ಹಿರಿಯ ನಟಿ ಹೇಮಾ ಚೌಧರಿ ಆರೋಗ್ಯಸ್ಥಿತಿ ಗಂಭೀರ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಬಹುಭಾಷಾ ನಟಿ ಹೇಮಾ ಚೌಧರಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಆಕೆಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಿರಿಯ ನಟಿಗೆ ಇತ್ತೀಚೆಗೆ ಬ್ರೈನ್ ಹ್ಯಾಮರೇಜ್ ಎಂದು ವರದಿಯಾಗಿದೆ. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಸದ್ಯ ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಸದ್ಯ ಹೇಮಾ ಚೌಧರಿ ದೇಹ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎನ್ನಲಾಗ್ತಿದೆ. ಆಕೆಯ ಪುತ್ರ ದೂರದ ಐರ್ಲೆಂಡ್‌ನಲ್ಲಿ ಇದ್ದು ಆತನ ಬರುವಿಕೆಗಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ. ಆಕೆ ಬೇಗ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಹೇಮಾ ಚೌಧರಿ 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದ್ಕಾಲದಲ್ಲಿ ಬಹುಬೇಡಿಕೆಯ ಪೋಷಕ ಕಲಾವಿದೆಯಾಗಿ ಹೇಮಾ ಮಿಂಚಿದ್ದರು. ಕನ್ನಡ ಸಿನಿಮಾಗಳಲ್ಲಿ ತಮ್ಮ ನೆಗೆಟಿವ್ ಪಾತ್ರಗಳಿಂದ ಆಕೆ ಹೆಚ್ಚು ಜನಪ್ರಿಯತೆ ಗಳಿಸಿದ್ದರು.
ಇತ್ತೀಚೆಗೆ ನಟಿ ಲೀಲಾವತಿ ಪುಣ್ಯ ತಿಥಿಯಲ್ಲಿ ಹೇಮಾ ಚೌಧರಿ ಆರೋಗ್ಯವಾಗಿರುವಂತೆ ಕಂಡು ಬಂದಿದ್ದರು. ಲೀಲಾವತಿ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿ ವಿನೋದ್ ರಾಜ್‌ಗೆ ಸಾಂತ್ವಾನ ಹೇಳಿದ್ದರು. ಇದೀಗ ದಿಢೀರನೆ ಆಕೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
'ವಿಜಯವಾಣಿ', 'ಶುಭಾಶಯ', 'ದೀಪ', ಹಾಗೂ 'ನೀ ಬರೆದ ಕಾದಂಬರಿ' ಚಿತ್ರಗಳಲ್ಲಿ ತಮ್ಮ ಪಾತ್ರಗಳಿಂದ ಗಮನ ಸೆಳೆದಿದ್ದರು. 'ಗಾಳಿಮಾತು' ಚಿತ್ರದ 'ನಮ್ಮೂರ ಜಾತ್ರೇಲಿ ಪೇಟೆಯ ಬೀದಿಲಿ' ಎನ್ನುವ ಹಾಡಿನಲ್ಲಿ ಕುಣಿದು ಸಿನಿರಸಿಕರ ಮನಸ್ಸಿನಲ್ಲಿ ಉಳಿದಿದ್ದಾರೆ. 70, 80ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಹೇಮಾ ಬಣ್ಣ ಹಚ್ಚಿದ್ದರು.
