ಮೂರು ಮಕ್ಕಳ ಜೊತೆ ಸ್ಫೇನ್‌ನಲ್ಲಿ ಮಾಧವಿ,ಈಗ ಹೇಗಿದ್ದಾರೆ ಡಾ.ರಾಜ್ ಜೊತೆ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಮೋಹಕ ನಟಿ..?
ನಿಮಗೆ ಮಾಧವಿ ನೆನಪಿರಬೇಕು.. ಅಂದಕಾಲತ್ತಿಲ್‌ನ ಮೋಹಕ ನಾಯಕಿ. ಕನ್ನಡವೂ ಸೇರಿ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಒರಿಯಾ ಭಾಷೆಯಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು. 1976ರಿಂದ 1996ರವರೆಗೆ ತಮ್ಮ 20 ವರ್ಷಗಳ ಸುಧೀರ್ಘ ಪ್ರಯಾಣದಲ್ಲಿ 300 ಸಿನಿಮಾಗಳಿಗೆ ಬಣ್ಣ ಹಚ್ಚಿದ್ದ ಮಾಧವಿ, ಆ ಕಾಲದಲ್ಲಿ ಕನ್ನಡದ ಅನೇಕ ಚಿತ್ರ ಪ್ರೇಮಿಗಳ ಪಾಲಿನ ನೆಚ್ಚಿನ ನಾಯಕಿಯೂ ಆಗಿದ್ದರು.
ಡಾ.ರಾಜ್ ಕುಮಾರ್ ಅವರ ಜೊತೆ 'ಹಾಲು ಜೇನು'.. 'ಭಾಗ್ಯದ ಲಕ್ಷ್ಮೀ ಬಾರಮ್ಮ'.. 'ಅನುರಾಗ ಅರಳಿತು'.. 'ಶ್ರುತಿ ಸೇರಿದಾಗ'.. 'ಜೀವನ ಚೈತ್ರ'.. 'ಆಕಸ್ಮಿಕ'.. 'ಒಡ ಹುಟ್ಟಿದವರು'.. ಹೀಗೆ ಒಂದಾದ ಮೇಲೊಂದು ಚಿತ್ರಗಳ ಮೂಲಕ ಜನ ಮನ ಗೆದ್ದ ಮಾಧವಿ, ಸಾಹಸಸಿಂಹ ಡಾ.ವಿಷ್ಣುವರ್ಧನ್.. ಅನಂತ್ ನಾಗ್.. ರೆಬಲ್ ಸ್ಟಾರ್ ಅಂಬರೀಶ್ ಜೊತೆ ಕೂಡ ತೆರೆ ಹಂಚಿಕೊಂಡಿದ್ದರು.

ಬಾಲಿವುಡ್ ಶೆಹನ್ ಷಾ ಅಮಿತಾಬ್ ಬಚ್ಚನ್ ವೃತ್ತಿ ಬದುಕಿನ ಮೈಲಿಗಲ್ಲಿನಲ್ಲಿ ಒಂದಾದ 'ಅಗ್ನಿಪಥ್' ಚಿತ್ರದಲ್ಲಿ ಕೂಡ ಮಾಧವಿ ಅಭಿನಯಿಸಿದ್ದರು. ರಜಿನಿಕಾಂತ್ ಜೊತೆ ತಿಲ್ಲು ಮುಲ್ಲು ಚಿತ್ರದಲ್ಲಿ ನಟಿಸಿದ್ದರು. ಚಿರಂಜೀವಿ ಮೋಹನ್ ಲಾಲ್, ಮಮ್ಮುಟ್ಟಿ ಜೊತೆ ಕೂಡ ತೆರೆ ಹಂಚಿಕೊಂಡಿದ್ದರು. ತಮ್ಮ ಅದ್ಭುತ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಅಷ್ಟೇ ಅಲ್ಲದೇ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು ಮಾಧವಿ.
ಹೀಗೆ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದಾಗ್ಲೇ ತಮ್ಮ ಧಾರ್ಮಿಕ ಗುರು ಸ್ವಾಮಿ ರಾಮ ಅವರ ನಿರ್ದೇಶನದಂತೆ ಅವರ ಅನುಯಾಯಿ, ಔಷಧೀಯ ವಸ್ತುಗಳ ಮಾರಾಟ ಉದ್ಯಮಿ ರಾಲ್ಫಾ ಶರ್ಮಾ ಜೊತೆ ಫೆಬ್ರುವರಿ 14-1996ರಂದು ದಿಢೀರನೇ ಮದುವೆಯಾಗುವ ಮೂಲಕ, ಚಿತ್ರರಂಗದಿಂದ ದೂರ ಸರಿದ ಮಾಧವಿ ಶರ್ಮಾ ಮತ್ತೆ ಮರಳಿ ಚಿತ್ರರಂಗದ ಕಡೆ ಬರಲಿಲ್ಲ. ಬದಲಿಗೆ ಮನೆ-ಗಂಡ-ಮಕ್ಕಳು ಎಂದು ದೂರದ ನ್ಯೂಜೆರ್ಸಿಯಲ್ಲಿ ಬ್ಯುಸಿಯಾದರು. ಸಂಸಾರದ ಜವಾಬ್ಧಾರಿಗಳನ್ನೂ ನಿರ್ವಹಿಸುತ್ತಾ ಹೋದರು.

