ಒಂದ್ಕಾಲದಲ್ಲಿ ಪ್ರಾಣ ಸ್ನೇಹಿತರಾಗಿದ್ದ ಸೃಜಾ -ಗಜಾ ಏಕಾಏಕಿ ದೂರವಾಗಿದ್ದೇಕೆ ? ಗಿರಿಜಾ ಲೋಕೇಶ್ ಹೇಳಿದ್ದೇನು..?
ಮನೆಯ ತುಂಬಾ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನೂ ಕೂಡ ಸಾಕಿದ ಕಾರಣಕ್ಕೆ ಇವತ್ತು ದರ್ಶನ್ ಜೈಲಿನಲ್ಲಿದ್ದಾರೆ. ರೇಣುಕಾ ಸ್ವಾಮಿ ಪ್ರಕರಣದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ದರ್ಶನ್ ಪಾಲು ಎಷ್ಟಿದೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ, ಸದ್ಯಕ್ಕೆ ದರ್ಶನ್ ಇಮೇಜ್ ಸರಿ ಪಡಿಸಲಾಗದಷ್ಟು ಡ್ಯಾಮೇಜ್ ಆಗಿದೆ.
ನಿಜಾ ಅಂಧಾಭಿಮಾನದ ಬೋರ್ಡನ್ನೂ ತಮ್ಮ ಕೊರಳಿಗೆ ತಗಲುಹಾಕಿಕೊಂಡವರು ಈ ಮಾತನ್ನು ಒಪ್ಪಲಾರರು. ಆದರೆ.. ದರ್ಶನ್ ಅವರ ನಿಜವಾದ ಅಭಿಮಾನಿಗಳು ತಮ್ಮ ಆರಾಧ್ಯ ದೈವನ ಪರಿಸ್ಥಿತಿಯನ್ನೂ ಕಂಡು ಕಣ್ಣೀರು ಹಾಕುತ್ತಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಿದ್ದ ಬೆಳ್ಳಿತೆರೆಯ ನಾಯಕನೊಬ್ಬ ಹೀಗೆ ದೃಷ್ಕೃತ್ಯದ ಪಾಲುದಾರನಾಗಿ ಜೈಲು ಸೇರಿದರಲ್ಲಾʼ ಅಂಥಾ ಕೊರಗುತ್ತಿದ್ದಾರೆ.

ಇನ್ನೂ ಇದೆಲ್ಲದರ ನಡುವೆ ಕನ್ನಡ ಚಿತ್ರರಂಗದಲ್ಲಿ ಅನೇಕರು ದರ್ಶನ್ ಪರ ಬೆಂಬಲದ ಬಾವುಟ ಹಾರಿಸಿದ್ದಾರೆ. ಇನ್ನೂ ಕೆಲವರು ಅಡ್ಡ ಗೋಡೆಯ ಮೇಲೆ ದೀಪವನ್ನೂ ಇಟ್ಟಿದ್ದಾರೆ. ಮತ್ತೂ ಕೆಲವರು ಮೌನಕ್ಕೆ ಶರಣಾಗಿದ್ದಾರೆ.
ಎಲ್ಲವೂ ಅವರವರ ಬದುಕಿನ ದೃಷ್ಟಿಕೋನವಾದರೂ, ದರ್ಶನ್ ತಮ್ಮ ಸುತ್ತ ಮುತ್ತ ಪರೋಡಿಗಳನ್ನು ಸಾಕುವ ಬದಲು ನಾಲ್ಕು ಒಳ್ಳೇಯ ಸ್ನೇಹಿತರನ್ನೂ ಸಂಪಾದಿಸಿದ್ದರೆ ಇವತ್ತು ದರ್ಶನ್ ಖಂಡಿತ ಇಂತಹ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ ಎಂಬ ಮಾತನ್ನೂ ಅನೇಕರು ಒಪ್ಪುತ್ತಾರೆ. ಹಿಂದೆ ದರ್ಶನ್ ಜೊತೆ ಎಂಥೆಂಥ ಉತ್ತಮ ಸ್ನೇಹಿತರು ಇದ್ದರು ಎಂದು ನೆನಪು ಮಾಡಿಕೊಳ್ಳುತ್ತಾರೆ. ದರ್ಶನ್ ಮತ್ತು ಸುದೀಪ್ ಮಾತ್ರ ಅಲ್ಲ ದರ್ಶನ್ ಮತ್ತು ಸೃಜನ್ ಲೊಕೇಶ್ ಅವರ ಸ್ನೇಹದ ಬಗ್ಗೆಯೂ ಮಾತನಾಡುತ್ತಾರೆ. ಈ ಇಬ್ಬರು ಅಕ್ಕ-ಪಕ್ಕ ಇದ್ದಿದ್ದರೆ ದರ್ಶನ್ ಹೀಗೆ ಮದವೇರಿದ ಐರಾವತನಂತೆ ವರ್ತಿಸುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಾರೆ. ಇದರ ನಡುವೆ ಸೃಜನ್ ತಾಯಿ ಗಿರಿಜಾ ಲೋಕೇಶ್ ದರ್ಶನ್ ಮತ್ತು ಸೃಜನ್ ಸ್ನೇಹದ ಬಗ್ಗೆ ವಿಷಾದದ ಧ್ವನಿಯಲ್ಲಿ ಮಾತನಾಡಿದ್ಧಾರೆ.