ಸೂಪರ್ ಸ್ಟಾರ್ ರಜನಿಕಾಂತ್ ಚೆನ್ನೈ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿಯುವಾಗ ಹೇಮಾ ಚೌಧರಿ ಕೂಡ ಕ್ಲಾಸ್‌ಮೇಟ್ ಆಗಿದ್ದರು. ಕೂಚಿಪೂಡಿ ನೃತ್ಯ ಕಲಿತಿರುವ ಆಕೆ 700ಕ್ಕೂ ಅಧಿಕ ವೇದಿಕೆಗಳಲ್ಲಿ ಕುಣಿದಿದ್ದಾರೆ. ಎನ್‌ಟಿಆರ್, ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಚಿರಂಜೀವಿ, ಶಂಕರ್ ನಾಗ್, ಟೈಗರ್ ಪ್ರಭಾಕರ್ ಸೇರಿದಂತೆ ಸಾಕಷ್ಟು ಖ್ಯಾತ ನಟರ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಾವಿತ್ರಿ, ಬಿ. ಸರೋಜಾ ದೇವಿ, ಜಯಂತಿ, ಕಲ್ಪನಾ, ಜಯಪ್ರದಾ, ಶ್ರೀದೇವಿ ಸೇರಿದಂತೆ ಹಲವು ಖ್ಯಾತ ನಟಿಯರ ಜೊತೆಗೂ ಹೇಮಾ ಚೌಧರಿ ತೆರೆ ಹಂಚಿಕೊಂಡಿದ್ದಾರೆ. 1976ರಲ್ಲಿ 'ಪೆಳ್ಳಿಕಾನಿ ಪೆಳ್ಳಿ' ಚಿತ್ರದಲ್ಲಿ ಮೊದಲಿಗೆ ನಾಯಕಿಯಾಗಿ ಹೇಮಾ ಚಿತ್ರರಂಗ ಪ್ರವೇಶಿಸಿದರು. ಬಳಿಕ 80ರ ದಶಕದಲ್ಲಿ ಪೋಷಕ ಪಾತ್ರಗಳತ್ತ ಮುಖ ಮಾಡಿದರು.
ಇನ್ನು ತಮಿಳಿನ 'ಮನ್ಮಥ ಲೀಲೈ' ಚಿತ್ರದಲ್ಲಿ ಕಮಲ್ ಹಾಸನ್ ಜೋಡಿಯಾಗಿ ಮಿಂಚಿದ್ದರು. 1976ರಲ್ಲಿ 'ವಿಜಯವಾಣಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಮುಂದೆ ಕನ್ನಡದಲ್ಲೇ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಬೆಂಗಳೂರಿನಲ್ಲೇ ನೆಲೆಸಿದರು. ಕನ್ನಡ ನಟಿಯೇ ಆಗಿಬಿಟ್ಟರು.
ತಮ್ಮ ಪ್ರತಿಯೊಂದು ಚಿತ್ರ ಮುಗಿದ ನಂತರ ಹಿಂದೂ ದೇವಿಯ ದೇವಾಲಯಗಳಿಗೆ ರೇಷ್ಮೆ ಸೀರೆಯನ್ನು ಅರ್ಪಿಸುವ ಪದ್ಧತಿಯನ್ನು ಹೇಮಾ ಚೌಧರಿ ಪಾಲಿಸುತ್ತಾ ಬರುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೂಡ ಆಕೆ ನಟಿಸಿದ್ದಾರೆ.
ಬರೀ ಸಿನಿಮಾಗಳಲ್ಲಿ ಮಾತ್ರವಲ್ಲ 2 ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ಆಕೆಯ ನೆಗೆಟಿವ್ ಶೇಡ್ ಶಕುಂತಲಾ ದೇವಿ ಪಾತ್ರ ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ಆ ಮೂಲಕ ಕಿರುತೆರೆ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು.
'ಗುರುಶಿಷ್ಯರು', 'ಯಾರಿವನು', 'ಜಿಮ್ಮಿಗಲ್ಲು', 'ಮಸಣದ ಹೂವು', 'ಕಿಂದರಿ ಜೋಗಿ', 'ಕುರುಬನ ರಾಣಿ', 'ವೀರಪ್ಪ ನಾಯಕ', 'ಸೂರ್ಯವಂಶ', 'ಜಮೀನ್ದಾರು', 'ಕನಸುಗಾರ', 'ತವರಿಗೆ ಬಾ ತಂಗಿ', 'ಅಣ್ಣ ತಂಗಿ', 'ಮಲ್ಲಿಕಾರ್ಜುನ', 'ಶಕ್ತಿ', 'ದಶರಥ' ಸೇರಿದಂತೆ ಕನ್ನಡದ ಹಲವು ಹಿಟ್ ಸಿನಿಮಾಗಳಲ್ಲಿ ಹೇಮಾ ನಟಿಸಿದ್ದಾರೆ.


Click it and Unblock the Notifications