ಇಂಥಾ ಮಾಧವಿ ತಮ್ಮ ಮುತ್ತಿನಂತ ಮೂರು ಮಕ್ಕಳ ಜೊತೆ ಸದ್ಯಕ್ಕೆ ಸ್ಫೇನ್ ನಲ್ಲಿ ಬೀಡು ಬಿಟ್ಟಿದ್ದಾರೆ. ಕೃತಿಯ ಸೊಬಗನ್ನು ಕಣ್ತುಂಬಿಕೊಂಡಿದ್ದಾರೆ. ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಕುಟುಂಬದ ಜೊತೆ ವೆಕೇಷನ್ ಎಂಜಾಯ್ ಮಾಡುತ್ತಿದ್ಧಾರೆ.
ಸದ್ಯಕ್ಕೆ ಮಾಧವಿ ಅವರ ಈ ಹಾಲಿಡೇಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಆ ಕಾಲದಲ್ಲಿ ಇವರ ಅಭಿನಯಕ್ಕೆ ಮನ ಸೋತ ಅಭಿಮಾನಿಗಳ ಕಣ್ಣರಳುವಂತೆ ಕೂಡ ಈ ಫೋಟೋಗಳು ಮಾಡಿವೆ. ಅಂದ್ಹಾಗೇ ಮಾಧವಿ ಮತ್ತು ರಾಲ್ಫಾ ಶರ್ಮಾ ಅವರ ಹಿರಿಯ ಮಗಳ ಹೆಸರು ಟಿಫಾನಿ ಗೌರಿಕಾ ಆದರೆ ಎರಡನೇ ಮಗಳ ಹೆಸರು ಪ್ರಿಸ್ಸಿಲ್ಲಾ ಅರ್ಪಣಾ. ಎವೆಲಿನ್ ದಿವ್ಯಾ ಈ ಜೋಡಿಯ ಕಿರಿ ಮಗಳು.

ಉಳಿದಂತೆ ಚಿತ್ರರಂಗದಿಂದ ದೂರ ಇರುವ ಮಾಧವಿ, ಆಧ್ಯಾತ್ಮದತ್ತ ವಾಲಿದ್ದಾರೆ. ಇನ್ನೂ ಹಿಂದೊಮ್ಮೆ ಮತ್ತೆ ಚಿತ್ರರಂಗಕ್ಕೆ ನೀವು ಮರಳುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ, ತಾನು ಮತ್ತೆ ಚಿತ್ರರಂಗಕ್ಕೆ ಮರಳಿ ಬರಲ್ಲ ಎನ್ನುವ ಮಾತುಗಳನ್ನು ಕೂಡ ಮಾಧವಿ ಹೇಳಿದ್ದರು.



Click it and Unblock the Notifications











