಯ ಮಾಡಿದ್ದಾರೆ ಎನ್ನುವುದು ಹೇಗೆ ಗೊತ್ತಾಗುತ್ತೆ. ನೀವೂ ನೋಡಿದ್ದೀರಾ ಎಂಬ ಮರು ಪ್ರಶ್ನೆಯನ್ನೂ ಹಾಕಿದ್ದಾರೆ. ಕಾನೂನಿಗೆ ಒಂದು ಚೌಕಟ್ಟಿದೆ. ಅದು ಸಾಕ್ಷಿ ಕೇಳುತ್ತೆ ಎಂದಿರುವ ಎಂ.ಕೆ.ಮಠ ಕೇವಲ ವಿಚಾರಣಾಧೀನ ಕೈದಿ ನಂಬರ್ ಕೊಟ್ಟಿದ್ದಕ್ಕೆ.. ಪರಪ್ಪನ ಅಗ್ರಹಾರಕ್ಕೆ ದರ್ಶನ್ ಹೋದ ಮಾತ್ರಕ್ಕೆ.. ದರ್ಶನ್ ಕೊಲೆ ಮಾಡಿದ್ದಾರೆ ಎಂದು ಹೇಳಲು ಸಾಧ್ಯ ಇಲ್ಲ ಎಂದಿದ್ದಾರೆ. ಅವನನ್ನು ಕರ್ಕೊಂಡು ಬಂದು ನಾಲ್ಕು ಹಾಕ್ರೋ ಎಂದು ಹೇಳಿದ ತಕ್ಷಣ ಕೊಲೆ ಮಾಡ್ರೋ ಅಂತ ಹೇಳಿದಂಗೆ ಆಗುತ್ತಾ ಎಂದಿದ್ದಾರೆ.

ಮುಂದುವರೆದು ಮಾತನಾಡಿರುವ ಎಂ.ಕೆ.ಮಠ ಇನ್ನೂ ದರ್ಶನ್ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಹಾಕಿಲ್ಲ, ಹಾಕಿದ ನಂತರವಷ್ಟೇ ಈ ಪ್ರಕರಣದ ಕುರಿತು ಸ್ಪಷ್ಟತೆ ಸಿಗುತ್ತೆ, ದರ್ಶನ್ ಅವರಿಗೆ ಜಾಮೀನು ಸಿಗುತ್ತಾ, ಇಲ್ವಾ ಅನ್ನುವುದು ಗೊತ್ತಾಗುತ್ತೆ ಎಂದಿದ್ದಾರೆ. ಚಾರ್ಜ್ ಶೀಟ್ ಸಲ್ಲಿಸುವ ಮುನ್ನವೇ, ಕೆಲ ಮಾಧ್ಯಮದವರು ದರ್ಶನ್ ಅವರಿಗೆ ಶಿಕ್ಷೆಯನ್ನೂ ಘೋಷಿಸಿಯಾಗಿದೆ. ನೇಣುಗಂಬಕ್ಕೆ ಹಾಕಿಯೂ ಆಗಿದೆ ಎಂದು ಬೇಸರವನ್ನೂ ಹಂಚಿಕೊಂಡಿದ್ದಾರೆ. ಇನ್ನೂ ಹುಟ್ಟದ ರೇಣುಕಾ ಸ್ವಾಮಿಯ ಮಗನ ಮೇಲಿರುವ ಕಾಳಜಿ, ಕರುಣೆ, ಎದೆಎತ್ತರಕ್ಕೆ ಬೆಳೆದ ಹರೆಯಕ್ಕೆ ಕಾಲಿಡುತ್ತಿರುವ ದರ್ಶನ್ ಅವರ ಮಗನ ಮೇಲೆ ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಪವಿತ್ರಾ ಗೌಡ ಅವರಿಗೂ ಕೂಡ ಮಗಳಿದ್ದಾಳೆ ಅನ್ನುವುದು ಯಾಕೆ ಯಾರಿಗೂ ಕಾಣ್ತಿಲ್ಲ ಎಂದಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯ ಜೀವಕ್ಕೂ ಬೆಲೆ ಇದೆ ಎಂದಿರುವ ಎಂ.ಕೆ.ಮಠ ಕೊಲೆ ನಡೆದಿರುವುದು ಇದು ಒಂದೆ ಅಲ್ಲವಲ್ಲ ಎಂದಿದ್ದಾರೆ. ಆದರೆ ಕೆಲವು ಮಾಧ್ಯಮದವರು ನಡೆದಿರುವುದು ಇದೊಂದೆ ಕೊಲೆ ಇಲ್ಲಿಯವರೆಗೆ ಕೊಲೆಯೇ ನಡೆದಿಲ್ಲ, ಆದ ಕೊಲೆ ದರ್ಶನ್ ಅವರೇ ಮಾಡಿರುವುದು ಎಂದು ಹೇಳುತ್ತಿದ್ದಾರೆ, ಇದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿದ್ದಾರೆ. ದರ್ಶನ್ ಕೊಲೆ ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಎಲ್ಲಿದೆ ಎಂಬ ಪ್ರಶ್ನೆಯನ್ನೂ ಕೂಡ ಮಾಡಿದ್ದಾರೆ. ಅವರು ಕೊಲೆ ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ ಆದರೆ ಅವರು ಕೊಲೆ ಮಾಡದೇನೇ ಶಿಕ್ಷಿ ಘೋಷಿಸಲು ಮಾಧ್ಯಮದವರು ಯಾರು ಎಂದು ಕಿಡಿಯನ್ನೂ ಕಾರಿದ್ದಾರೆ ಎಂ.ಕೆ.ಮಠ


Click it and Unblock the Notifications