ಹೌದು, ''ನಮ್ಮ ಕೆಎಫ್‌ಐ'' ಯೂಟ್ಯೂಬ್ ವಾಹಿನಿ ಜೊತೆ ಮಾತನಾಡಿರುವ ಕನ್ನಡ ಚಿತ್ರರಂಗದ ಹಿರಿಯ ನಟಿ ಮತ್ತು ಸೃಜನ್ ಲೋಕೇಶ್ ಅವರ ತಾಯಿ ಗಿರಿಜಾ ಲೋಕೇಶ್, ನನ್ನ ಮಗ ಮತ್ತು ದರ್ಶನ್ ಒಂದ್ಕಾಲದಲ್ಲಿ ಗಳಸ್ಯ-ಕಂಠಸ್ಯ ತರ ಇದ್ದರು. ಒಂದೇ ರೀತಿಯ ಉಂಗುರ ಮಾಡಿಸಿಕೊಂಡಿದ್ದರು ಎಂದಿರುವ ಗಿರಿಜಾ ಲೋಕೇಶ್, ಒಂದೇ ರೀತಿಯ ಬಟ್ಟೆಯನ್ನೂ ಇಬ್ಬರು ತೆಗೆದುಕೊಳ್ಳುತ್ತಿದ್ದರು ಎಂದಿದ್ದಾರೆ. ಯಾರಿಗಾದರೂ ಒಬ್ಬರಿಗೆ ಸಹಾಯ ಮಾಡಬೇಕು ಅಂದರೆ ಇಬ್ಬರು ಹಂಚಿಕೊಂಡು ಮಾಡುತ್ತಿದ್ದರು ಎಂದಿದ್ದಾರೆ.
ಮುಂದುವರೆದು ಈ ತರಹ ಬದುಕಿದವರು ಹಾಗೇ ದೂರವಾದರು ಎಂದಿರುವ ಗಿರಿಜಾ ಲೋಕೇಶ್, ಖುದ್ದು ನಾನೇ ಯಾಕ್ರೋ ನೀವು ಇಬ್ಬರು ಮಾತನಾಡುತ್ತಿಲ್ಲ ಎಂದು ನೇರವಾಗಿಯೇ ದರ್ಶನ್‌ಗೆ ಕೇಳಿದ್ದೆ. ಅದಕ್ಕೆ ಅಯ್ಯೋ ಅವನದ್ದು.. ನಂದು .. ಇರುತ್ತೆ ಬಿಡಮ್ಮ ಎಂದು ದರ್ಶನ್ ಹೇಳಿದ್ದ ಎಂದು ಆ ದಿನವನ್ನು ಮೆಲುಕು ಹಾಕಿದ್ದಾರೆ ಗಿರಿಜಾ ಲೋಕೇಶ್.

ಇನ್ನೂ ಇದೇ ಸಂದರ್ಶನದಲ್ಲಿ ದರ್ಶನ್ ಮೊದಲು ಸಕ್ಕರೆ ಗೊಂಬೆಯಂತೆ ಇದ್ದ, ಕಿರುತೆರೆಯಿಂದ ಅವನು ಚಿತ್ರರಂಗಕ್ಕೆ ಬಂದಾಗ ನನಗೆ ತುಂಬಾನೇ ಖುಷಿಯಾಗಿತ್ತು ಎಂದು ಹೇಳಿರುವ ಗಿರಿಜಾ ಲೋಕೇಶ್ ಆ ಸೌಮ್ಯ ಸ್ವಭಾವದ ಹುಡುಗ ಹೀಗೆ ರೌದ್ರಾವತಾರ ತಾಳುತ್ತಾನೇ ಎಂದರೆ ನಂಬೋಕೆ ಆಗ್ತಿಲ್ಲ ಎಂದು ಹೇಳಿದ್ದಾರೆ. ಈ ಘಟನೆ ಯಾರಿಂದ ಆಯಿತು, ಯಾಕೆ ಆಯಿತು ಅನ್ನುವುದು ನಮಗೆ ಗೊತ್ತಿಲ್ಲ. ಆದರೆ ಈ ಘಟನೆಯನ್ನೂ ಮಾತ್ರ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ಧಾರೆ. ಅವರಾಗಿರಬಹುದು. ಇವರಾಗಿರಬಹುದು.ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಕೂಡ ಹೇಳಿದ್ದಾರೆ ಗಿರಿಜಾ ಲೋಕೇಶ್


Click it and Unblock the Notifications











