''ಗ್ರಹಚಾರ ಕೆಟ್ರೆ ಎಲೆಕ್ಟ್ರಿಕ್ ಸ್ಕೂಟರ್‌ನಿಂದ ಎಲೆಕ್ಟ್ರಿಕ್ ಶಾಕ್ ಹೊಡೆಯುತ್ತೆ'' - ಶಂಕರ್ ಅಶ್ವಥ್..!
ಕೆಲಸ ಯಾವುದಾದರೇನು..? ಶ್ರದ್ಧೆಯಿಂದ ನಿಭಾಯಿಸುವುದಷ್ಟೇ ಮುಖ್ಯ ಎಂಬ ಮಾತನ್ನು ನಂಬಿದವರು ಶಂಕರ್ ಅಶ್ವಥ್. ಕನ್ನಡ ಚಿತ್ರರಂಗದ ಹೆಸರಾಂತ ನಟ ಚಾಮಯ್ಯ ಮೇಷ್ಟ್ರು ಕೆ.ಎಸ್.ಅಶ್ವಥ್ ಅವರ ಮಗನಾದರೂ ಒಂದು ಕಾಲದಲ್ಲಿ ಅವಕಾಶಗಳಿಲ್ಲದೇ ಉಬರ್ ಕ್ಯಾಬ್ ಓಡಿಸುವ ಕೆಲಸವನ್ನು ಕೂಡ ಮಾಡಿದ್ದ ಶಂಕರ್ ಅಶ್ವಥ್, ಸದ್ಯ ಎಲೆಕ್ಟ್ರಿಕ್ ಸ್ಕೂಟರ್‌ನಿಂದ ಗ್ರಹಚಾರ ಕೆಟ್ಟರೆ ಎಲೆಕ್ಟ್ರಿಕ್ ಶಾಕ್ ಹೊಡೆಯುತ್ತೆ ಎಂದಿದ್ದಾರೆ.
ಹೌದು, ಆರಂಭದಲ್ಲಿ ಪರಿಸರ ಸ್ನೇಹಿಯಾದ ಕಾರಣಕ್ಕೆ ಎಲ್ಲರ ಗಮನ ಸೆಳೆಯುವುದಲ್ಲದೇ, ಅತ್ಯಾಕರ್ಷಕ ವಿನ್ಯಾಸಗಳಿಂದ ಹೃದಯವನ್ನು ಗೆದ್ದ ಕೆಲ ಎಲೆಕ್ಟ್ರಿಕ್ ಬೈಕ್ ಗಳ ಬಗ್ಗೆ ಇವತ್ತು ತಂಟೆ-ತಕರಾರುಗಳಿವೆ. ಅನೇಕರು ಎಲೆಕ್ಟ್ರಿಕ್ ಬೈಕ್ ನ ಸಹವಾಸ ಮಾಡಿ ಹೈರಾಣಾಗಿದ್ದಾರೆ. ಇನ್ನೂ ಕೆಲವಡೆ ಈ ವಿದ್ಯುತ್ ಚಾಲಿತ ವಾಹನಗಳಿಂದ ಅವಘಡಗಳು ಕೂಡ ಸಂಭವಿಸಿವೆ. ಹುಬ್ಬಳ್ಳಿಯಿಂದ ಪುಣೆಯವರೆಗೆ ಎಲೆಕ್ಟ್ರಿಕ್ ಬೈಕ್ ಸ್ಫೋಟಗೊಂಡು ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಇನ್ನೂ ಕೆಲ ಪ್ರಕರಣದಲ್ಲಿ ಚಾರ್ಜಿಂಗ್ ವೇಳೆ ಎಲೆಕ್ಟ್ರಿಕಲ್ ಬೈಕ್ ಸ್ಫೋಟದಿಂದ ಮನೆ ಕೂಡ ಬೆಂಕಿಯ ಕೆನ್ನಾಲಿಗೆ ಧಗಧಗ ಉರಿದಿದೆ. ಆದರೂ ಕೂಡ ಎಲೆಕ್ಟ್ರಿಕ್ ಬೈಕ್‌ಗಳ ಡಿಮ್ಯಾಂಡ್ ಕಡಿಮೆಯಾಗಿಲ್ಲ.

