ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ವಿಧಿವಶ
Recommended Video
ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಅವರು ಇಂದು ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟಿ ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
ಕಿಶೋರಿ ಬಲ್ಲಾಳ್ ಅವರು ನಿಧನದ ಸುದ್ದಿಯನ್ನು ಅವರ ಸೊಸೆ ಅಹಲ್ಯ ಬಲ್ಲಾಳ್ ಫಿಲ್ಮಿಬೀಟ್ ಕನ್ನಡಕ್ಕೆ ಖಚಿತಪಡಿಸಿದ್ದಾರೆ. ಮೂಲತಃ ರಂಗಭೂಮಿ ಕಲಾವಿದೆಯಾಗಿದ್ದ ಕಿಶೋರಿ ಬಲ್ಲಾಳ್ ಅವರು, ಸಿನಿಮಾ, ಜಾಹೀರಾತುಗಳಲ್ಲಿ ಅಭಿನಯಿಸಿದ್ದರು. ಮುಂದೆ ಓದಿ...

ಮೊದಲ ಸಿನಿಮಾ 'ಇವಳೆಂಥಾ ಹೆಂಡತಿ'
1960ರಲ್ಲಿ 'ಇವಳೆಂಥಾ ಹೆಂಡತಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದ ಕಿಶೋರಿ ಬಲ್ಲಾಳ್, ಸುಮಾರು 75ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಹೆಸರಾಂತ ನಿರ್ದೇಶಕರು ಮತ್ತು ನಟರ ಜೊತೆಗೆ ಕೆಲಸ ಮಾಡಿದ್ದಾರೆ. ವೀರಬಾಹು, ಹನಿ ಹನಿ, ಸೂರ್ಯಕಾಂತಿ, ನಾನಿ, ಕಹಿ, ಶಿವಗಾಮಿ, ಅಕ್ಕ ತಂಗಿ, ನನ್ನುಸಿರೇ ಸೇರಿದಂತೆ ಸುಮಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಶಾರೂಖ್ ಜೊತೆ ನಟನೆ
ಬಾಲಿವುಡ್ ನಟ ಶಾರೂಖ್ ಖಾನ್ ನಟಿಸಿದ್ದ 'ಸ್ವದೇಶ್' ಚಿತ್ರದಲ್ಲಿ ಶಾರೂಖ್ ಗೆ ತಾಯಿ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರ ಭಾರಿ ಮೆಚ್ಚುಗೆ ಗಳಿಸಿಕೊಂಡಿತ್ತು. 2004ರಲ್ಲಿ ತೆರೆಕಂಡಿದ್ದ ಈ ಚಿತ್ರವನ್ನು ಅಶುತೋಷ್ ಗೋವಾರಿಕರ್ ನಿರ್ದೇಶನ ಮಾಡಿದ್ದರು.

ರಂಗಭೂಮಿ ಕುಟುಂಬ
ಕಿಶೋರಿಯವರು ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಜನಿಸಿದರು. ಮುಂದೆ 1950ರಲ್ಲಿ ಭರತನಾಟ್ಯ ಕಲಾವಿದ ರಂಗಕರ್ಮಿ ಶ್ರೀಪತಿ ಬಲ್ಲಾಳರ ಜೊತೆ ಮದುವೆಯಾದರು. ಶ್ರೀಪತಿ ಬಲ್ಲಾಳ್ ಅವರು ಈ ಹಿಂದೆಯೇ ನಿಧನರಾಗಿದ್ದರು. ಮಗ ಕೂಡ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಆತನ ಪತ್ನಿ ಅಹಲ್ಯ ಬಲ್ಲಾಳ್ ಕೂಡ ನಟಿ ಎನ್ನಲಾಗಿದೆ.

ಅಂತ್ಯಕ್ರಿಯೆ ಬಗ್ಗೆ ನಿರ್ಧರಿಸಬೇಕಾಗಿದೆ
ಇತ್ತೀಚಿಗಷ್ಟೆ ಕೆಲಸ ಮಾಡುತ್ತಿದ್ದ ವೇಳೆ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದುಕೊಂಡಿದ್ದರಂತೆ. ಆದರೆ, ಉಸಿರಾಟ ತೊಂದರೆ ಅವರನ್ನು ಗಾಢವಾಗಿ ಕಾಡುತ್ತಿತ್ತು ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ. ಸದ್ಯಕ್ಕೆ ಕೆಲಸದ ನಿಮಿತ್ತ ಹೊರಗೆ ಹೋಗಿರುವ ಸೊಸೆ ಅಹಲ್ಯ ಅತ್ತೆಯ ಸಾವಿನ ಸುದ್ದಿ ತಿಳಿದ ತಕ್ಷಣ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಸೊಸೆ ಬಂದ ಬಳಿಕ ಸಂಬಂಧಿಕರೊಡನೆ ಚರ್ಚಿಸಿ ಅಂತ್ಯಕ್ರಿಯೆ ಬಗ್ಗೆ ನಿರ್ಧರಿಸಲಾಗುವುದು ಎಂದು ಅಹಲ್ಯ ತಿಳಿಸಿದ್ದಾರೆ.


Click it and Unblock the Notifications











