ಅನಾರೋಗ್ಯದ ನಡುವೆಯೂ ಮಗ ವಿನೋದ್ ರಾಜ್ ಜೊತೆಗೆ ಡಿಕೆ ಶಿವಕುಮಾರ್‌ರನ್ನು ಭೇಟಿಯಾದ ಹಿರಿಯ ನಟಿ ಲೀಲಾವತಿ
ಕನ್ನಡದ ಹಿರಿಯ ನಟಿ ಲೀಲಾವತಿ ತಮ್ಮ ಮಗ ಮತ್ತು ನಟ ವಿನೋದ್ ರಾಜ್ ಜೊತೆಗೆ ಶನಿವಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಸೋಲದೇವನಹಳ್ಳಿಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ಹಾಗೂ ನಿವೇಶನ ನೋಂದಣಿ ವಿಚಾರವಾಗಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಡಿಕೆ ಶಿವಕುಮಾರ್ ಅವರ ನಿವಾಸದ ಬಳಿ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ "ಪ್ರಾಣಿಗಳ ರಕ್ಷಣೆ ಈ ತಾಯಿ ಮಗನ ನೆಚ್ಚಿನ ಹವ್ಯಾಸ. ಪಶು ವೈದ್ಯಕೀಯ ಕಾಲೇಜು ಉದ್ಘಾಟನೆಗೆ ದಿನಾಂಕ ನೀಡಿ ಎಂದು ಅವರು ನನಗೆ ಕೇಳಿದ್ದಾರೆ. ನಾನು ಸಮಯ ನೋಡಿ ಅವರಿಗೆ ದಿನಾಂಕ ನೀಡುತ್ತೇನೆ" ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಸೋಲದೇವನಹಳ್ಳಿಯಲ್ಲಿ ಅವರಿಗಾಗಿ ನಿಗದಿಯಾಗಿರುವ ನಿವೇಶನ ನೋಂದಣಿ ವಿಚಾರವಾಗಿಯೂ ಅವರು ಮನವಿ ಸಲ್ಲಿಸಿದ್ದಾರೆ. ಈ ನೋಂದಣಿ ವಿಚಾರಗಳ ಬಗ್ಗೆ ಅವರಿಗೆ ಅಗತ್ಯ ಸಹಕಾರ ನೀಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಟಿ ಲೀಲಾವತಿ ಅವರ ಅನಾರೋಗ್ಯದ ಬಗ್ಗೆ ಮಾತನಾಡಿದ ಅವರು, "ಹಿರಿಯರಾದ ಲೀಲಾವತಿ ಅವರನ್ನು ಕರೆದುಕೊಂಡು ಬರುವುದು ಬೇಡ, ಅವರ ಆರೋಗ್ಯ ಸರಿಯಿಲ್ಲ ಎಂದು ಹೇಳಿದ್ದೆ. ಆದರೂ ಅವರು ನನ್ನ ಮೇಲೆ ಅಭಿಮಾನವಿಟ್ಟು ಇಲ್ಲಿಗೆ ಬಂದಿದ್ದಾರೆ. ಅವರಿಗೆ ಉತ್ತಮವಾದ ಆರೋಗ್ಯ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.

ಕಾರಿನ ಬಳಿಯೇ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ ಡಿಸಿಎಂ
ಅನಾರೋಗ್ಯದ ಕಾರಣ ಕಾರಿನಲ್ಲಿಯೇ ಕುಳಿತಿದ್ದ ಹಿರಿಯ ನಟಿ ಲೀಲಾವತಿ ಅವರನ್ನು ಅವರಿದ್ದಲ್ಲಿಯೇ ಬಂದು ಡಿಕೆ ಶಿವಕುಮಾರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. "ನಿಮ್ಮ ಆರೋಗ್ಯ ಸರಿ ಇಲ್ಲದ ಕಾರಣ ಇಷ್ಟು ದೂರ ಬರುವುದು ಬೇಡ ಎಂದು ಹೇಳಿದ್ದೆ. ಆದರೂ ನೀವು ಬಂದಿದ್ದು ಸಂತಸವಾಯಿತು. ನೀವು ಹೇಳಿದ ದಿನಾಂಕದಂದು ಬಂದು ಪಶುವೈದ್ಯಕೀಯ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆ" ಎಂದು ಶಿವಕುಮಾರ್ ಹಿರಿಯ ನಟಿ ಲೀಲಾವತಿ ಅವರಿಗೆ ಭರವಸೆ ನೀಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯ ನಂತರ ಮಾಧ್ಯಮಗಳಿಗೆ ನಟ ವಿನೋದ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಪಶು ಆಸ್ಪತ್ರೆ ಬ್ಗಗೆ ಮಾಹಿತಿ ನೀಡಿದ್ದಾರೆ. "ನಾವು ಸುಸಜ್ಜಿತವಾದ ಪಶು ಚಿಕಿತ್ಸೆ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಸಿಬ್ಬಂದಿಯನ್ನು ಸರ್ಕಾರದ ಕಡೆಯಿಂದ ನಿಯೊಜಿಸಬೇಕಾಗಿ ಮನವಿ ಸಲ್ಲಿಸಿದ್ದೇವೆ. ಸೊಂಡೆಕೊಪ್ಪ ಬಳಿ ವಿದ್ಯುತ್ ಸಬ್‌ಸ್ಟೇಷನ್ ಕಾಮಗಾರಿ ಶೇ 99 ರಷ್ಟು ನಿರ್ಮಾಣವಾಗಿ ನಿಂತು ಹೋಗಿದ್ದು, ಅದನ್ನು ಕಾರ್ಯಗತ ಮಾಡಿದರೆ ಆ ಭಾಗದ ರೈತರಿಗೆ ತುಂಬಾ ಉಪಯೋಗವಾಗುತ್ತದೆ. ಈ ಬಗ್ಗೆ ಡಿಸಿಎಂ ಅವರ ಗಮನಕ್ಕೆ ತಂದಿದ್ದೇವೆ" ಎಂದು ತಿಳಿಸಿದ್ದಾರೆ.
"ಸೋಲದೇವನಹಳ್ಳಿಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ಹಾಗೂ ನಿವೇಶನ ನೋಂದಣಿ ವಿಚಾರವಾಗಿ ಹಿರಿಯ ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಅವರು ಮಾಡಿದ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ" ಎಂದು ಡಿಸಿಎಂ ಕಚೇರಿ ಮಾಹಿತಿ ನೀಡಿದೆ.


Click it and Unblock the Notifications