ಹೀಗಿರುವಾಗ ಶಂಕರ್ ಅಶ್ವಥ್ ವಿದ್ಯುತ್ ಚಾಲಿತ ಬೈಕ್‌ಗಳ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್‌ನಿಂದ ಗ್ರಹಚಾರ ಕೆಟ್ಟರೆ ಎಲೆಕ್ಟ್ರಿಕ್ ಶಾಕ್ ಹೊಡೆಯುತ್ತೆ ಎಂದು ಹೇಳಿದ್ದಾರೆ. ಈ ಕುರಿತು ವಿಡಿಯೋ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಶಂಕರ್ ಅಶ್ವಥ್, ನಾವು ಒಂದು ಎಲೆಕ್ಟ್ರಿಕ್ ಸ್ಕೂಟರ್ ತಗೊಂಡಿದೀವಿ, ಅದು ಕೆಟ್ಟು ಸುಮಾರು ಒಂದು ವಾರ ಆಯಿತು ಅಂದಿದ್ದಾರೆ. ಗಾಡಿ ಏನೋ ಚೆನ್ನಾಗಿದೆ, ಓಡಾಡುತ್ತಿದ್ದರೆ ಚೆನ್ನಾಗಿಯೇ ಇರುತ್ತೆ ಆದರೆ ಆಕಸ್ಮಾತ್ ಕೆಟ್ಟೋಯ್ತು ಅಂದರೆ ಅದರ ಜೊತೆ ನಮ್ಮ ತಲೆ ಕೂಡ ಕೆಡುತ್ತೆ ಎಂದಿರುವ ಶಂಕರ್ ಅಶ್ವಥ್ ಎಲೆಕ್ಟ್ರಿಕ್ ಬೈಕ್‌ಗಳ ಸರ್ವಿಸ್ ಸೆಂಟರ್‌ಗಳು ಹೋಪ್ ಲೆಸ್ ಎಂದಿದ್ದಾರೆ.
ಒಂದು ಸಲ ಗಾಡಿಯನ್ನು ಸರ್ವಿಸ್‌ಗೆ ತೆಗೆದುಕೊಂಡು ಹೋದರೆ ಹತ್ತು ಹದಿನೈದು ದಿವಸ ಆದರೂ ಕೂಡ ಬರುವುದಿಲ್ಲ. ಯಾಕೆಂದರೆ ಸಿಕ್ಕಾಪಟ್ಟೆ ಗಾಡಿಗಳಿರುತ್ತಾವೆ, ಸರ್ವಿಸ್ ಸೆಂಟರ್‌ಗಳು ಕಡಿಮೆ ಎಂದಿರುವ ಶಂಕರ್ ಅಶ್ಚಥ್ ಸರ್ವಿಸಿಂಗ್ ಕೂಡ ಚೆನ್ನಾಗಿಲ್ಲ ಎಂದಿದ್ದಾರೆ. ಇನ್ನೂ ಗಾಡಿ ಕೆಟ್ಟು ಹೋದಾಗ ನಾವು ತಳ್ಳುಕೊಂಡು ಹೋಗುವಂತೆಯೂ ಇಲ್ಲ. ಅದಕ್ಕೆ ಅವರದ್ದೇ ವಾಹನ ಬರುವವರೆಗೆ ಕಾಯಬೇಕು. ಸಾಲದಕ್ಕೆ ಅದಕ್ಕೆ ಮತ್ತೆ 2500 ಕೊಡಬೇಕು ಎಂದು ತಮ್ಮ ಆಕ್ರೋಶ ಹೊರ ಹಾಕಿರುವ ಶಂಕರ್ ಅಶ್ವಥ್ ಇವೆಲ್ಲ ನೋಡಿದರೆ ಪೆಟ್ರೋಲ್ ಗಾಡಿಗಳೇ ಈ ಎಲೆಕ್ಟ್ರಿಕ್ ಬೈಕ್‌ಗಳಿಗಿಂತ ಸಾವಿರ ಪಾಲು ವಾಸಿಯೆಂದಿದ್ದಾರೆ.
ಶಂಕರ್ ಅಶ್ವಥ್ ಅವರ ಈ ಮಾತುಗಳಿಗೆ ಅನೇಕರು ಸಮ್ಮತಿ ಸೂಚಿಸಿದ್ದಾರೆ. ನೀವು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯವೆಂದಿದ್ದಾರೆ. ಕೆಲವರು ಅದ್ಯಾವ ಕಂಪನಿಯ ಬೈಕ್ ಅನ್ನುವುದನ್ನು ಹೇಳಿ ಆಗ ಸಾರ್ವಜನಿಕರಿಗೆ ಉಪಯೋಗವಾಗುತ್ತೆ ಎಂದು ಹೇಳಿದ್ದಾರೆ. ಹೆಸರು ಹೇಳಿ ಗುರುಗಳೇ ಎಂದಿದ್ದಾರೆ.


Click it and Unblock the Notifications











